ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ವಿಕಾಸವೇ ನಿಜವಾದ ಶಿಕ್ಷಣ: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಪೆರೇಸಂದ್ರದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ 9ನೇ ವಾರ್ಷಿಕೋತ್ಸವ ‘ಆವಿಷ್ಕಾರ’ ಕಾರ್ಯಕ್ರಮ
Last Updated 28 ಜನವರಿ 2020, 13:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ದೇಶವೊಂದರ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಮಾನದಂಡವೇ ವಿನಾ ಕೇವಲ ಶಸ್ತ್ರಾಸ್ತ್ರಗಳ ಸಂಗ್ರಹ, ಗಗನಚುಂಬಿ ಕಟ್ಟಡಗಳು ಮತ್ತು ಬೆಲೆಬಾಳುವ ಕಾರುಗಳಲ್ಲ ಎಂದು ನಾವು ಅರ್ಥೈಸಿಕೊಳ್ಳಬೇಕಿದೆ’ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪೆರೇಸಂದ್ರದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ 9ನೇ ವಾರ್ಷಿಕೋತ್ಸವ ‘ಆವಿಷ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಪಾನ್ ದೇಶವು ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಶಿಕ್ಷಣ ನೀಡುತ್ತಿದೆ. ಹೀಗಾಗಿ ಆ ದೇಶದ ಪ್ರತಿಯೊಬ್ಬ ಪ್ರಜೆಯು ದೇಶದ ಅಭಿವೃದ್ಧಿಗೆ ವೈಯಕ್ತಿಕ ಕೊಡುಗೆ ನೀಡುತ್ತಾನೆ. ಅಲ್ಲಿನ ಶಿಕ್ಷಣ ಅವನನ್ನು ದೇಶದ ಅಭಿವೃದ್ಧಿಯ ನೇರ ಹೊಣೆಗಾರನ್ನನಾಗಿ ರೂಪಿಸುತ್ತದೆ. ಎರಡನೆ ಮಹಾ ಯುದ್ದದಲ್ಲಿ ಬಾಂಬುಗಳ ದಾಳಿಗೆ ಸಿಕ್ಕಿ ಛಿದ್ರವಾಗಿದ್ದ ಜಪಾನ್ ಕೆಲವೇ ದಶಕಗಳಲ್ಲಿ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಲು ಇದೇ ಮುಖ್ಯ ಕಾರಣ’ ಎಂದು ತಿಳಿಸಿದರು.

‘ಬರೀ ಮಾಹಿತಿ ಸಂಗ್ರಹ ಶಿಕ್ಷಣವಲ್ಲ. ಏಕಾಗ್ರತೆ ಮತ್ತು ಮನಸ್ಸಿನ ವಿಕಾಸ ನಿಜವಾದ ಶಿಕ್ಷಣ. ಅಂತಹ ಮಾನವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣ ಶಿಕ್ಷಣವನ್ನು ವಿವೇಕಾನಂದರು ಪ್ರತಿಪಾದಿಸಿದ್ದರು. ಇದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು. ಹೆಬ್ಬಂಡೆಯೊಂದು ಸಾವಿರಾರು ಉಳಿ ಪೆಟ್ಟು ತಿಂದು ವಿಗ್ರಹವಾದ ಬಳಿಕವಷ್ಟೇ ಜನರಿಂದ ಆಧಾರಿಸಲ್ಪಡುತ್ತದೆ. ಅದರಂತೆ ಕಲ್ಲಿನಂತಿರುವ ಮುಗ್ಧ ಮಕ್ಕಳನ್ನು ಸುಂದರ ವಿಗ್ರಹವನ್ನಾಗಿ ರೂಪಿಸುವ ಶಿಕ್ಷಣ ನಮಗೆ ಬೇಕು’ ಎಂದರು.

‘ರಾಷ್ಟ್ರವು ಕೇವಲ ಭೌಗೋಳಿಕ ಪರಿಕಲ್ಪನೆಯಲ್ಲ. ಆ ರೀತಿ ಭಾವಿಸಿದರೆ ನಾವು ಕೇವಲ ಜನಗಳಾಗುತ್ತೇವೆ. ಆದರೆ ರಾಷ್ಟ್ರವನ್ನು ಭಾವನಾತ್ಮಕ ನೆಲೆಯಿಂದ ಗುರುತಿಸಬೇಕು. ಜನರು ಬುದ್ಧಿಯ ಜತೆಗೆ ಭಾವನಾತ್ಮಾಕವಾಗಿ ಬೆಳೆದರೆ ಅವರು ಪೌರರಾಗುತ್ತಾರೆ. ಭಾರತದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪರ–ವಿರೋಧ ಪ್ರತಿಭಟನೆಗಳು ನಡೆದಿವೆ. ಜನತೆಯು ನಿಜ ಪೌರತ್ವವನ್ನು ಅರ್ಥ ಮಾಡಿಕೊಂಡು ಬಾಳಿದರೆ ದೇಶಕ್ಕೆ ಘನತೆ ಬರುತ್ತದೆ’ ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ಎನ್.ರೂಪಾ ಮಾತನಾಡಿ, ‘ಮಕ್ಕಳಿಗೆ ತಮ್ಮ ತಾಯಿ ತಂದೆಯರೇ ನಿಜವಾದ ನಾಯಕರು. ಪೋಷಕರಿಗೆ ಮಕ್ಕಳ ಉತ್ತಮ ಭವಿಷ್ಯವೇ ಜೀವನದ ಸರ್ವಸ್ವ. ಹಾಗಾಗಿ, ಮಕ್ಕಳಿಗೆ ತಮ್ಮ ಕಷ್ಟಗಳನ್ನು ಹೇಳುವುದಿಲ್ಲ, ಬದಲಾಗಿ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿ ಕೊಡುವ ಕನಸು ಹೊಂದಿರುತ್ತಾರೆ. ಆದ್ದರಿಂದ ಮಕ್ಕಳು ತಾಯಿ–ತಂದೆ ಕನಸನ್ನು ನನಸಾಗಿಸಬೇಕೇ ಹೊರತು ಎಂದಿಗೂ ಛಿದ್ರಗೊಳಿಸಬಾರದು’ ಎಂದು ತಿಳಿಸಿದರು.

ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ, ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಜ್ಞಾನ ಸಂಪತೇ ಎಲ್ಲ ರೀತಿಯ ಅಭಿವೃದ್ಧಿಗೆ ಕಾರಣ. ವಿದ್ಯಾರ್ಥಿಗಳು ಸದಾ ಜ್ಞಾನದಾಹಿಗಳಾಗಬೇಕು ಮತ್ತು ಆ ಜ್ಞಾನವನ್ನು ಮಾನವ ಕುಲದ ಕಲ್ಯಾಣಕ್ಕೆ ಬಳಸಬೇಕು. ಬುದ್ಧಿಶಕ್ತಿಯನ್ನು ಜನಪರ ಮತ್ತು ಸಮಾಜಮುಖಿಯಾಗಿ ಬಳಸಬೇಕು. ಶಿಕ್ಷಣ ಮತ್ತು ಆರೋಗ್ಯ ಸಮಾಜದ ಎರಡು ಕಣ್ಣುಗಳು ಇದ್ದಂತೆ. ಅವು ಎರಡಕ್ಕೂ ಈ ಭಾಗದಲ್ಲಿ ಒತ್ತು ನೀಡುವುದೇ ನನ್ನ ಜೀವನದ ಮುಖ್ಯ ಉದ್ದೇಶ’ ಎಂದರು.

‘ಗ್ರಾಮೀಣ ಭಾಗದ ಮಕ್ಕಳು ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ. ಬಡಕುಟುಂಬಗಳಿಂದ ಬಂದ ಮಕ್ಕಳು ತಮ್ಮ ಪರಿಶ್ರಮದಿಂದಲೇ ಇತಿಹಾಸ, ಬದಲಾಯಿಸಿ ಹೊಸ ಇತಿಹಾಸ ಬರೆದಿದ್ದಾರೆ. ಇದಕ್ಕೆ ಬುದ್ಧ, ಬಸವ, ಅಂಬೇಡ್ಕರ್, ನಮ್ಮ ಜಿಲ್ಲೆಯವರೇ ಆದ ವಿಶ್ವೇಶ್ವರಯ್ಯ, ಎಚ್.ನರಸಿಂಹಯ್ಯ ಅವರೇ ಉದಾಹರಣೆ. ನಮಗೋಸ್ಕರ ಬದುಕುವುದೇ ಬದುಕಲ್ಲ. ಇತರರಿಗೋಸ್ಕರ ಬದುಕುವುದರಲ್ಲಿ ಹೆಮ್ಮೆ ಇರಲಿ. ನೀವು ಏನನ್ನಾದರೂ ಮಾಡಿ, ಆದರೆ ಅದು ಸಮಾಜ ಮುಖಿಯಾಗಿರಬೇಕು. ಸಾಧನೆಗೆ ಎಂದೂ ಅಡ್ಡದಾರಿ ಹುಡುಕಬೇಡಿ, ಪ್ರಾಮಾಣಿಕವಾಗಿ ಮೇಲೆ ಬನ್ನಿ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಜನಪದ ಮತ್ತು ಸಾಂಸ್ಕೃತಿಕ ನೃತ್ಯಗಳು ಮನಸೂರೆಗೊಂಡವು. ರೂಪದರ್ಶಿ ಶುಭ ಶ್ರೀರಾಮ್, ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪ್ರೀತಿ ಸುಧಾಕರ್, ಪೇರೇಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಚನ್ನಕೃಷ್ಣಾರೆಡ್ಡಿ, ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ, ಉಪಪ್ರಾಂಶುಪಾಲ ಅಜೀಶ್, ಮಾನವ ಸಂಪನ್ಮೂಲ ಅಧಿಕಾರಿ ದೀಪಕ್ ಮ್ಯಾಥ್ಯೂ, ಶಿಕ್ಷಕರಾದ ಹನುಮಂತರೆಡ್ಡಿ, ದೀಪಕ್ ಮ್ಯಾಥ್ಯೂ, ನಸರೀನ್ ತಾಜ್, ಮಮತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT