ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಬರು, ಹೊಸಬರ ಮಧ್ಯೆ ಹಣಾಹಣಿ

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಮತ್ತೊಮ್ಮೆ ಹಿರಿಯ ತಲೆಯಾಳುಗಳನ್ನೇ ಅಖಾಡಕ್ಕೆ ಇಳಿಸಿದೆ. ಇವರೆಲ್ಲರೂ ಹಳೆಯ ಹುಲಿಗಳೇ. ಇವರಿಗೆ ಸವಾಲು ಒಡ್ಡುವ ಸಲುವಾಗಿಯೇ ಬಿಜೆಪಿ ಮತ್ತು ಜೆಡಿಎಸ್‌ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಹೂಡಿವೆ.

ಯಾದಗಿರಿ, ಸುರಪುರ, ಗುರುಮಠಕಲ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಶಹಾಪುರದಲ್ಲಿ ಬಿಜೆಪಿ (ಗುರುಪಾಟೀಲ ಕೆಜಿಪಿಯಿಂದ ಗೆದ್ದು ನಂತರ ಬಿಜೆಪಿ ಸೇರಿದ್ದಾರೆ) ಶಾಸಕರು ಇದ್ದಾರೆ. ಇದರ ಆಧಾರದ ಮೇಲೆ ನೋಡುವುದಾದರೆ, ಕಾಂಗ್ರೆಸ್‌ ಭದ್ರವಾಗಿದೆ.

ಆದರೆ, ಈ ಬಾರಿ ಕಾಂಗ್ರೆಸ್‌ನ ಕೋಟೆಗೆ ಲಗ್ಗೆ ಹಾಕಲು ಬಿಜೆಪಿ–ಜೆಡಿಎಸ್‌ ಪೈಪೋಟಿಗೆ ಇಳಿದಿವೆ. ಅಂದರೆ, ಯಾದಗಿರಿ, ಸುರಪುರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯೂ, ಗುರುಮಠಕಲ್‌ನಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌, ಶಹಾಪುರದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸವಾಲು ಹಾಕಿವೆ.

ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಆಯ್ಕೆ ಸಲೀಸಾಗಿತ್ತು. ಆದರೆ, ಬಿಜೆಪಿಯಲ್ಲಿ ಕಗ್ಗಂಟಾಗಿತ್ತು. ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಕ್ಷೇತ್ರವನ್ನೇ ಬದಲಿಸಲಾಯಿತು. ಇದು ಬಿಜೆಪಿ ತಾನೇ ತನ್ನ ಕಾಲ ಮೇಲೆ ಕಲ್ಲು ಎತ್ತಿ ಹಾಕಿಕೊಂಡಂತಾಗಿದೆ.

ಯಾದಗಿರಿ ಕ್ಷೇತ್ರದಿಂದ ಹಿರಿಯರಾದ ಡಾ.ಎ.ಬಿ.ಮಾಲಕರಡ್ಡಿ ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಕಾರ್ಯಕರ್ತರ ಒತ್ತಾಯದಿಂದ ಸ್ಪರ್ಧೆಗೆ ಧುಮುಕಿದ್ದಾರೆ. ಆರು ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿರುವ ಇವರ ಸಜ್ಜನಿಕೆಯ ವ್ಯಕ್ತಿತ್ವಕ್ಕಾಗಿ ಬೆಂಬಲ ವ್ಯಕ್ತವಾಗುತ್ತಿದೆ.

ಆದರೆ, ಪ್ರಭಾವಿ ಮುದ್ನಾಳ ಕುಟುಂಬದ ವೆಂಟಕರೆಡ್ಡಿ ಮುದ್ನಾಳ ಬಿಜೆಪಿ ಅಭ್ಯರ್ಥಿಯಾಗಿದ್ದು, ಅದೇ ಸಮುದಾಯದ ಮಾಲರಡ್ಡಿ ಅವರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ.

ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯುತ್ತಿದ್ದ ಕಾಂಗ್ರೆಸ್‌ಗೆ, ಈ ಬಾರಿ ಜೆಡಿಎಸ್‌ನ ಅಬ್ದುಲ್‌ ನಬಿ ಚಾಂದ್ ಕಾಡ್ಲೂರ ಆತಂಕವನ್ನು ಉಂಟು ಮಾಡಿದ್ದಾರೆ. ಕಾಡ್ಲೂರ ಕೇವಲ ಮುಸ್ಲಿಂ ಸಮುದಾಯವನ್ನೇ ನೆಚ್ಚಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ ಪಕ್ಷವನ್ನು ಬಲಪಡಿಸಿಲ್ಲ ಎಂಬುದಾಗಿ ಕೇಳಿಬರುತ್ತಿದೆ. ಆದ್ದರಿಂದ ಯಾದಗಿರಿ ಕ್ಷೇತ್ರದಲ್ಲಿ ರೆಡ್ಡಿ ಲಿಂಗಾಯತ ಸಮುದಾಯದ ಮುಖಂಡರಾದ ಮಾಲಕರಡ್ಡಿ–ವೆಂಕಟರೆಡ್ಡಿ ಮುದ್ನಾಳ ಮಧ್ಯೆ ತೀವ್ರ ಸೆಣಸಾಟವಿದೆ.

ಕಬ್ಬಲಿಗ ಸಮುದಾಯ ಹೆಚ್ಚಿರುವ ಗುರುಮಠಕಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಅವರ ವಿರುದ್ಧ ವಿರೋಧಿ ಅಲೆ ಎದ್ದಿದೆ. ಕಾಂಗ್ರೆಸ್ ತೊರೆದಿರುವ ಅಲ್ಲಿನ ಪುರಸಭೆ ಸದಸ್ಯರಾದ ಬಾಲಪ್ಪ ನಿರೇಟಿ, ವೀರಪ್ಪ ಪ್ಯಾಟಿ, ಪ್ರಕಾಶ ನಿರೇಟಿ ಅವರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮುದ್ನಾಳ ಕುಟುಂಬಕ್ಕೆ ನಿಷ್ಠರಾಗಿದ್ದ ಹತ್ತಿಕುಣಿ, ಯರಗೋಳ ಹೋಬಳಿಯಲ್ಲಿನ ಮುಖಂಡರು ಜೆಡಿಎಸ್‌ ಗೆ ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೇ ಎರಡು ಸಲ ತೀವ್ರ ಪೈಪೋಟಿ ನೀಡಿದ್ದ ವೆಂಕಟರೆಡ್ಡಿ ಮುದ್ನಾಳ ಅವರು ಕ್ಷೇತ್ರ ಬದಲಿಸಿರುವುದು ಜೆಡಿಎಸ್‌ನ ನಾಗನಗೌಡ ಕಂದಕೂರ ಅವರ ಹಾದಿಯನ್ನು ಸುಗಮ ಮಾಡಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಸಾಯಿಬಣ್ಣ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆ ಮಾಡಿಲ್ಲ. ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನದ ಕೂಗು ಇದೆ. ಇದರಿಂದ ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌–ಜೆಡಿಎಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಶಹಾಪುರ ಕ್ಷೇತ್ರದಲ್ಲಿ ರೆಡ್ಡಿ ಲಿಂಗಾಯತ ಮತ್ತು ಲಿಂಗಾಯತ ಬಣಜಿಗ ಸಮುದಾಯದ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಸೈದ್ಧಾಂತಿಕವಾಗಿ ಬಿಜೆಪಿ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿತ್ತು. ಶಾಸಕ ಗುರು ಪಾಟೀಲ್ ಶಿರವಾಳ ಜಯಂತಿಯಲ್ಲಿ ಭಾಗವಹಿಸುವ ಮೂಲಕ ಮುಸ್ಲಿಮರ ಓಲೈಕೆಗೆ ಮುಂದಾಗಿದ್ದರು. ‘ನನಗೆ ಪಕ್ಷ ಮುಖ್ಯವಲ್ಲ, ಶಿರವಾಳ ಮನೆತನಕ್ಕೂ ಮುಸ್ಲಿಮರಿಗೂ ಮೊದಲಿನಿಂದಲೂ ಬಾಂಧವ್ಯ ಇದೆ. ಅದನ್ನು ಉಳಿಸಿಕೊಳ್ಳಬೇಕಿದೆ’ ಎಂದು ಶಿರವಾಳ ಅವರು ಬಹಿರಂಗ ಹೇಳಿಕೆ ನೀಡಿದ್ದರು.

ಇದರಿಂದ ಶಹಾಪುರದಲ್ಲಿ ಬಿಜೆಪಿಯು ಅಭ್ಯರ್ಥಿಯನ್ನು ಬದಲಿಸಲಿದೆ ಎಂದು ಜನ ಮಾತನಾಡಿಕೊಂಡಿದ್ದರು. ಆದರೆ, ಬಿಜೆಪಿ ಗುರು ಪಾಟೀಲ ಶಿರವಾಳ ಅವರಿಗೆ ಮಣೆ ಹಾಕಿದೆ. ಇಲ್ಲಿನ ಮತದಾರರು ಪಕ್ಷಕ್ಕಿಂತ ವ್ಯಕ್ತಿ ನಿಷ್ಠೆ ತೋರುವುದು ಚುನಾವಣಾ ಇತಿಹಾಸದಿಂದ ತಿಳಿದು ಬರುತ್ತದೆ.

ಜೆಡಿಎಸ್‌ನ ಅಮೀನ್ ರೆಡ್ಡಿ ಯಾಳಗಿ ಮತ್ತು ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪೂರ ಇಬ್ಬರು ರೆಡ್ಡಿ ಲಿಂಗಾಯತ ಸಮುದಾಯದಕ್ಕೆ ಸೇರಿದವರು. ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಕಾಂಗ್ರೆಸ್‌ನಿಂದ ಹೊರ ಬಂದಿರುವ ಅಮೀನ್ ರೆಡ್ಡಿ ಯಾಳಗಿ ಹೆಚ್ಚು ಮತಗಳನ್ನು ಸೆಳೆದರೆ ಕಾಂಗ್ರೆಸ್‌ ಗೆ ಹೊಡೆತ ಬೀಳಲಿದೆ.

ಸುರಪುರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ. ಇಲ್ಲಿ ಕುರುಬ ಸಮುದಾಯದ ಮತದಾರರು ಹೆಚ್ಚಿದ್ದಾರೆ. ನಾಯಕ ಸಮುದಾಯದವರದ್ದು ನಂತರದ ಸ್ಥಾನ. ಮೂರು ಶತಮಾನಗಳ ಕಾಲ ನಾಯಕ ಸಮಾಜಕ್ಕೆ ಸೇರಿದ ಗೋಸಲ ವಂಶದವರು ಇಲ್ಲಿ ರಾಜ್ಯಾಡಳಿತ ನಡೆಸಿದ್ದರಿಂದ ಈ ಸಮುದಾಯದ ಜನ ಪ್ರಾಬಲ್ಯ ಹೊಂದಿದ್ದಾರೆ.

ಎರಡು ಬಾರಿ ಸೋತರೂ ಜನಸಂಪರ್ಕದಲ್ಲಿದ್ದ ರಾಜಾ ವೆಂಕಟಪ್ಪ ನಾಯಕ ಅವರು ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸ ಪಾದಯಾತ್ರೆ ನಡೆಸಿ ಕಾಲುವೆಗೆ ನೀರು ಹರಿಸಲು ಯಶಸ್ವಿಯಾಗಿದ್ದು ವರವಾಯಿತು. 2013ರ ಚುನಾವಣೆಯಲ್ಲಿ ಪರಿಣಾಮ ರಾಜಾ ವೆಂಕಟಪ್ಪನಾಯಕ ಗೆದ್ದರು. ಈ ಬಾರಿ ಕುರುಬ ಸಮುದಾಯದ ಮತ ಸೆಳೆಯಲು ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಕ್ಷೇತ್ರಕ್ಕೆ ಕರೆಯಿಸಿ ಪ್ರಚಾರ ನಡೆಸಿದ್ದಾರೆ. ಹುಣಸಗಿ, ಕಕ್ಕೇರಾ ಭಾಗದಲ್ಲಿ ಸಮಾವೇಶ ನಡೆಸುವ ಮೂಲಕ ಕುರುಬರನ್ನು ಕಾಂಗ್ರೆಸ್‌ ಸೆಳೆದಿದೆ. ಕುರುಬರು ರಾಜಾವೆಂಕಟಪ್ಪ ನಾಯಕರಿಗೆ ಮತ ಹಾಕಿದರೆ, ತಮಗೇ ಮತ ನೀಡಿದಂತೆ ಎಂದು ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ. ಇದು ಬಿಜೆಪಿಯ ನರಸಿಂಹ ನಾಯಕ (ರಾಜೂಗೌಡ) ಅವರ ತಲೆನೋವಿಗೂ ಕಾರಣವಾಗಿದೆ.

ಪ್ರಬಲ ಅಭ್ಯರ್ಥಿಯನ್ನು ಪ್ರತಿವರ್ಷ ಹುಡುಕಿ ಕಡೆಗೆ ಕೈಚೆಲ್ಲುತ್ತಿದ್ದ ಜೆಡಿಎಸ್ ಈ ಬಾರಿ ಸುರಪುರದಲ್ಲಿನ ಮೂಲ ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಅವರನ್ನು ಕಣಕ್ಕೆ ಇಳಿಸಿದೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿಯ ಅಭ್ಯರ್ಥಿಗಳಲ್ಲಿ ಮತ್ತಷ್ಟೂ ಆತಂಕ ಹುಟ್ಟಿಸಿದೆ. ರಾಜಾ ವೆಂಕಟಪ್ಪ ನಾಯಕ ಮತ್ತು ರಾಜೂಗೌಡ ಅವರ ಮತಗಳನ್ನು ರಾಜಾ ಕೃಷ್ಣಪ್ಪ ನಾಯಕ ಕಸಿದುಕೊಳ್ಳುವುದು ನಿಶ್ಚಿತ. ಯಾರ ಮತಗಳನ್ನು ಹೆಚ್ಚು ಕಸಿದುಕೊಳ್ಳುತ್ತಾರೆ ಎಂಬುದೇ ಇರುವ ಪ್ರಶ್ನೆ.

ಕ್ಷೇತ್ರ 2008 2013

ಯಾದಗಿರಿ ಡಾ.ಎ.ಬಿ.ಮಾಲಕರಡ್ಡಿ (ಕಾಂಗ್ರೆಸ್) ಡಾ.ಎ.ಬಿ.ಮಾಲಕರಡ್ಡಿ(ಕಾಂಗ್ರೆಸ್)

ಗುರುಮಠಕಲ್ ‌ಬಾಬುರಾವ್‌ ಚಿಂಚಿನಸೂರ (ಕಾಂಗ್ರೆಸ್) ಬಾಬುರಾವ್‌ ಚಿಂಚಿನಸೂರ (ಕಾಂಗ್ರೆಸ್)

ಸುರಪುರ ನರಸಿಂಹನಾಯಕ (ರಾಜೂಗೌಡ) (ಬಿಜೆಪಿ) ರಾಜಾ ವೆಂಕಟಪ್ಪ ನಾಯಕ (ಕಾಂಗ್ರೆಸ್)

ಶಹಾಪುರ ಶರಣಬಸಪ್ಪಗೌಡ ದರ್ಶನಾಪೂರ(ಕಾಂಗ್ರೆಸ್) ಗುರುಪಾಟೀಲ ಶಿರವಾಳ (ಕೆಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT