ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಘಟಕಕ್ಕೆ ಚರಂಡಿ ನೀರು: ನಾಗರಿಕರ ಆಕ್ರೋಶ

ಜನರಿಗೆ ಕೊಳಕು ನೀರು ಪೂರೈಕೆ: ಆರೋಪ
Last Updated 18 ಜೂನ್ 2022, 2:55 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ 16ನೇ ವಾರ್ಡ್‍ನ ಸಂತೆ ಮೈದಾನದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಒಳಚರಂಡಿ ನೀರು ನುಗ್ಗಿದೆ. ಇದೇ ಕೊಳಕು ನೀರನ್ನು ಜನರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಪುರಸಭೆ ಸದಸ್ಯ ಬಿ.ಎ. ನರಸಿಂಹಮೂರ್ತಿ ಆರೋಪಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

‘ರಾತ್ರಿ ಬಿದ್ದ ಮಳೆಯಿಂದ ತಗ್ಗಿನ ಪ್ರದೇಶದಲ್ಲಿರುವ ನೀರಿನ ಘಟಕಕ್ಕೆ ಪಕ್ಕದ ರಾಜಕಾಲುವೆಯ ಚರಂಡಿ ತ್ಯಾಜ್ಯ ಮಳೆ ನೀರಿನೊಂದಿಗೆ ಬೆರೆತು ನುಗ್ಗಿದೆ. ಇದರಿಂದ ಶುದ್ಧ ಕುಡಿಯುವ ನೀರು ಕಲುಷಿತಗೊಂಡಿದೆ. ಇದರ ಸ್ವಚ್ಛತೆಯ ಹೊಣೆ ಹೊರಬೇಕಿದ್ದ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾಲುವೆ ಹಾಗೂ ಘಟಕದ ಸುತ್ತ ಸ್ವಚ್ಛತೆ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರೂ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ದೂರಿದರು.

‘ಕಲುಷಿತ ನೀರು ಸೇವನೆ, ನೈರ್ಮಲ್ಯ ಇಲ್ಲದೆ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಮುನ್ನಚ್ಚರಿಕೆ ಕ್ರಮಗಳು ತೆಗೆದುಕೊಳ್ಳುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಸೂಚಿಸಿದ್ದಾರೆ. ಆದರೆ, ಪಟ್ಟಣದ 23 ವಾರ್ಡ್‍ಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ವಚ್ಛಗೊಳಿಸಿಲ್ಲ’ ಎಂದು ಅವರು ದೂರಿದರು.

‘ಕೂಡಲೇ ಅಧಿಕಾರಿಗಳು ಗಮನ ಹರಿಸಿ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಚರಂಡಿಗಳು, ರಾಜಕಾಲುವೆಗಳು ಹಾಗೂ ಖಾಲಿ ನಿವೇಶನಗಳ ಸ್ವಚ್ಛತೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT