ಶನಿವಾರ, ಸೆಪ್ಟೆಂಬರ್ 18, 2021
24 °C
ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಚಿತ್ತ ಈಗ ಖಾತೆಯತ್ತ

ಚಿಕ್ಕಬಳ್ಳಾಪುರ: ಮುಂದುವರಿದ ಸುಧಾಕರ್ ಪಾರುಪತ್ಯ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸುಧಾಕರ್ ಅಣ್ಣನಿಗೆ ಸಚಿವ ಸ್ಥಾನ ದೊರತೇ ದೊರೆಯುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ’–ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಸಹಜವಾಗಿ ಅವರ ಮಂತ್ರಿ ಮಂಡಲವೂ ವಿಸರ್ಜನೆ ಆಯಿತು. ಸಚಿವರಾಗಿದ್ದವರು ಶಾಸಕರಾದರು.

ನಂತರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾರು, ಯಾರು ಸಚಿವರಾಗುವರು ಎನ್ನುವ ಚರ್ಚೆಗಳು ರಾಜ್ಯದಲ್ಲಿ ಗರಿಗೆದರಿತ್ತು. ಆದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬಿಜೆಪಿ ಕಾರ್ಯಕರ್ತರು ಹಾಗೂ ಡಾ.ಕೆ.ಸುಧಾಕರ್ ಬೆಂಬಲಿಗರು, ಸುಧಾಕರ್ ಅಣ್ಣನಿಗೆ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ಖಚಿತ ವಿಶ್ವಾಸ
ಹೊಂದಿದ್ದರು.

ಈ ಖಚಿತ ವಿಶ್ವಾಸ ನಿಜವಾಗಿದೆ. ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸುಧಾಕರ್ ಅವರಿಗೆ ಸ್ಥಾನ ಒಲಿದಿದೆ. ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಹರ್ಷೋಲ್ಲಾಸದಲ್ಲಿ ಮುಳುಗಿದ್ದಾರೆ. ಅವಿಭಜಿತ ಕೋಲಾರದಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾದ ನಂತರ ಚಿಕ್ಕಬಳ್ಳಾಪುರಕ್ಕೆ ಸುಧಾಕರ್ ಮೂಲಕ ಮೂರನೇ ಬಾರಿಗೆ ಸಚಿವ ಸ್ಥಾನ ಒಲಿದಿದೆ. ಬಿಜೆಪಿ ಸೇರಿದ ಎರಡೇ ವರ್ಷಗಳಲ್ಲಿ ಎರಡನೇ ಬಾರಿ ಸಚಿವರಾಗುವ ಮೂಲಕ ಅವರು ಆ ಪಕ್ಷದಲ್ಲಿ ಪ್ರಬಲರಾಗುತ್ತಿದ್ದಾರೆ ಎನಿಸುತ್ತಿದೆ.

ನೆಲೆ ಇಲ್ಲದೆಡೆ ಬಲ: ಕೋಲಾರ ಮತ್ತು ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ತಳಮಟ್ಟದ ಕಾರ್ಯಕರ್ತರ ಪಡೆಯೂ ಇಲ್ಲ. ಆರ್‌ಎಸ್‌ಎಸ್ ಪ್ರಭಾವವೂ ದಟ್ಟವಾಗಿಲ್ಲ. ಡಾ.ಕೆ.ಸುಧಾಕರ್ ಪ್ರವೇಶದ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಈ ಎರಡೂ ಜಿಲ್ಲೆಗಳಲ್ಲಿ
ಪ್ರಬಲವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸುಧಾಕರ್, ಪಕ್ಷ ಬಲವರ್ಧನೆಗೆ ಬಿಜೆಪಿಗೆ ಒದಗಿಬಂದಿದ್ದಾರೆ. ಹೈದರಾಬಾದ್ ‍ಪಾಲಿಕೆ ಚುನಾವಣೆ ಸಂದರ್ಭದಲ್ಲಿಯೂ ಬಿಜೆಪಿ ಸುಧಾಕರ್ ಅವರಿಗೂ
ಜವಾಬ್ದಾರಿಯನ್ನು ನೀಡಿತ್ತು.

ಬಿ.ಎಸ್.ಯಡಿಯೂರಪ್ಪ ಅವರ ಆತ್ಮೀಯ ವಲಯದಲ್ಲಿದ್ದ ಸುಧಾಕರ್, ಬಿಜೆಪಿಯ ಇತರ ನಾಯಕರ ಜತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಎಲ್ಲ ಕಾರಣಗಳು ಅವರಿಗೆ ಸಚಿವ ಸ್ಥಾನ ದೊರೆಯಲು ಪೂರಕವಾಗಿವೆ.

ಯಾವ ಖಾತೆ: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿ ವಿಫಲರಾಗಿದ್ದ ಸುಧಾಕರ್, ಆ ಸರ್ಕಾರ ಪತನಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಉಪಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿತು. 

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಭದ್ರಪಡಿಸಲು ನೆರವಾದ ಸುಧಾಕರ್ ಅವರಿಗೆ ತಮ್ಮ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣದಂತಹ ಮುಖ್ಯ ಖಾತೆಯನ್ನೇ ನೀಡಿದ್ದರು. ನಂತರ ಖಾತೆ ಮರುಹಂಚಿಕೆಯಲ್ಲಿ ಆರೋಗ್ಯವೂ ಸೇರಿತು. ಹೀಗೆ ಎರಡು ಖಾತೆಗಳನ್ನು ಸುಧಾಕರ್
ನಿಭಾಯಿಸಿದ್ದರು.

ಈಗ ಮತ್ತೆ ಸಚಿವರಾಗಿರುವ ಅವರಿಗೆ ಯಾವ ಖಾತೆ ದೊರೆಯಲಿದೆ ಎನ್ನುವ ಕುತೂಹಲ ಮತ್ತು ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ‘ಪ್ರಭಾವಿ’ ಖಾತೆಯೇ ಸುಧಾಕರ್ ಪಾಲಿಗೆ
ಒಲಿಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುವರು. ಬಿಜೆಪಿಯ ಎಲ್ಲ ನಾಯಕರ ಜತೆ ಸುಧಾಕರ್ ಅವರು ಹೊಂದಿರುವ ಒಡನಾಟ ಮತ್ತು ಕೋವಿಡ್ ಸೋಂಕನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಈ ಕಾರಣಕ್ಕೆ ಉತ್ತಮ ಖಾತೆ ದೊರೆಯುತ್ತದೆ ಎನ್ನುತ್ತಿದ್ದಾರೆ ಅವರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು