ಎಂ.ಸಿ. ಸುಧಾಕರ್ ಬಣದ ಮೇಲುಗೈ

ಚಿಂತಾಮಣಿ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಬುಧವಾರ ತಡರಾತ್ರಿ ಮುಕ್ತಾಯವಾಗಿದ್ದು, ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.
ಮೂರನೇ ಎರಡು ಭಾಗದಷ್ಟು ಗ್ರಾಮ ಪಂಚಾಯಿತಿಗಳು ಸುಧಾಕರ್ ಬಣದ ಬೆಂಬಲಿಗರ ಪಾಲಾಗಿವೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದ 29 ಗ್ರಾಮ ಪಂಚಾಯಿತಿಗಳಲ್ಲಿ 20 ಗ್ರಾಮ ಪಂಚಾಯಿತಿಗಳು ಸುಧಾಕರ್ ಬಣಕ್ಕೆ, 8 ಗ್ರಾಮ ಪಂಚಾಯಿತಿಗಳು ಜೆಡಿಎಸ್ ಬೆಂಬಲಿಗರ ವಶವಾಗಿವೆ.
ಚಿನ್ನಸಂದ್ರ ಗ್ರಾಮ ಪಂಚಾಯಿತಿಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಲ್ತಾನ್ ಷರೀಫ್ ನೇತೃತ್ವದ ಸಿಂಡಿಕೇಟ್ ಪ್ರತ್ಯೇಕವಾಗಿ ಸ್ಪರ್ಧಿಸಿ ಜಯಗಳಿಸಿದೆ. ಶಿಡ್ಲಘಟ್ಟ ವಿಧಾನ ಕ್ಷೇತ್ರದ ವ್ಯಾಪ್ತಿಯ 6 ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಗರು ಸಮಬಲ ಸಾಧಿಸಿ ತಲಾ 3 ಗ್ರಾಮ ಪಂಚಾಯಿತಿಗಳ ಅಧಿಕಾರ ಹಿಡಿಯಲು ಸಜ್ಜಾಗಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಯ ಮೇಲೆ ನಡೆಯುವುದಿಲ್ಲ. ಸರ್ಕಾರ ಇನ್ನೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿಲ್ಲ. ಮೀಸಲಾತಿ ಪ್ರಕಟವಾದ ನಂತರ ಆಯಾರಾಂ-ಗಯಾರಾಂ ಸಾಧ್ಯತೆಯೂ ಇದೆ. ಹೀಗಾಗಿ ಈ ಅಂಕಿಗಳು ಬದಲಾವಣೆಯಾಗುವ ಸಾಧ್ಯತೆಯೂ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಒಂದು ಪಂಚಾಯಿತಿಯಲ್ಲೂ ಮೇಲುಗೈ ಸಾಧಿಸಿಲ್ಲ.
ತಾಲ್ಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮರ್ಥ ನಾಯಕತ್ವವಿಲ್ಲದೆ, ನಾವಿಕನಿಲ್ಲದ ಹಡಗಿನಂತಾಗಿವೆ. ಕಾಂಗ್ರೆಸ್, ಜೆಡಿಎಸ್‌ನೊಂದಿಗೆ ಅನಧಿಕೃತ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಬೆಂಬಲಿತರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದ 466 ಸ್ಥಾನಗಳಲ್ಲಿ ಎಂ.ಸಿ. ಸುಧಾಕರ್ ಬಣ 230, ಜೆಡಿಎಸ್ 180 ಬಿಜೆಪಿ 7, ಇತರರು 29 ಸ್ಥಾನಗಳಲ್ಲಿ ಜಯಭೇರಿ
ಬಾರಿಸಿದ್ದಾರೆ.
ಮಿಂಡಿಗಲ್ ಗ್ರಾಮ ಪಂಚಾಯಿತಿಯ ಗುಡಿಸಲಹಳ್ಳಿ ಕ್ಷೇತ್ರದಲ್ಲಿ ಅಭ್ಯರ್ಥಿ ವೆಂಕಟರಮಣಪ್ಪ ಪ್ರತಿಸ್ಪರ್ಧಿ ನರೇಶ್ ವಿರುದ್ಧ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕುಟುಂಬದ ಬಿಗಿಹಿಡಿತ: ತಾಲ್ಲೂಕಿನ ಕಾಗತಿ ಗ್ರಾಮ ಪಂಚಾಯಿತಿಯ ಬುಕ್ಕನಹಳ್ಳಿ ಕ್ಷೇತ್ರದಿಂದ ಕಳೆದ 25 ವರ್ಷಗಳಿಂದ ಒಂದೇ ಕುಟುಂಬದವರು ಜಯಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಬುಕ್ಕನಹಳ್ಳಿ ಶಿವಣ್ಣನ ಮಾವ ಶ್ರೀನಿವಾಸರೆಡ್ಡಿ 1994 ಮತ್ತು 2000ರಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರು. ನಂತರ 2005, 2010ರಲ್ಲಿ ಶಿವಣ್ಣ ಗೆಲುವು ಸಾಧಿಸಿ ಕಾಗತಿ ಗ್ರಾಮ ಪಂಚಾಯಿತಿಯಲ್ಲಿ ಮೂರು ಬಾರಿ ಉಪಾಧ್ಯಕ್ಷ ಮತ್ತು ಎರಡು ಬಾರಿ ಅಧ್ಯಕ್ಷರಾಗಿದ್ದರು.
2015 ಮತ್ತು 2020ರಲ್ಲಿ ಶಿವಣ್ಣ ಅವರ ಪತ್ನಿ ಬಿ.ಜಿ. ರಾಧಮ್ಮ ಆಯ್ಕೆಯಾಗಿದ್ದಾರೆ. ಹೀಗಾಗಿ ಕಳೆದ ಎರಡೂವರೆ ದಶಕಗಳಿಂದ ಒಂದೇ ಕುಟುಂಬದವರು ಆಯ್ಕೆಯಾಗುತ್ತಿರುವುದು ತಾಲ್ಲೂಕಿನಲ್ಲಿ ದಾಖಲೆಯಾಗಿದೆ. 2016ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಊಲವಾಡಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಶಿವಣ್ಣ ಆಯ್ಕೆಯಾದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.