ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆಗೆ ಬೇಕು ಕಾಯಕಲ್ಪ

ಸಾದಲಿ ಹೋಬಳಿಯ ಐದು ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿ
Last Updated 20 ಡಿಸೆಂಬರ್ 2021, 2:22 IST
ಅಕ್ಷರ ಗಾತ್ರ

ಸಾದಲಿ:ಕೆರೆಗಳು ಆಯಾ ಗ್ರಾಮಗಳ ಅಂತರ್ಜಲ ಮಟ್ಟ ವೃದ್ಧಿಸುತ್ತವೆ. ರೈತರ ನೆಮ್ಮದಿಗೆ ಮುಖ್ಯ ಪಾತ್ರವಹಿಸುತ್ತವೆ. ಹೀಗೆ ಗ್ರಾಮೀಣ ಜನರು ಹಾಗೂ ರೈತರ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಕೆರೆಗಳು ಒತ್ತುವರಿಗೆ ತುತ್ತಾಗಿವೆ. ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯಲ್ಲಿಯೂ ಇದೇ ಚಿತ್ರಣವನ್ನು ಕಾಣಬಹುದು.

ಭೂಮಾಫಿಯಾಗೆ ಕೆರೆ ಅಂಗಳದ ಅಂಚುಗಳು ಹಾಗೂ ಪೋಷಕ ಕಾಲುವೆಗಳ ಬಲಿಯಾಗುತ್ತಿವೆ.ಸಾದಲಿ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 5 ಗ್ರಾ.ಪಂಗಳಿವೆ. ಇದರಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ 5, ಜಿ.ಪಂ ವ್ಯಾಪ್ತಿಯಲ್ಲಿ 65 ಕೆರೆಗಳಿವೆ. ಇವುಗಳಲ್ಲಿ 60 ಕೆರೆಗಳು ಮೀನುಗಾರಿಕೆ ನಡೆಸಲು ಅರ್ಹವಾಗಿವೆ. ಬಹುತೇಕ ಕಡೆಗಳಲ್ಲಿ ಕೆರೆಗಳಿಗೆ ನೀರು ಹರಿಯುವ ಕಾಲುವೆಗಳು ಒತ್ತುವರಿ ಆಗಿವೆ. ಮಳೆ ಬಂದರೂ ಕೆರೆಗಳ ಒಡಲಿಗೆ ನೀರು ಸೇರುತ್ತಿಲ್ಲ ಎನ್ನುವ ಸ್ಥಿತಿ ಇದೆ.

ಇವುಗಳಲ್ಲಿ ಬಹಳಷ್ಟು ಕೆರೆಗಳು ನಿರ್ವಹಣೆ ಕೊರತೆ ಹಾಗೂ ಭೂಮಾಫಿಯಾದ ಅತಿಕ್ರಮಣಕ್ಕೆ ಬಲಿಯಾಗಿವೆ. ಸುಮಾರು ಒಂದೂವರೆ ದಶಕಗಳಿಂದ ಉತ್ತಮ ಮಳೆಯಾಗದ ಕಾರಣ ಬೆಟ್ಟದ ತಪ್ಪಲಿನಲ್ಲಿ ಮಳೆ ನೀರನ್ನು ಸಂಗ್ರಹಿಸಬಲ್ಲ ಬೆರಳೆಣಿಕೆಯಷ್ಟು ಕೆರೆಗಳನ್ನು ಬಿಟ್ಟರೆ ಉಳಿದಂತೆ ಸಾಕಷ್ಟು ಕೆರೆಗಳು ಅವನತಿಯ ಅಂಚಿನಲ್ಲಿವೆ. ಮೂಲ ಸೌಂದರ್ಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡಿವೆ.

ಕೆರೆ ಅಂಗಳದಲ್ಲಿಯೇ ಇಟ್ಟಿಗೆ ನಿರ್ಮಾಣ ಕಾರ್ಯ, ಇದ್ದಿಲು ತಯಾರಿಕಾ ಕಾರ್ಯ ಸೇರಿದಂತೆ ‌ಇನ್ನಿತರ ಕಾರ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಬಹುತೇಕ ಕೆರೆಗಳನ್ನು ಸೀಮೆಜಾಲಿಗಿಡಗಳು ತುಂಬಿವೆ. ಇದರಿಂದಾಗಿ ಕೆರೆಗಳ ಸ್ವರೂಪವೇ ಬದಲಾಗಿವೆ. ಕೆರೆಯ ಏರಿ ಮತ್ತು ಕೋಡಿ ಪ್ರದೇಶಗಳು ಶಿಥಿಲವಾಗಿವೆ

ಪ್ರತಿ ಕೆರೆಯು ಸುತ್ತಲಿನ ಗ್ರಾಮಗಳಿಗೆ ಜೀವಾಳವಿದ್ದಂತೆ. ಕೆರೆಗಳು ಉಳಿದರೆ ಮಳೆ ನೀರು ಸಂಗ್ರಹಣೆ ಸಾಧ್ಯ. ಅಂತರ್ಜಲ ಮಟ್ಟವನ್ನು ಕಾಪಾಡಲು ಸಹಕಾರಿ. ಕೆರೆಗಳ ನಿರ್ವಹಣೆ ಜವಾಬ್ದಾರಿ ‌ಹೊತ್ತಿರುವ ಸಣ್ಣ ನೀರಾವರಿ
ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾ.ಪಂ ನೆಪ ಮಾತ್ರಕ್ಕೆ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗುತ್ತವೆ ಎನ್ನುತ್ತಾರೆ ನಾಗರಿಕರು.

ಸಾದಲಿ ಹೋಬಳಿ ಎಲ್ಲ ಗ್ರಾಮ ಪಂಚಾಯಿತಿಗಳು ಮೀನುಗಾರಿಕೆಗೆ ಮುಂದಾಗಿವೆ. ಈ ನಿಟ್ಟಿನಲ್ಲಿ ಕೆರೆಗಳಲ್ಲಿ ಮೀನುಸಾಕಲು ಹರಾಜಿನ ಮೂಲಕ ಗುತ್ತಿಗೆದಾರರ ಅನುಮತಿ ನೀಡಲಾಗಿದೆ. ಅನುಮತಿ ನೀಡಲಾದ ಎಲ್ಲ ಕರೆಗಳಲ್ಲಿ ಮುಳ್ಳಿನ ಗಿಡಗಳು ಹಾಗೂ ತ್ಯಾಜ್ಯ ವಸ್ತುಗಳ ಹೆಚ್ಚಾಗಿವೆ. ಇದರಿಂದ ಜಲಚರ ಪ್ರಾಣಿಗಳ ಅಭಿವೃದ್ಧಿ ಕುಂಠಿತವಾಗುತ್ತಿವೆ. ಹರಾಜಿನಿಂದ ಬಂದ ಹಣದಲ್ಲಾದರೂ ಕೆರೆಯಲ್ಲಿರುವ ತ್ಯಾಜ್ಯ ಮತ್ತು ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವುದರಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ.

ರಾಮಸಮುದ್ರ ಕೆರೆಗೆ ಬೇಕು ಕಾಯಕಲ್ಪ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ನೀರು ಸಂಗ್ರಹವಾಗುವುದು ಸಾದಲಿ ಹೋಬಳಿಯ ರಾಮಸಮುದ್ರ ಕೆರೆಯಲ್ಲಿ. 0.28 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಮೊದಲ ಕೆರೆ ಇದಾಗಿದೆ.

1894ರಲ್ಲಿ ಮೈಸೂರಿನ ಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಸಾರಥ್ಯದಲ್ಲಿ ನಿರ್ಮಾಣವಾದ ಈ ಕೆರೆ 2,200 ಅಚ್ಚುಕಟ್ಟು ಪ್ರದೇಶ ಹೊಂದಿದೆ. ರಾಮಸಮುದ್ರ ಕೆರೆಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಪ್ರವಾಸಿ ತಾಣಕ್ಕೆ ಪೂರಕ ಎಲ್ಲ ರೀತಿಯ ವಾತಾವರಣವಿದೆ. ಆದರೆ ಯಾವುದೇ ಅಭಿವೃದ್ಧಿ ಇಲ್ಲಿ ನಡೆಯುತ್ತಿಲ್ಲ.

ಒತ್ತುವರಿ ತೆರವುಗೊಳಿಸಿ

ಸಾದಲಮ್ಮನ ಕೆರೆಯ ಒಟ್ಟು ವಿಸ್ತೀರ್ಣ 44 ಎಕರೆ ಇದೆ. ಆದರೆ ಭೂಗಳ್ಳರಿಂದ ಒತ್ತುವರಿಯಾಗಿದೆ. ನೀರು ಸಂಗ್ರಹವಾಗುವುದು ಕಷ್ಟವಾಗಿದ್ದಯಕೆರೆ 20 ಎಕರೆಯಷ್ಟು ಮಾತ್ರ ವಿಸ್ತೀರ್ಣವನ್ನು ಹೊಂದಿದೆ. ಕೆರೆಯ ಹೂಳೆತ್ತಿ ಸುಮಾರು ವರ್ಷಗಳೇ ಕಳೆದಿದೆ. ಮಳ್ಳು ಗಿಡಗಳು ಹೆಚ್ಚಿವೆ.

ಮಹದೇವ, ಸಾದಲಿ

ಸ್ವರೂಪವೇ ಬದಲು

ಪೂರ್ವಿಕರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ರಾಜಕಾಲುವೆಗಳ ಮೂಲಕ ನೀರಿನ ಸಂಪರ್ಕ ಕಲ್ಪಿಸಿದ್ದರು. ಈಗ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆ ನೀರು ಕೆರೆಗಳಿಗೆ ಹರಿಯುತ್ತಿಲ್ಲ. ಮತ್ತೊಂದೆಡೆ ಒತ್ತುವರಿಯಿಂದ ಕೆರೆ ಹಾಗೂ ರಾಜಕಾಲುವೆಗಳ ಮೂಲ ಸ್ವರೂಪವೇ ಬದಲಾಗಿದೆ.

ಎಸ್.ಜೆ. ಶ್ರೀನಿವಾಸಪ್ಪ, ಪರಿಸರ ಪ್ರೇಮಿ,ಸಾದಲಿ

ಭೂಗಳ್ಳರ ವಿರುದ್ಧ ಕ್ರಮ

ಸಣ್ಣಪುಟ್ಟ ಜಮೀನು ಒತ್ತುವರಿ ಮಾಡುವ ರೈತರ ಮೇಲೆ ಶಿಸ್ತುಕ್ರಮ ಜರುಗಿಸುವ ಜಿಲ್ಲಾಡಳಿತ ಕೆರೆ, ರಾಜಕಾಲುವೆಗಳ ಒತ್ತುವರಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಅಧಿಕಾರಿಗಳು ನೆಪ ಮಾತ್ರಕ್ಕೆ ಕೆಲ ಸರ್ಕಾರಿ ಜಮೀನು
ಗಳ ಒತ್ತುವರಿ ತೆರವುಗೊಳಿಸಿ ತೆರೆಮರೆಯಲ್ಲಿ ರಿಯಲ್‌ ಎಸ್ಟೇಟ್‌ ದಂಧೆಕೋರರ ಜತೆ ವ್ಯವಹಾರ ನಡೆಸುತ್ತಿದ್ದಾರೆ.

ಮೋಹನ್ ಎಸ್.ಎಂ., ಸೊಣಗಾನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT