ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ; ಜನರ ಕೈಗೆ ಸಿಗದ ಪಿಡಿಒಗಳು

ನಮ್ಮ ಜನ ನಮ್ಮ ಧ್ವನಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 30 ಮೇ 2022, 10:11 IST
ಅಕ್ಷರ ಗಾತ್ರ

ಚಿಂತಾಮಣಿ: ‘ಇವತ್ತು ಪಿಡಿಒ ಇಲ್ಲ. ನಾಳೆ ಬನ್ನಿ. ಮೀಟಿಂಗ್‌ಗೆ ಹೋಗಿದ್ದಾರೆ, ತಾಲ್ಲೂಕು ಕಚೇರಿಗೆ ಹೋಗಿದ್ದಾರೆ ಇನ್ನೊಂದು ದಿನ ಬನ್ನಿ’–ಇದು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಒಳಹೊಕ್ಕು ‘ಪಿಡಿಒ ಇದ್ದಾರಾ’ ಎಂದು ಸಿಬ್ಬಂದಿಯನ್ನು ಕೇಳಿದರೆ ದೊರೆಯುವ ಸಿದ್ಧ ಉತ್ತರ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಯಾವಾಗ ಕಚೇರಿಗೆ ಬರುವರು ಯಾವಾಗ ಹೋಗುವರು ಗೊತ್ತೇ ಆಗುವುದಿಲ್ಲ–ಪಂಚಾಯಿತಿಗಳಿಗೆ ಕೆಲಸಕ್ಕಾಗಿ ಬಂದು ಪಿಡಿಒ ಇಲ್ಲ ಎಂದು ತಿಳಿದು ಹೀಗೆ ಜನರು ಗೊಣಗುತ್ತ ಹೋಗುವರು. ಇದು ತಾಲ್ಲೂಕಿನಲ್ಲಿ ಸಾಮಾನ್ಯ ಎನ್ನುವಂತಿದೆ.

ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಪಿಡಿಒಗಳು ಕಚೇರಿಗಳಲ್ಲಿ ಜನರ ಕೈಗೆ ಸಿಗುವುದು ದುಸ್ತರವಾಗಿದೆ. ವಿವಿಧ ದಾಖಲೆ ಮತ್ತು ಸರ್ಕಾರಿ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಪಿಡಿಒಗಳು ಮಾತ್ರ ಕೈಗೆ ಸಿಗುತ್ತಿಲ್ಲ ಎಂಬುದು ಜನರ ಆರೋಪ ಮತ್ತು ಆಕ್ರೋಶ.

ಪಂಚಾಯಿತಿ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ಪಿಡಿಒ ಹೊಣೆ. ಪಿಡಿಒ ಸ್ಥಳೀಯ ಮಟ್ಟದ ಪ್ರಮುಖ ಅಧಿಕಾರಿ. ‌ಬಹುತೇಕ ಅಭಿವೃದ್ಧಿ ಯೋಜನೆಗಳು ಇವರ ಮೂಲಕವೇ ಅನುಷ್ಠಾನಗೊಳ್ಳುತ್ತವೆ.

ತಾಲ್ಲೂಕಿನಲ್ಲಿ 35 ಗ್ರಾಮ ಪಂಚಾಯಿತಿಗಳಿವೆ. ಇವುಗಳಲ್ಲಿ 28 ಪಂಚಾಯಿತಿಗಳಲ್ಲಿ ಪಿಡಿಒಗಳು ಇದ್ದಾರೆ. ಇವರಲ್ಲಿ ಕೆಲವರು ಮಾತ್ರ ಬೇರೆ ತಾಲ್ಲೂಕಿಗೂ ತಾತ್ಕಾಲಿಕ ನಿಯೋಜನೆಗೊಂಡಿದ್ದಾರೆ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಹುತೇಕ ಕಡೆ ಉತ್ತಮ ಸೌಲಭ್ಯಗಳ ವ್ಯವಸ್ಥೆ ಇದೆ. ಬಹುತೇಕ ಪಂಚಾಯಿತಿಗಳು ಸುಸಜ್ಜಿತ ಕಚೇರಿ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರಗಳನ್ನು ಹೊಂದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೋಟ್ಯಂತರ ಅನುದಾನ ಪಂಚಾಯಿತಿಗಳಿಗೆ ಬರುತ್ತಿದೆ.

ಮನೆಕಂದಾಯ ವಸೂಲಿ, ಸೂರಿಲ್ಲದ ಜನರನ್ನು ಗುರುತಿಸಿ ಅವರಿಗೆ ಸೌಲಭ್ಯ, ಅಂಗನವಾಡಿ, ಶಾಲೆಗಳಿಗೆ ಸೌಲಭ್ಯ, ರಸ್ತೆ, ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳು ಸೌಲಭ್ಯ,ನರೇಗಾ ಅನುಷ್ಠಾನ, ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದವರ್ಗ, ಅಲ್ಪಸಂಖ್ಯಾತರಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಅನುಷ್ಠಾನ ಹೀಗೆ ವಿವಿಧ ಜವಾಬ್ದಾರಿಗಳನ್ನು ಪಿಡಿಒಗಳು ನಿರ್ವಹಿಸಬೇಕು. ಆದರೆ ಇವರ ಗೈರು ಹಾಜರಿ ಈ ಕೆಲಸಗಳನ್ನು ಕುಂಠಿತಗೊಳಿಸಿದೆ ಎನ್ನುವ ಆರೋಪ ಜನರಿಂದ ಕೇಳಿ ಬರುತ್ತಿದೆ.

ಸರ್ಕಾರಿ ನಿಯಮದಂತೆ ಪಿಡಿಒಗಳು ಪಂಚಾಯಿತಿ ಕೇಂದ್ರದಲ್ಲಿ ವಾಸವಿರಬೇಕು. ಆದರೆ ಬಹಳಷ್ಟು ಮಂದಿ ಕೇಂದ್ರ ಸ್ಥಾನಗಳಲ್ಲಿ ಇರುವುದಿಲ್ಲ. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಬಂದು ಹೋಗುವುದರಿಂದ ಗ್ರಾಮೀಣ ಜನರು ಎಷ್ಟು ಬಾರಿ ಗ್ರಾ.ಪಂ.ಕಚೇರಿಗಳಿಗೆ ತೆರಳಿದರೂ ಕೈಗೆ ಸಿಗುವುದಿಲ್ಲ. ಮೀಟಿಂಗ್ ಗೆ ಹೋಗಿದ್ದಾರೆ, ತಾ.ಪಂ, ಜಿ.ಪಂ ಕಚೇರಿಗೆ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ದೊರೆಯುತ್ತದೆ. ಫೋನ್ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಜನರು ದೂರುವರು.

ಪಿಡಿಒಗಳು ಗ್ರಾಮೀಣ ಭಾಗದ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಗ್ರಾಮಗಳಲ್ಲಿ ಉತ್ತಮ ರಸ್ತೆ, ಚರಂಡಿ, ಬೀದಿ ದೀಪ ಮರೀಚಿಕೆಯಾಗಿವೆ. ಚರಂಡಿಗಳು ಕಸಕಡ್ಡಿಯಿಂದ ತುಂಬಿವೆ. ಚರಂಡಿ ನೀರು ರಸ್ತೆಯ ಮೇಲೆ ಹರಿದು ದುರ್ವಾಸನೆ ಬೀರುತ್ತಿದ್ದರೂ ಸ್ವಚ್ಛತೆ ಕಡೆ ಗಮನ ಹರಿಸುವುದಿಲ್ಲ. ಬೀದಿ ದೀಪಗಳು ಕೆಟ್ಟರೆ ತಿಂಗಳುಗಟ್ಟಲೆ ಸರಿಪಡಿಸುವುದಿಲ್ಲ ಎಂದು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುನಿಯಪ್ಪ ಆರೋಪಿಸುವರು.

ಕಾಮಗಾರಿ, ಫಲಾನುಭವಿಗಳ ಆಯ್ಕೆ ಸೇರಿದಂತೆ ಪ್ರತಿಯೊಂದಕ್ಕೂಪಂಚಾಯಿತಿಯಲ್ಲಿ ರಾಜಕೀಯ ಒತ್ತಡ ಇರುತ್ತದೆ.ಪಕ್ಷ ಮತ್ತು ಗುಂಪುಗಳ ವ್ಯವಸ್ಥೆಯಲ್ಲಿ ಕೆಲಸ ಮಾಡಿದರೂ ಕಷ್ಟ ಮಾಡದಿದ್ದರೂ ಕಷ್ಟ. ಕಾನೂನಿನಂತೆ ಕೆಲಸ ಮಾಡಲು ಅವಕಾಶವೇ ನೀಡುವುದಿಲ್ಲ. ಕಾನೂನಿಗೆ ವಿರುದ್ಧವಾದ ಕೆಲಸಗಳಿಗಾಗಿ ಜನಪ್ರತಿನಿಧಿಗಳಿಂದ ಒತ್ತಡ ತರುತ್ತಾರೆ. ಕಾನೂನು ಬದ್ಧವಾಗಿ ಕೆಲಸ ಮಾಡಿದರೆ, ಒತ್ತುವರಿ ತೆರವುಗೊಳಿಸಿ ಸರ್ಕಾರಿ ಆಸ್ತಿಗಳನ್ನು ರಕ್ಷಿಸಿದರೆ ನಾಯಕರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡಿಸುತ್ತಾರೆ. ಸಿಕ್ಕಿ ಹಾಕಿಕೊಂಡರೆ ಮಾಡಿಸಿದವರು ನಮ್ಮ ನೆರವಿಗೆ ಬರುವುದಿಲ್ಲ. ನಾವು ತೊಂದರೆ ಅನುಭವಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಸಮಸ್ಯೆ ಹೇಳಿಕೊಳ್ಳುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳು ಪಂಚಾಯಿತಿ ಮೂಲಕವೇ ಅನುಷ್ಠಾನ ಗೊಳ್ಳುತ್ತವೆ. ಬಾಪೂಜಿ ಸೇವಾ ಕೇಂದ್ರಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಎಲ್ಲ ಯೋಜನೆ ಮಾಹಿತಿ, ಫಲಾನುಭವಿಗಳ ಆಯ್ಕೆ ಎಲ್ಲ ಕಾರ್ಯಕ್ರಮಗಳನ್ನು ಗಣಕೀಕರಣಗೊಳಿಸಬೇಕು. ಆದರೆ ಅಗತ್ಯ ಸಿಬ್ಬಂದಿ ಮಾತ್ರ ನೀಡುವುದಿಲ್ಲ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿ ಇರುವುದಿಲ್ಲ. ಡಿ.ಇ.ಒ ಮಾತ್ರ ಇರುತ್ತಾರೆ. ಸಿಬ್ಬಂದಿ ಕೊರತೆ ಮತ್ತು ಒತ್ತಡಗಳಿಂದ ಕಾರ್ಯನಿರ್ವಹಿಸುವುದು ಸವಾಲಾಗಿದೆ ಎಂದು ನೋವು ತೋಡಿಕೊಂಡರು.

ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿ
ಪಿಡಿಒಗಳು ಒತ್ತಡಗಳಿಗೆ ಮಣಿಯದೆ ಜನಪರ ಕೆಲಸಗಳನ್ನು ಮಾಡಬೇಕು. ಗ್ರಾಮ ಸಭೆಯಲ್ಲಿ ಚರ್ಚೆ ನಡೆಸಿ ಅರ್ಹಫಲಾನುಭವಿಗೆ ಸರ್ಕಾರಿ ಸೌಲಭ್ಯಗಳನ್ನು ಮಂಜೂರು ಮಾಡಬೇಕು. ಪಂಚಾಯಿತಿ ಕೇಂದ್ರದಲ್ಲಿದ್ದು ಕಾರ್ಯನಿರ್ವಹಿಸಿದರೆ ಜನರಿಗೆ ಸ್ಪಂದಿಸಲು ಅನುಕೂಲ‌.
-ವಿಶ್ವನಾಥ್, ಕೈವಾರ

ಕಚೇರಿಗೆ ಅಲೆದಾಡಿಸುವುದು ಸಲ್ಲದು
ಪಿಡಿಒಗಳು ಜನರನ್ನು ಕಚೇರಿಗೆ ಅಲೆದಾಡಿಸಬಾರದು. ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸಬೇಕು. ಅರ್ಜಿಗಳನ್ನು ಪಡೆಯುವಾಗಲೇ ಅಗತ್ಯ ದಾಖಲೆಗಳ ಮಾಹಿತಿ ನೀಡಬೇಕು. ಪದೇ ಪದೇ ಒಂದೊಂದು ದಾಖಲೆ ಕೇಳಿ ತೊಂದರೆ ನೀಡಬಾರದು. ವಿವಿಧ ಸೇವೆಗಳನ್ನು ಪಡೆಯಲು ಅಗತ್ಯ ದಾಖಲೆಗಳನ್ನು ಕಚೇರಿ ನಾಮಫಲಕಗಳಲ್ಲಿ ಬರೆಸುವುದು ಉತ್ತಮ.
-ಸೀಕಲ್ ರಮಣಾರೆಡ್ಡಿ, ರೈತ ಮುಖಂಡ

ಎಲ್ಲರ ಮೇಲೆ ಆರೋಪ ಸರಿಯಲ್ಲ
ಕೆಲವು ಕಡೆ ಪಿಡಿಒಗಳು ಸಾಕಷ್ಟು ಒತ್ತಡಗಳ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಾರಾಸಗಟಾಗಿ ಆರೋಪ ಮಾಡುವುದು ಸರಿಯಲ್ಲ. ಕುಡಿಯುವ ನೀರು, ಕಲ್ಯಾಣಿಗಳ ಪುನರುಜ್ಜೀವನ, ಸ್ಥಳೀಯ ಶಾಲೆ, ಅಂಗನವಾಡಿಗಳಿಗೆ ಸೌಲಭ್ಯಗಳು, ಜನಸಾಮಾನ್ಯರ ಕೆಲಸಗಳಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ.
-ಮಂಜುನಾಥ್, ಕುರುಟಹಳ್ಳಿ

ಸಿಬ್ಬಂದಿ ನೀಡುತ್ತಿಲ್ಲ
ಗ್ರಾಮಗಳಲ್ಲಿ ನೈರ್ಮಲ್ಯ, ಕರ ವಸೂಲಿ, ರಸ್ತೆ, ನೀರು, ಬೀದಿ ದೀಪಗಳ ನಿರ್ವಹಣೆ, ಜನರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವುದು, ಅಂಗನವಾಡಿ, ಶಾಲೆ, ಶಿಕ್ಷಣ ಪಡೆ, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹೀಗೆ ಹಲವು ಜವಾಬ್ದಾರಿಗಳನ್ನು ಪಿಡಿಒಗೆ ನೀಡಲಾಗಿದೆ. ಅದಕ್ಕೆ ಅನುಗುಣವಾಗಿ ಸಿಬ್ಬಂದಿಯನ್ನು ನೀಡುತ್ತಿಲ್ಲ. ಅತ್ಯುತ್ತಮ ಸೇವೆ ಒದಗಿಸಲು ಅಗತ್ಯ ಸಿಬ್ಬಂದಿ ನೀಡಬೇಕು.
-ಹೆಸರು ಹೇಳಲಿಚ್ಛಿಸದ ಪಿಡಿಒ

ಅಂಕಿ-ಅಂಶಗಳು
400:ಚಿಂತಾಮಣಿ ತಾಲ್ಲೂಕಿನಲ್ಲಿ ಗ್ರಾಮಗಳ ಸಂಖ್ಯೆ
35:ಚಿಂತಾಮಣಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು
28:ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ
7:ಖಾಲಿಯಿರುವ ಪಿಡಿಒ ಹುದ್ದೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT