ಮಂಗಳವಾರ, ಜುಲೈ 27, 2021
25 °C
ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ವಿತರಿಸಿದ ಸಚಿವ ಡಾ.ಕೆ.ಸುಧಾಕರ್

ಉನ್ನತ ಶಿಕ್ಷಣ, ಆರೋಗ್ಯ ಕಾರಿಡಾರ್‌ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಉನ್ನತ ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಲಿಕಾ ನಿರ್ವಹಣಾ ವ್ಯವಸ್ಥೆಯಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಬುಧವಾರ ಟ್ಯಾಬ್ಲೆಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಈಗಾಗಲೇ ವೈದ್ಯಕೀಯ ಶಿಕ್ಷಣ ಕಾಲೇಜು ಕ್ಯಾಂಪಸ್‌ ನಿರ್ಮಾಣ ಭರದಿಂದ ಸಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಜೂನ್‌ ಅಥವಾ ಸೆಪ್ಟೆಂಬರ್‌ ವೇಳೆಗೆ ಕಾಮಗಾರಿ ಪೂರ್ಣಗೊಂಡು ಕಾಲೇಜು ಉದ್ಘಾಟಿಸಲಾಗುವುದು ಎಂದರು.

ನರ್ಸಿಂಗ್‌, ಪ್ಯಾರಾ ಮೆಡಿಕಲ್‌, ಫಾರ್ಮಸಿ ಕೋರ್ಸ್‌ಗಳನ್ನೂ ಆರಂಭಿಸಲಾಗುವುದು. ಆಯುಷ್‌ ಆಸ್ಪತ್ರೆ ಮತ್ತು ಕಾಲೇಜು ಆರಂಭಕ್ಕೂ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಜತೆಗೆ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಸಹಿತ ಉನ್ನತ ಶಿಕ್ಷಣದ ಎಲ್ಲ ಕೋರ್ಸ್‌ಗಳ ಆರಂಭಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆ ರಾಜಧಾನಿಗೆ ಸಮೀಪವಿದೆ. ಉನ್ನತ ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ಸವಲತ್ತುಗಳನ್ನು ಅಭಿವೃದ್ಧಿಪಡಿಸಿದರೆ ಈ ಎರಡೂ ಕ್ಷೇತ್ರದ ಕೇಂದ್ರವಾಗಿ ಬೆಳೆಯಲಿದೆ. ಈ ನಿಟ್ಟಿನಲ್ಲಿ ನೀಲನಕ್ಷೆ ರೂಪಿಸಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.

ಸದ್ಯ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವವರ ಸಂಖ್ಯೆ ಕಡಿಮೆ ಇದೆ. ಶಿಕ್ಷಣಕ್ಕೆ ದಾಖಲಾಗುವ ಶೇ 75ರಷ್ಟು ಮಂದಿಯಾದರೂ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕು. ಇದಕ್ಕೆ ತಕ್ಕ ಸವಲತ್ತುಗಳನ್ನು ನಾವು ಒದಗಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯನ್ನು ಮಾದರಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಕಾರಿಡಾರ್‌ನ್ನಾಗಿ ರೂಪಿಸಲಾಗುವುದು ಎಂದರು.

ನಗರದ ಕಾಲೇಜುಗಳ ಅಭಿವೃದ್ಧಿಗೆ ಒಟ್ಟು ₹ 6.77 ಕೋಟಿ ಅನುದಾನ ನೀಡಲಾಗಿದೆ. ಪ್ರಯೋಗಾಲಯ, ಹೆಚ್ಚುವರಿ ಕೊಠಡಿಗಳು, ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜಿಲ್ಲೆಯ ಪ್ರಥಮ ಮಹಿಳಾ ಕಾಲೇಜು ನಿರ್ಮಾಣಕ್ಕೂ ಡಿಎಂಎಫ್‌ ನಿಧಿ ಅಡಿಯಲ್ಲಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಪ್ರಸಕ್ತ ವರ್ಷ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಕಾಲೇಜು ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿ ಮುತುವರ್ಜಿವಹಿಸಿ ಕಾಲೇಜು ಆವರಣವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಬೋಧನೆ ಜತೆಗೆ ಶುಚಿತ್ವಕ್ಕೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಆರ್‌.ಲತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ಕುಮಾರ್‌, ಮಾವು ಮಾರಾಟ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಪ್ರಾಂಶುಪಾಲರು, ಮುಖಂಡರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು