ಶನಿವಾರ, ಆಗಸ್ಟ್ 20, 2022
21 °C

ಭತ್ತಕ್ಕೆ ಬೆಂಬಲ ಬೆಲೆ ರೈತರ ನೋಂದಣಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಸರ್ಕಾರದ ಆದೇಶದ ಅನ್ವಯ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಕೇಂದ್ರ ತೆರೆಯುವ ಸಂಬಂಧ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ, ಬಿಳಿಜೋಳ ಮತ್ತು ರಾಗಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ ₹ 1,868, ಭತ್ತ ಗ್ರೇಡ್ ‘ಎ’ಗೆ ₹ 1,888, ಬಿಳಿಜೋಳ-ಹೈಬ್ರಿಡ್ ₹ 2,620, ಬಿಳಿಜೋಳ-ಮಾಲ್ದಂಡಿ ₹ 2,640 ಹಾಗೂ ರಾಗಿಗೆ ₹ 3,295 ಬೆಂಬಲ ಬೆಲೆ ಘೋಷಿಸಲಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಮಾತ್ರ ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಡಿ. 30ರವರೆಗೆ ನೋಂದಣಿಗೆ ಕಾಲವಕಾಶವಿದೆ. ಕೇವಲ ನೋಂದಾಯಿತ ರೈತರಿಂದ ಮಾತ್ರ ಭತ್ತ ಖರೀದಿಗೆ ಅವಕಾಶವಿರುತ್ತದೆ. ಜಿಲ್ಲೆಯಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಹೆಚ್ಚಾಗಿ ರಾಗಿ ಬೆಳೆಯಲಾಗಿದೆ. ಶೀಘ್ರದಲ್ಲೇ ರಾಗಿ ಖರೀದಿ ಕೇಂದ್ರ ಸ್ಥಾಪಿಸಲು ಅನುಮತಿ ನೀಡಲು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನೋಂದಣಿಯಾದ ರೈತರಿಂದ ನೇರವಾಗಿ ಭತ್ತವನ್ನು ನೋಂದಾಯಿತ ಅಕ್ಕಿ ಗಿರಣಿಗಳಲ್ಲಿ ಸರ್ಕಾರದ ಪರವಾಗಿ ಖರೀದಿಸಲಾಗುತ್ತದೆ ಎಂದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಸವಿತಾ ಮಾತನಾಡಿ, ಭತ್ತ ಮಾರಾಟ ಮಾಡಬಯಸುವ ರೈತರು ಕೃಷಿ ಇಲಾಖೆ ಜಾರಿಗೊಳಿಸಿರುವ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಸಿರಬೇಕು ಅಥವಾ ಆಧಾರ್ ಕಾರ್ಡ್ ಮೂಲಕ ನೋಂದಣಿ ಮಾಡಿಸಬಹುದಾಗಿದೆ ಎಂದರು. 

ಜಿಲ್ಲೆಯಲ್ಲಿ ಡಿ.20ರಿಂದ ನೋಂದಾಯಿತ ರೈತರಿಂದ ಭತ್ತ ಖರೀದಿಸಲಾಗುವುದು ಎಂದರು.

ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ವರಲಕ್ಷ್ಮೀ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.