ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆ ಗುರಿ ಸಾಧಿಸಲು ಶ್ರಮಿಸಿ: ಕೆ.ಸಿ ರಾಜಾಕಾಂತ್

ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ
Last Updated 19 ಸೆಪ್ಟೆಂಬರ್ 2020, 12:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ತುಂಬಾ ಮಹತ್ವವಿದೆ. ಆದ್ದರಿಂದ, ಸಮಾಜದ ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳು ಸೇರಿದಂತೆ ಸಮಾಜದಲ್ಲಿರುವ ಪ್ರತಿಯೊಬ್ಬರನ್ನೂ ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಎಲ್ಲ ಸುಶಿಕ್ಷಿತರ ಮೇಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ ರಾಜಾಕಾಂತ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಕ್ಷರತಾ ಕಾರ್ಯಕ್ರಮಕ್ಕೆ ಸರ್ಕಾರ ಹೆಚ್ಚು ಅನುದಾನ ನೀಡುವ ಜತೆಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಸಂಪೂರ್ಣ ಸಾಕ್ಷರತೆ ಸಾಧಿಸಿ ಗುರಿ ತಲುಪಲು ಸಾಧ್ಯವಾಗುತ್ತದೆ. ಸಾಕ್ಷರತಾ ಯೋಜನೆ ಅಡಿ ಕೆಲಸ ಮಾಡುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಯಾವುದೇ ರಂಗದಲಿ ಯಶಸ್ಸು ಸಾಧಿಸಬೇಕಾದರೆ, ಪ್ರಾಮಾಣಿಕ ಸೇವೆ ಅವಶ್ಯಕ’ ಎಂದು ಹೇಳಿದರು.

‘ಕನ್ನಡ ಭಾಷೆ ಉಳಿಸುವಲ್ಲಿ ಜಾತಿ, ಧರ್ಮಗಳನ್ನು ಬಿಟ್ಟು ಜಾತಿ ರಹಿತ ಸಮಾಜವನ್ನು ಕಟ್ಟಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು, ಸರ್ವರಿಗೂ ಅಕ್ಷರಾಭ್ಯಾಸ ಅವಶ್ಯಕ. ಅನಕ್ಷರಸ್ಥ ಜನರಿಗೆ ಸಾಕ್ಷರತೆ ಒದಗಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ‘ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ನಿಶ್ಚಿತ. ವಿದ್ಯಾದಾನ ಮಹಾದಾನ ಎಂಬಂತೆ ಕತ್ತಲೆಯಿಂದ ಬೆಳಕಿನಡೆಗೆ ಕರೆತರುವುದೇ ಸಾಕ್ಷರತೆ. ಹಿರಿಯ ನಾಗರಿಕರಿಗೆ ಬೋಧನೆ ಮಾಡುವ ಮೂಲಕ ಬೆಳಕಿನ ದಾರಿ ತೋರುವುದರಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸೋಣ’ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡಿದರೆ ಒಬ್ಬರಿಗೆ ಜ್ಞಾನದ ದಾರಿ ತೋರಿದಂತಾಗುತ್ತದೆ. ಜಿಲ್ಲೆಯಲ್ಲಿ ಸಂಪೂರ್ಣ ಅಕ್ಷರಸ್ಥರನ್ನಾಗಿ ಮಾಡುವ ಗುರಿಯೊಂದಿಗೆ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು’ ಎಂದರು.

ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಮಾತನಾಡಿ, ‘2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 74,707 ಅನಕ್ಷರಸ್ಥರು ಇದ್ದರು. ಈವರೆಗೆ ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ 15,021 ಜನರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ. ಇನ್ನೂ 59,686 ಜನರು ಜಿಲ್ಲೆಯಲ್ಲಿ ಅನಕ್ಷರಸ್ಥರಾಗಿದ್ದಾರೆ. ಈ ವರ್ಷ ಜಿಲ್ಲೆಯ 13 ಗ್ರಾಮ ಪಂಚಾಯಿತಿಗಳ 125 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ, ಹಿರಿಯ ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ನಾಜಿಮಾಖಾತುನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT