ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಸತ್ಯಸಾಯಿ ಬಡಾವಣೆಗಿಲ್ಲ ರಸ್ತೆ

ಕುಡಿಯುವ ನೀರು, ಬೀದಿದೀಪ, ಶೌಚಾಲಯ ಇಲ್ಲದೆ ಸಂಕಷ್ಟದಲ್ಲಿ ನಿವಾಸಿಗಳು
Last Updated 9 ಸೆಪ್ಟೆಂಬರ್ 2021, 4:26 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕಾಲುವೆ ದಾಟಲು ಮಹಿಳೆ-ಮಕ್ಕಳ ಹಾಗೂ ವೃದ್ಧರ ಪರದಾಟ, ಗುಂಡಿಗಳದೇ ಕಾರುಬಾರು, ಕೆಮ್ಮಣ್ಣಿನಿಂದ ಕೂಡಿದ ರಸ್ತೆಗಳು, ಚರಂಡಿಗಳು ಇಲ್ಲದೇ ರಸ್ತೆಗೆ ಹರಿಯುವ ಕಲುಷಿತ ನೀರು... ಹೀಗೆ ಹತ್ತಾರು ಸಮಸ್ಯೆಗಳು ಹೊಂದಿರುವ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರ ಸತ್ಯಸಾಯಿ ಬಡಾವಣೆ (ಶ್ರೀರಾಮರೆಡ್ಡಿ ಕಾಲೋನಿ)ಯ ನಿವಾಸಿಗಳು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ- 7 ರ ಬೈಪಾಸ್ ರಸ್ತೆಯ ಮೂಲಕ ಸತ್ಯಸಾಯಿ ನಗರಕ್ಕೆ 2 ಕಿ ಮೀ ನಷ್ಟು ದೂರ ಇದೆ. 2010 ರಲ್ಲಿ 9 ಎಕರೆ ಪ್ರದೇಶದಲ್ಲಿ 389 ನಿವೇಶನರಹಿತರಿಗೆ ನಿವೇಶನಗಳನ್ನು ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಸತಿರಹಿತರಿಗೆ ನಿವೇಶನಗಳನ್ನು ಮಂಜೂರು ಮಾಡಿಸಿದ್ದರು. ಜಮೀನು ಪರಗೋಡು ವ್ಯಾಪ್ತಿಗೆ ಸೇರಿದೆ. ಪುರಸಭೆಯಿಂದ ನಿವೇಶನ ಹಂಚಲಾಗಿದೆ. ಬಡವಣೆಯ ನಿವಾಸಿಗಳು ಪರಗೋಡು ಗ್ರಾಮ ಪಂಚಾಯಿತಿಗೆ ಕಂದಾಯ, ನೀರಿನ ಬಿಲ್ ಕಟ್ಟುತ್ತಿದ್ದಾರೆ.

ನಿವೇಶನಗಳನ್ನು ಹಂಚಿಕೆ ಮಾಡಿರುವ ಪುರಸಭೆಯವರು ಬಡಾವಣೆಗೆ ರಸ್ತೆ, ಕುಡಿಯುವ ನೀರು, ಬೀದಿದೀಪ, ಶೌಚಾಲಯ, ಮನೆ ಬಿಲ್‌ಗಳನ್ನು ನೀಡದೇ ಇರುವುದರಿಂದ ಬಡಾವಣೆಯ ನಿವಾಸಿಗಳು ತೊಂದರೆ ಅನುಭವಿಸುವಂತೆ ಆಗಿದೆ.

ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮನೆ ಕಟ್ಟಿರುವುದಕ್ಕೆ ಪುರಸಭೆಗೆ ಬಿಲ್ ಸಲ್ಲಿಸಿದ್ದಾರೆ. ಆದರೆ ಇನ್ನೂ ಹಣ ಮಂಜೂರಾಗಿಲ್ಲ. ಕೆಲವರು ಸಾಲ ‌ಮಾಡಿ ಮನೆ ಕಟ್ಟಿದ್ದಾರೆ. ಅನುದಾನಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಪುರಸಭೆ ಮಂಜೂರಾತಿಗೆ ಆಸಕ್ತಿ ತೋರುತ್ತಿಲ್ಲ. ಕೆಲವರು ಪಾಯ, ಅರ್ಧ ಮನೆಗಳನ್ನು, ಶೌಚಾಲಯಗಳನ್ನು ಕಟ್ಟಿ ಹಣ ಇಲ್ಲದೇ ಅನುದಾನ ಸಿಗದೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿಯೇ ಇದ್ದಾರೆ.

ಮನೆಗಳಿಗೆ ಸಮರ್ಪಕ ಪೈಪ್‌ಲೈನ್ ಹಾಕಲು ಆಗದೇ, ನೀರು ಪೂರೈಕೆ ಆಗುತ್ತಿಲ್ಲ. ಬಡಾವಣೆಯಲ್ಲಿ ಸಮರ್ಪಕವಾಗಿ ರಸ್ತೆ ಮಾಡಿಲ್ಲ. ಮಳೆ ಬಂತೆಂದರೆ ರಸ್ತೆಗಳೆಲ್ಲಾ ಕೆಮ್ಮಣ್ಣಿನಿಂದ ಕೂಡಿರುತ್ತದೆ. ಚರಂಡಿ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಕಲುಷಿತ ನೀರು ಎಲ್ಲೆಂದರಲ್ಲಿ ಹರಿಯುತ್ತದೆ.

ಬಡಾವಣೆಯಲ್ಲಿ ಕೆಲವರಿಗೆ ಕಾಲುವೆ ಪಕ್ಕದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕಾಲುವೆಗೆ ಮೇಲುಸೇತುವೆ ಇಲ್ಲ. ಕಾಲುವೆ ಇಳಿದು ಮೇಲೆ ಹತ್ತಲು ಮಹಿಳೆಯರು, ಮಕ್ಕಳು, ವೃದ್ಧರು ನಡೆಯಲು ತೊಂದರೆಯಾಗಿದೆ ಎಂದು ಬಡಾವಣೆಯ ನಿವಾಸಿಗಳಾದ ಸುಬ್ಬಮ್ಮ, ರಾಧಮ್ಮ, ವರಲಕ್ಷ್ಮಿ, ಅಲುವೇಲಮ್ಮ ಆರೋಪಿಸಿದರು.

ಮಗಳ ಸಾವಿಗೆ ಯಾರು ಹೊಣೆ?

‘ಕಾಲುವೆ ಪಕ್ಕದಲ್ಲಿ ನಿವೇಶನ ಹಂಚಿಕೆ ಆಗಿದೆ. ಕಾಲುವೆ ಇಳಿಯಲು, ಹತ್ತಲು ತೊಂದರೆ ಆಗಿದೆ. ನನ್ನ ಮಗಳು ನಳಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದಾಳೆ.ಜೂನ್ 6 ರಂದು ಕಾಲುವೆ ಇಳಿಯುವಾಗ ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಸಾವಿಗೆ ಯಾರು ಹೊಣೆ? ಪುರಸಭೆಯವರಿಗೆ, ಶಾಸಕರಿಗೆ, ಅನೇಕ ಭಾರಿ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿಗಳು ನಮ್ಮ ಕಷ್ಟಗಳನ್ನು ಆಲಿಸಿಲ್ಲ. ಮಗಳು ಕಳೆದುಕೊಂಡ ವ್ಯಥೆ ಇಂದಿಗೂ ಮರೆಯುವಂತಿಲ್ಲ’ ಎಂದು ಮಗಳನ್ನು ಕಳೆದುಕೊಂಡ ಲಕ್ಷ್ಮೀದೇವಿ ಕಣ್ಣೀರಾದರು.

ಸೌಲಭ್ಯಕ್ಕೆ ಕ್ರಮ

ಕಳೆದ ತಿಂಗಳಷ್ಟೇ ಪುರಸಭೆ ಮುಖ್ಯಾಧಿಕಾರಿಯಾಗಿ ಬಂದಿದ್ದೇನೆ. ಕುಡಿಯುವ ನೀರು, ರಸ್ತೆ, ಚರಂಡಿ, ಮೇಲುಸೇತುವೆ, ಸ್ವಚ್ಛತೆ ಮಾಡಿಸಬೇಕು ಎಂದು ಸತ್ಯಸಾಯಿ ನಗರ ಬಡಾವಣೆಯ ನಿವಾಸಿಗಳು ಮನವಿ ನೀಡಿದ್ದಾರೆ. ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಆಡಳಿತ ಸದಸ್ಯರ ಜೊತೆ ಚರ್ಚಿಸಲಾಗುವುದು. ಬಡಾವಣೆಗೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್ ತಿಳಿಸಿದರು.

ಪೂರ್ವಾಲೋಚನೆ ಇಲ್ಲದೇ ಬಡಾವಣೆ

ಬಡಾವಣೆ ಮಾಡುವ ಮುನ್ನಾ ಕನಿಷ್ಠ ಮೂಲ ಸೌಲಭ್ಯಗಳು ಕಲ್ಪಿಸಬೇಕು. ನಿವೇಶನ, ಉದ್ಯಾನ, ಶೌಚಗುಂಡಿ, ರಸ್ತೆ, ಚರಂಡಿಗಳನ್ನು ಮಾಡಬೇಕು. ಏನೂ ಮಾಡದೇ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಯಾವುದೇ ಪೂರ್ವಾಲೋಚನೆ ಇಲ್ಲದೇ, ಬಡಾವಣೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಬಡಾವಣೆಯ ನಿವಾಸಿ ಮಂಜುಳಮ್ಮ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT