ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ | ಆಟೊಗಳಲ್ಲಿ ಜೀವ ಪಣಕ್ಕಿಟ್ಟು ಸಂಚಾರ

ವಿದ್ಯಾರ್ಥಿಗಳಿಗಿಲ್ಲ ಸಾರಿಗೆ ಸೌಲಭ್ಯ
Published 26 ಜೂನ್ 2024, 6:56 IST
Last Updated 26 ಜೂನ್ 2024, 6:56 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಕೆಲ ಭಾಗಗಳಲ್ಲಿ ಶಾಲಾ–ಕಾಲೇಜುಗಳಿಗೆ ತೆರಳುವ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಸಾರಿಗೆ ಸೌಲಭ್ಯ ಸಮರ್ಪಕವಾಗಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಪ್ರತಿನಿತ್ಯ ಆಟೊರಿಕ್ಷಾ ಇಲ್ಲವೇ ಟಂಟಂ ಗಾಡಿಗಳಲ್ಲಿ ಜೀವ ಪಣಕ್ಕಿಟ್ಟು ಸಂಚರಿಸುವ ಸ್ಥಿತಿ ಉಂಟಾಗಿದೆ.

ಬಾಗೇಪಲ್ಲಿ ಭಾಗದ ಸಾರಿಗೆ ಘಟಕಗಳಲ್ಲಿ ಆದಾಯ ತರಲು ಕೆಎಸ್‌ಆರ್‌ಟಿಸಿ ಆಂಧ್ರಪ್ರದೇಶ ಹಾಗೂ ಬೆಂಗಳೂರು ನಗರವನ್ನು ಕೇಂದ್ರವಾಗಿಟ್ಟು ತನ್ನ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಆದರೆ, ತಾಲ್ಲೂಕಿನ ಗೂಳೂರು, ಮಾರ್ಗಾನುಕುಂಟೆ, ಗೊರ್ತಪಲ್ಲಿ, ತಿಮ್ಮಂಪಲ್ಲಿ, ಚಾಕವೇಲು, ಬಿಳ್ಳೂರು, ಚೇಳೂರು, ಪಾತಪಾಳ್ಯ, ಮಿಟ್ಟೇಮರಿ, ಜೂಲಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಿಗೆ ಸರ್ಕಾರಿ ಬಸ್‌ಗಳ ಸಂಖ್ಯೆ ಕಡಿಮೆ ಇವೆ. ಇಲ್ಲಿ ಸಂಚರಿಸುವ ಬಹುತೇಕ  ಸರ್ಕಾರಿ ಬಸ್‌ಗಳ ನಾಮಫಲಕಗಳ ಮೇಲೆ ಆಂಧ್ರಪ್ರದೇಶದ ಗೋರಂಟ್ಲ, ಧರ್ಮಾವರಂ, ಪುಟ್ಟಪರ್ತಿ, ಪುಲಿವೆಂದುಲ ಹೆಸರುಗಳಿವೆ. ಆದರೆ ಚೇಳೂರು, ಮಿಟ್ಟೇಮರಿ, ಪಾತಪಾಳ್ಯ, ಚಾಕವೇಲು, ಗೂಳೂರು ಮಾರ್ಗಗಳಿಗೆ ತೆರಳುವ ಬಸ್‌ಗಳ ಕೊರತೆ ಇದೆ.

ಹಾಗಾಗಿ, ಈ ಭಾಗದಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗಳ ಬದಲಾಗಿ ಆಟೊರಿಕ್ಷಾಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುವ ಸ್ಥಿತಿ ಉಂಟಾಗಿದೆ. ಚಾಲಕರ ಅಕ್ಕಪಕ್ಕ ಇಲ್ಲವೇ ಟಂಟಂ ಆಟೊ ಗಾಡಿಗಳ ಹಿಂಬದಿಯಲ್ಲಿ ತುದಿಯಲ್ಲಿ ಕುಳಿತು ಸಂಚರಿಸುವ ದೃಶ್ಯಗಳು ಸಾಮಾನ್ಯವಾಗಿವೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆಯ ವೇಳೆಗೆ ಶಾಲಾ–ಕಾಲೇಜುಗಳಿಗೆ ತಲುಪಬೇಕು. ಅಂತೆಯೇ ಸಂಜೆ 4 ಗಂಟೆಗೆ ಶಾಲಾ–ಕಾಲೇಜು ಬಿಟ್ಟಾಗ ಈ ಎರಡೂ ಸಮಯದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಇರುವುದಿಲ್ಲ. ಇದ್ದರೂ ದೂರದ ಗ್ರಾಮಗಳಿಂದ ಬರುವ ಪ್ರಯಾಣಿಕರೇ ಈ ಬಸ್‌ಗಳಲ್ಲಿ ತುಂಬಿರುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಆಗುವುದೇ ಇಲ್ಲ. ಒಂದು ಬಸ್ ಬಿಟ್ಟು ಮತ್ತೊಂದು ಬಸ್ ಹತ್ತಲು ಗಂಟೆಗಟ್ಟಲೇ ಕಾಯುವ ಸ್ಥಿತಿ ಇದೆ. ಹಾಗಾಗಿ, ವಿದ್ಯಾರ್ಥಿಗಳು ಖಾಸಗಿ ಬಸ್ ಇಲ್ಲವೇ ಆಟೊರಿಕ್ಷಾಗಳಲ್ಲಿ ಪ್ರಯಾಣಿಸುತ್ತಾರೆ.

ಖಾಸಗಿ ಬಸ್‌ಗಳ ಟಾಪ್, ಬಾಗಿಲಿನ ಫುಟ್‌ಪಾತ್ ಇಲ್ಲವೇ ಆಟೊಗಳಲ್ಲಿ ಅಗತ್ಯಕ್ಕಿಂತ ಮೀರಿದ ಹೆಚ್ಚಿನ ಪ್ರಯಾಣಿಕರ ನಡುವೆಯೇ ಪ್ರಯಾಣಿಸುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಆಸರೆ  ಹಿಡಿದು ಕೂರುವ ಯಾವ ಸೌಕರ್ಯವೂ ಇಲ್ಲ. ವೇಗವಾಗಿ ಚಲಿಸುವ ಈ ವಾಹನಗಳು ದಿಢೀರ್ ಎಂದು ಬ್ರೇಕ್  ಹಾಕಿದರೆ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ.

‘ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಲ್ಲಿ ಪೊಲೀಸ್, ಆರ್‌ಟಿಒ, ಸಾರಿಗೆ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುವುದು ಅಗತ್ಯ. ಸಂಬಂಧಿಸಿದವರು ಕೂಡಲೇ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು’ ಎಂದು ಪ್ರೊ.ಎ.ಕೆ.ನಿಂಗಪ್ಪ ಒತ್ತಾಯಿಸುತ್ತಾರೆ.

‘ಆಟೋಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ತುಂಬಿಸಿ ಫುಟ್‍ಪಾತ್, ಟಾಪ್ ಮೇಲೆ ಸಂಚರಿಸಿ, ಸಂಚಾರದ ನಿಯಮಗಳನ್ನು ಉಲ್ಲಂಘಿಸಿದರೂ, ಸಂಬಂಧಪಟ್ಟ ಪೊಲೀಸ್, ಆರ್‌ಟಿಒ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಂಡಿಲ್ಲ’ ಎಂಬುದು ನಾಗರಿಕರ ದೂರು.

ಸರ್ಕಾರಿ ಬಸ್‌ಗಳಲ್ಲೇ ಪ್ರಯಾಣಿಸಿ

‘ಬಾಗೇಪಲ್ಲಿ ಡಿಪೊದಿಂದ 106 ಬಸ್‌ಗಳ ಪೈಕಿ 25 ಬಸ್‌ಗಳನ್ನು ಗ್ರಾಮೀಣ ಭಾಗಕ್ಕೆ 41 ಬಸ್‌ಗಳನ್ನು ನಗರಗಳ ಕಡೆಗೆ ಹಾಗೂ ಉಳಿದ ಬಸ್‌ಗಳು ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕಡೆಗೆ ಸಂಚರಿಸುತ್ತಿವೆ. ಚಿಂತಾಮಣಿ ಕಡೆಗೆ ಹೆಚ್ಚುವರಿಯಾಗಿ ಎರಡು ಬಸ್‌ಗಳು ಚಾಕವೇಲು ಪಾತಪಾಳ್ಯ ಚೇಳೂರು ಭಾಗಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಆಟೊ ಹಾಗೂ ಖಾಸಗಿ ಬಸ್‌ಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸಬಾರದು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಸುರಕ್ಷಿತವಾಗಿ ಪ್ರಯಾಣಿಸಬೇಕು’ ಎಂದು ಬಾಗೇಪಲ್ಲಿ ಕೆಎಸ್‌ಆರ್‌ಟಿಸಿ ಡಿಪೊದ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿರುವ ಕುರಿತು ಪೋಷಕರು ಮತ್ತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಸ್ಥಳೀಯ ಕೆಎಸ್‌ಆರ್‌ಟಿಸಿ ಡಿಪೊದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ತುರ್ತಾಗಿ ಕಲ್ಪಿಸಬೇಕು
ಐವಾರಪಲ್ಲಿ ಹರೀಶ್‌, ಸಹ ಕಾರ್ಯದರ್ಶಿ, ಡಿವೈಎಫ್‌ಐ ರಾಜ್ಯ ಘಟಕ
ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಲಭ್ಯ ಕೊರತೆಯಿಂದ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ತೊಂದರೆ ಆಗುತ್ತಿದೆ. ಎಷ್ಟೋ ಹೆಣ್ಣುಮಕ್ಕಳು ಸಾರಿಗೆ ಕಾರಣಕ್ಕಾಗಿಯೇ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತು ಇತ್ತ ಗಮನಹರಿಸಬೇಕು.
ನಂದಿನಿ, ತಾಲ್ಲೂಕು ಅಧ್ಯಕ್ಷೆ, ಎಸ್‌ಎಫ್ಐ
ಬಾಗೇಪಲ್ಲಿ ಪಟ್ಟಣದಲ್ಲಿ ಆಟೋ ಚಾಲಕ ವಿದ್ಯಾರ್ಥಿಗಳನ್ನು ಪಕ್ಕದಲ್ಲಿ ಕೂರಿಸಿ ಚಾಲನೆ ಮಾಡುತ್ತಿರುವುದು
ಬಾಗೇಪಲ್ಲಿ ಪಟ್ಟಣದಲ್ಲಿ ಆಟೋ ಚಾಲಕ ವಿದ್ಯಾರ್ಥಿಗಳನ್ನು ಪಕ್ಕದಲ್ಲಿ ಕೂರಿಸಿ ಚಾಲನೆ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT