ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರಿ ಶಾಲೆ ಸಾಂಸ್ಕೃತಿಕ ಗುಡಿ ಇದ್ದಂತೆ’

ಗೌಡನಹಳ್ಳಿ: ಸರ್ಕಾರಿ ಶಾಲಾ ವಾಹನಕ್ಕೆ ಹಸಿರು ನಿಶಾನೆ
Last Updated 12 ಜೂನ್ 2022, 6:03 IST
ಅಕ್ಷರ ಗಾತ್ರ

ಗೌಡನಹಳ್ಳಿ (ಶಿಡ್ಲಘಟ್ಟ ತಾಲ್ಲೂಕು): ‘ಸರ್ಕಾರಿ ಶಾಲೆಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೇಂದ್ರಗಳಿದ್ದಂತೆ. ಭವಿಷ್ಯದ ಜನಾಂಗವನ್ನು ಸರಿದಾರಿಗೆ ತರುವ ಸಾಂಸ್ಕೃತಿಕ ಗುಡಿಗಳಿದ್ದಂತೆ. ಇವು ಕೇವಲ ವಿದ್ಯಾ ದೇಗುಲಗಳಲ್ಲ. ಮುಂದಿನ ಜನಾಂಗದ ಸಾಮಾಜಿಕ ಸ್ಥಿತಿ ರೂಪಿಸುವ ತಾಣಗಳಾಗಿವೆ’ ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ತಿಳಿಸಿದರು.

ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಪ್ರಾರಂಭೋತ್ಸವ, ಶಾಲಾ ವಾಹನಕ್ಕೆ ಹಸಿರು ನಿಶಾನೆ ಹಾಗೂ ಗೌಡನಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಇಲ್ಲ. ಸಮರ್ಥ ಶಿಕ್ಷಕರಿದ್ದಾರೆ. ಯುಪಿಎಸ್­ಸಿ ಪಾಸಾಗಿರುವವರಲ್ಲಿ ಹಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದ್ದಾರೆ. ಅದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರೂ ಇದ್ದಾರೆ ಎಂದರು.

ಕನ್ನಡ ಶಾಲೆಗಳು ಯಾವುದೇ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಮಕ್ಕಳನ್ನು ಪೋಷಕರು ಸರ್ಕಾರಿ ಶಾಲೆಗಳಿಗೆ ದಾಖಲಿಸುವುದಲ್ಲದೆ ಅವುಗಳ ಶ್ರೇಯೋಭಿವೃದ್ಧಿಗೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿಮಾಜಿ ಸದಸ್ಯೆ ಸುನೀತಾ ಶ್ರೀನಿವಾಸರೆಡ್ಡಿ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಈ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಪೋಷಕರು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಸೇರಿಸುವುದರ ಬದಲು ಇಲ್ಲಿಗೆ ಸೇರಿಸಬೇಕು. ಎಲ್‌ಕೆಜಿ ಮತ್ತು ಯುಕೆಜಿ ಕೂಡ ಪ್ರಾರಂಭಿಸಿರುವುದರಿಂದ ಮಕ್ಕಳು ಈ ಸುಂದರ ಪರಿಸರದಲ್ಲಿ ಆಡಿ, ನಲಿಯುತ್ತಾ ಕಲಿಯಲಿ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯಶ್ರೀ ಮಂಜುನಾಥ್ ಮಾತನಾಡಿ, ನಮ್ಮ ಮೊದಲ ಆದ್ಯತೆ ಸರ್ಕಾರಿ ಶಾಲೆಯಾಗಿದೆ. ಈ ಶಾಲೆಯ ಅಭಿವೃದ್ಧಿ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕೆ ಎಲ್ಲರೂ ಕೆಲಸ ಮಾಡೋಣ ಎಂದರು.

ಎಸ್.ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಮಾತನಾಡಿ, ‘ಇನ್ನಷ್ಟು ಸ್ನೇಹಿತರು ಹಾಗೂ ದಾನಿಗಳನ್ನು ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕರೆ ತರುತ್ತೇನೆ. ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಿ’ ಎಂದು ನುಡಿದರು.

ಹೊಸ ಶಾಲೆಯ ವಾಹನಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಶಾಲೆಯ ಗ್ರಂಥಾಲಯ, ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಕೋಣೆಗಳನ್ನು ಉದ್ಘಾಟಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಲಾಯಿತು. ಶಾಲಾ ವಾಹನದ ದಾನಿಗಳಾದ ಡಿ. ಮಂಜುನಾಥ್ ಮತ್ತು ಆಂಜಿನಪ್ಪ ಪುಟ್ಟು ಅವರನ್ನು ಸನ್ಮಾನಿಸಲಾಯಿತು.

ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಧರ್ಮೇಂದ್ರ, ನಾಗರಾಜ್, ಎಲುವಳ್ಳಿ ಜನಾರ್ದನ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್, ಶಿಕ್ಷಣ ಇಲಾಖೆಯ ತ್ಯಾಗರಾಜ್, ಆಂಜನೇಯ, ಭಾಸ್ಕರಗೌಡ, ಸುಬ್ಬಾರೆಡ್ಡಿ, ಸಿ.ಎಂ. ಮುನಿರಾಜು, ಪ್ರಭಾಕರ್, ಜಿ.ಎ. ನಾರಾಯಣಸ್ವಾಮಿ, ವಿ. ವೆಂಕಟರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಿಪತಿ, ಮುಖ್ಯಶಿಕ್ಷಕ ಎಂ. ದೇವರಾಜ್, ಶಿಕ್ಷಕರಾದ ಮಂಜುನಾಥ್, ಕೃಪಾ, ನಳಿನಾಕ್ಷಿ, ಗಜೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT