ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಪ್ರತಿಭಟನೆ- ಸರಕಾರದ ಮೇಲೆ ಒತ್ತಡ ಹೇರಲು ಶಾಸಕರಿಗೆ ಮನವಿ ಸಲ್ಲಿಕೆ

Last Updated 31 ಡಿಸೆಂಬರ್ 2021, 7:07 IST
ಅಕ್ಷರ ಗಾತ್ರ

ಚಿಂತಾಮಣಿ: ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಜಾರಿ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸರ್ಕಾರಿ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದ ಬಳಿ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಜಮಾವಣೆಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ತಹಶೀಲ್ದಾರ್ ಹನುಮಂತರಾಯಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಖಾಸಗಿ ಬಸ್ ನಿಲ್ದಾಣ ರಸ್ತೆ, ಪಾಲಿಟೆಕ್ನಿಕ್ ರಸ್ತೆ, ಗಜಾನನ ವೃತ್ತ, ಎಂ.ಜಿ.ರಸ್ತೆ, ಚೇಳೂರು ವೃತ್ತ, ಸರ್ಕಾರಿ ಬಸ್ ನಿಲ್ದಾಣದ ರಸ್ತೆ, ಬೆಂಗಳೂರು ವೃತ್ತ, ಜೋಡಿ ರಸ್ತೆಯ ಮೂಲಕ ತಾಲ್ಲೂಕು ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜನಾರ್ಧನರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ವೇತನ ಮತ್ತು ಭತ್ಯೆಗಳಲ್ಲಿ ವ್ಯತ್ಯಾಸವಿದೆ. ತುಟ್ಟಿಭತ್ಯೆ ಮಂಜೂರು ಮಾಡುವಲ್ಲೂ ತಾರತಮ್ಯ ಇದೆ. ಮನೆ ಬಾಡಿಗೆ ಭತ್ಯೆಯಲ್ಲೂ ವ್ಯತ್ಯಾಸವಿದೆ. ಒಂದೇ ಸ್ಥಳದಲ್ಲಿ ಒಂದೇ ಕೆಲಸವನ್ನು ಮಾಡುವ ನೌಕರರ ನಡುವೆ ವೇತನ ವ್ಯತ್ಯಾಸ ನೌಕರರ ಅಸಮಧಾನಕ್ಕೆ ಕಾರಣವಾಗಿದೆ ಎಂದರು.

ದೇಶದ 25 ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಯಥಾವತ್ತಾಗಿ ರಾಜ್ಯ ಸರ್ಕಾರಗಳು ಜಾರಿಗೊಳಿಸಿವೆ. ರಾಜ್ಯದಲ್ಲಿ ನ್ಯಾಯಾಲಯಗಳ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯನ್ನು 2006ರಿಂದ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ ನೀಡಲಾಗಿದೆ. ‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವದಡಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರದ ವೇತನ, ಭತ್ಯೆಯನ್ನು ಜುಲೈ 2022ರ ಒಳಗಾಗಿ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.

ನೂತನ ಪಿಂಚಣಿ ಯೋಜನೆ ನೌಕರರಿಗೆ ಮಾರಕವಾಗಿದೆ. ರಾಜ್ಯದಲ್ಲಿ ಎನ್‌ಪಿಎಸ್‌ಗೆ ಒಳಪಡುವ 2.40 ಲಕ್ಷ ನೌಕರರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು. ಹಿಂದಿನಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹುದ್ದೆಗಳ ಮಂಜೂರಾತಿ ಪ್ರಮಾಣವೇ ಕಡಿಮೆಯಾಗಿದೆ. ಪ್ರಸ್ತುತ ಸುಮಾರು 7.79 ಲಕ್ಷ ಹುದ್ದೆಗಳು ಮಂಜೂರಾಗಿದ್ದು 5 ಲಕ್ಷ ಹುದ್ದೆಗಳ ನೌಕರರು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಸರ್ಕಾರಿ ಯೋಜನೆಗಳನ್ನು ನಿಗದಿತ ಕಾಲಾವಧಿಯಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಷ್ಟಸಾಧ್ಯವಾಗಿದೆ. 2.69 ಲಕ್ಷ ಹುದ್ದೆಗಳು ಖಾಲಿ ಇವೆ. ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಮಂಜೂರಾತಿ ಹೆಚ್ಚಿಸಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.

ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿಯನ್ನು ಶಾಸಕ ಎಂ.ಕೃಷ್ಣಾರೆಡ್ಡಿಗೆ ಸಲ್ಲಿಸಿದರು. ಶಾಸಕ ಎಂ.ಕೃಷ್ಣಾರೆಡ್ಡಿ ಮನವಿ ಪತ್ರವನ್ನು ಸ್ವೀಕರಿಸಿ, ಬೇಡಿಕೆಗಳ ಈಡೇರಿಕೆ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕರ ಗಮನಕ್ಕೆ ತಂದು ಮುಂಬರುವ ಆಧಿವೇಶನದಲ್ಲಿ ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT