ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಜಿಲ್ಲಾಧಿಕಾರಿಗೆ ಕರ್ನಾಟಕ ರೈತ ಸೇನೆ ಪದಾಧಿಕಾರಿಗಳ ಮನವಿ
Last Updated 14 ಸೆಪ್ಟೆಂಬರ್ 2020, 10:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು, ರೈತರಿಗೆ ವಂಚಿಸಿದ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಕೆ.ಇ. ಪ್ರಸನ್ನಕುಮಾರ್ ಅವರನ್ನು ಅಮಾನತ್ತಿನಲ್ಲಿಟ್ಟು, ನಷ್ಟದ ಹಣ ವಸೂಲಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸೇನೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸೇನೆಯ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ, ‘ಪ್ರಸನ್ನಕುಮಾರ್ ಅವರು 2005 ರಿಂದ 2008ರ ವರೆಗೆ ಗೌರಿಬಿದನೂರಿನಲ್ಲಿ, 2011 ರಿಂದ 2014ರರ ವರೆಗೆ ಬಾಗೇಪಲ್ಲಿಯಲ್ಲಿ, 2014 ರಿಂದ 2018ರ ವರೆಗೆ ಚಿಂತಾಮಣಿಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು’ ಎಂದು ಹೇಳಿದರು.

‘ಈ ಅವಧಿಯಲ್ಲಿ ಸರ್ಕಾರದಿಂದ ರೈತರಿಗೆ ನೀಡಿರುವ ಸಾಲ, ಪ್ರೋತ್ಸಾಹ ಧನ, ಸಬ್ಸಿಡಿ, ನರೇಗಾ, ಕೃಷಿಭಾಗ್ಯ, ಇಂಗುಗುಂಡಿ ನಿರ್ಮಾಣ ಇತರೆ ಸೌಲಭ್ಯಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ರೈತರಲ್ಲದವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದರಲ್ಲೂ ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ರೈತರಿಗೆ ಸೇರಬೇಕಾದ ಹಣ ಲಪಟಾಯಿಸಲಾಗಿದೆ’ ಎಂದು ಆರೋಪಿಸಿದರು.

‘ಸರ್ಕಾರದಿಂದ ಬಿಡುಗಡೆಯಾಗಿರುವ ವಿವಿಧ ಯೋಜನೆಗಳಿಂದ ರೈತರಿಗೆ ಬಿಡುಗಡೆಯಾಗಿದ್ದ ಸಬ್ಸಿಡಿ, ಸಹಾಯಧನ ಹಣವನ್ನು ರೈತರಿಗೆ ತಲುಪಿಸದೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಕ್ರಮಗಳ ಕಾರಣಕ್ಕೆ ಎರಡು ಬಾರಿ ಅಮಾನತುಗೊಂಡಿದ್ದರು’ ಎಂದು ತಿಳಿಸಿದರು.

‘ಪ್ರಸನ್ನಕುಮಾರ್ ಅವರು ದುರಾಡಳಿತದಿಂದ ಬೇಸತ್ತು ರೈತರು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಪ್ಪಿತಸ್ಥರ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ಇದರಲ್ಲಿ ಹಲವು ಅಧಿಕಾರಿಗಳ ಪಾತ್ರ ಇದೆ ಅನುಮಾನ ಇದೆ’ ಎಂದರು.

‘ಪ್ರಸನ್ನಕುಮಾರ್ ಅವರು ಇಲಾಖೆಯಿಂದ ಬರುವ ವೇತನಕ್ಕಿಂತಲೂ ಹೆಚ್ಚು ಆಸ್ತಿ ಗಳಿಸಿದ್ದಾರೆ. ಬೆಂಗಳೂರು, ಕೋಲಾರ, ಮಾಲೂರು, ಹೊಸಕೋಟೆಯಲ್ಲಿ ಬೇನಾಮಿ ಹೆಸರುಗಳಲ್ಲಿ ಸಾಕಷ್ಟು ಆಸ್ತಿಗಳನ್ನು ಹೊಂದಿದ್ದಾರೆ. ಕೂಡಲೇ ಅವರ ವಿರುದ್ಧ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಸೇನೆಯ ಕೋಲಾರ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಉಪಾಧ್ಯಕ್ಷ ನರಸಾಪುರ ಎಂ.ವಿ.ಶ್ರೀಧರ್, ವೆಂಕಟಾಚಲಪತಿ ಕಾಮಧೇನಹಳ್ಳಿ, ಸಂಚಾಲಕರಾದ ಮಕ್ಸೂದ್‌ ಪಾಷಾ, ಇಜಾಜ್ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT