ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ವ್ಯಾಪಾರಿಗಳು ಬ್ಯಾಂಕ್ ಸಾಲ ಪಡೆಯಲು ಸಲಹೆ

Published 23 ಮೇ 2023, 14:02 IST
Last Updated 23 ಮೇ 2023, 14:02 IST
ಅಕ್ಷರ ಗಾತ್ರ

ಚಿಂತಾಮಣಿ: ಬೀದಿ ಬದಿ ವ್ಯಾಪಾರಸ್ಥರನ್ನು ಖಾಸಗಿ ವ್ಯಕ್ತಿಗಳ ಮೀಟರ್ ಬಡ್ಡಿಯಿಂದ ಮುಕ್ತಿಗೊಳಿಸಲು ಪ್ರಧಾನ ಮಂತ್ರಿ ಸನ್ನಿಧಿ ಯೋಜನೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸಾಲ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಕೌಶಲ ಮತ್ತು ಉದ್ಯಮಶೀಲತಾ ವಿಭಾಗ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ವೆಂಕಟಾಚಲಪತಿ ತಿಳಿಸಿದರು.

ಅವರು ಮಂಗಳವಾರ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಸನ್ನಿಧಿ ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಖಾಸಗಿ ವ್ಯಕ್ತಿಗಳ ಬಡ್ಡಿ ದಂಧೆಯಿಂದ ತಪ್ಪಿಸಲು ಈ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 10 ಸಾವಿರ ರೂ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಅದನ್ನು ಸಮರ್ಪಕವಾಗಿ ಮರುಪಾವತಿ ಮಾಡಿದರೆ ಎರಡನೇ ಹಂತದಲ್ಲಿ 20 ಸಾವಿರ, ಅದನ್ನು ಮರುಪಾವತಿ ಮಾಡಿದರೆ ಮೂರನೇ ಹಂತದಲ್ಲಿ 50 ಸಾವಿರ ರೂ ಸಾಲವನ್ನು ಸುಲಭವಾಗಿ ವಿತರಿಸಲಾಗುತ್ತದೆ. ಬೀದಿ ಬದಿ ವ್ಯಾಪಾರಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಬೀದಿ ಬದಿ ವ್ಯಾಪಾರಿಗಳು ಬಂಡವಾಳಕ್ಕಾಗಿ ಪ್ರತಿನಿತ್ಯ ಬೆಳಿಗ್ಗೆ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ಸಂಜೆ ವಾಪಸ್ ನೀಡುತ್ತಾರೆ. ಅಧಿಕ ಬಡ್ಡಿಯಿಂದ ಸಂಪಾದನೆ ಮಾಡಿದ್ದನ್ನು ಬಡ್ಡಿಕುಳಗಳಿಗೆ ನೀಡಬೇಕಾಗುತ್ತದೆ. ಇದರಿಂದ ಅನೇಕ ಬೀದಿ ಬದಿ ವ್ಯಾಪಾರಸ್ಥರು ತೊಂದರೆ ಪಡುತ್ತಿದ್ದಾರೆ. ಸಾಲಕ್ಕೆ ಆದಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಪುಸ್ತಕ, ಪಾಸ್ ಪೋರ್ಟ್ ಪೋಟೊ ಕೊಟ್ಟರೆ ಸಾಕು. ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಬರುತ್ತಾರೆ. ಅವರಿಗೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ನಗರಸಭೆಯಲ್ಲಿ ಆನ್ ಲೈನ್ ಮೂಲಕ ವ್ಯಾಪಾರಸ್ಥರ ಖಾತೆ ಇರುವ ಬ್ಯಾಂಕ್ ಗೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ಎರಡು ವಾರದೊಳಗೆ ಬ್ಯಾಂಕಿನಿಂದ ಸಾಲ ಕೊಡಿಸುವ ವ್ಯವಸ್ಥೆ ಮಾಡುತ್ತಾರೆ. ಬ್ಯಾಂಕಿನವರು ನೀಡದಿದ್ದರೆ ಜಿಲ್ಲಾ ಹಂತದಲ್ಲಿ, ಲೀಡ್ ಬ್ಯಾಂಕ್, ರೀಜನಲ್ ಕಚೇರಿಗೂ ಸಂಪರ್ಕಿಸಿ ಸಾಲವನ್ನು ಕೊಡಿಸಲಾಗುವುದು. ಬೀದಿ ವ್ಯಾಪಾರಸ್ಥರಲ್ಲಿ ಸುಸ್ಥಿರ(ಒಂದೇ ಕಡೆ ವ್ಯಾಪಾರ) ಸಂಚಾರಿ ಎರಡು ವಿಧ ಇದೆ. ಬೀದಿ ಬದಿಯಲ್ಲಿ ವ್ಯಾಪಾರ, ತಳ್ಳುವ ಗಾಡಿಗಳಲ್ಲಿ, ಟೆಂಪೋಗಳಲ್ಲಿ ವ್ಯಾಪಾರ ಮಾಡುವ ಪ್ರತಿಯೊಬ್ಬರಿಗೂ ಸಾಲ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ವ್ಯಾಪಾರಿಗಳು ಮದ್ಯವರ್ತಿಗಳ ಮೊರೆ ಹೋಗಬಾರದು, ಯಾರು, ಯಾರಿಗೂ ಒಂದು ರೂ ನೀಡುವ ಅವಶ್ಯಕತೆ ಇಲ್ಲ. ಯಾರಾದರೂ ಹಣ ಕೇಳಿದರೆ ಕಚೇರಿಯನ್ನು ಸಂಪರ್ಕಿಸಬೇಕು. ಎಲ್ಲ ಬೀದಿಬದಿಯ ವ್ಯಾಪಾರಸ್ಥರಿಗೂ ಸಾಲ ನೀಡಲಾಗುವುದು. ಈ ಯೋಜನೆಯ ಬಗ್ಗೆ ಬಹುತೇಕರಿಗೆ ಅರಿವಿಲ್ಲದೆ ಸದುಪಯೋಗವಾಗುತ್ತಿಲ್ಲ ಎಂದು ವಿಷಾದಿಸಿದರು.

ಟಿ.ವಿ.ಸಿ ಸದಸ್ಯ ಮೋಹನ್ ಬಾಬು, ಸೂಫಿ ಸಲೀಂ, ಕೆ.ಎಸ್.ಬಾಬು, ಧನಮ್ಮ, ರೆಡ್ಡಮ್ಮ, ಪರ್ವೀನ್ ತಾಜ್, ಶಬ್ಬೀರ್, ನಯಾಜ್, ಪಾರ್ವತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT