ಬುಧವಾರ, ನವೆಂಬರ್ 25, 2020
22 °C
ಮೊಮ್ಮಗಳಿಂದ ಯೂಟ್ಯೂಬ್‌ನಲ್ಲಿ ಅಜ್ಜಿ ಕಲಿತ ಕಲೆ

ಉಲ್ಲನ್‌ ಮೊಬೈಲ್‌ ಚೀಲ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರಿನ ಅಕ್ಕಯ್ಯಮ್ಮ ಅವರ ಉಲ್ಲನ್ ದಾರದ ಹೆಣಿಗೆ ಕೌಶಲ, ಬುಡತಿತ್ತಿ (ಎಲೆ ಅಡಿಕೆ ಚೀಲ)ಯಿಂದ ಮೊಬೈಲ್ ಚೀಲದವರೆಗೆ ಹಾದು ಬಂದಿದೆ.

ತನ್ನ ಅಕ್ಕನಿಂದ ಸುಮಾರು 50 ವರ್ಷಗಳ ಹಿಂದೆ ಉಲ್ಲನ್ ದಾರದ ಹೆಣಿಗೆ ಕಲಿತಿದ್ದರು. ಆಗಿನ ಕಾಲದಲ್ಲಿ ಹೆಂಗಸರಿಗೆ ಅತ್ಯಂತ ಅಗತ್ಯದ ಎಲೆ ಅಡಿಕೆ ಚೀಲ(ಬುಡತಿತ್ತಿ) ತಯಾರಿಸಿ ಮಾರುತ್ತಿದ್ದರು. 90ರ ದಶಕದವರೆಗೂ ಹೆಣೆಯುತ್ತಾ ಬಂದಿದ್ದ ಅವರು ಬೇಡಿಕೆ ಕಡಿಮೆಯಾದಂತೆ ನಿಲ್ಲಿಸಿ ಬಿಟ್ಟಿದ್ದರು.

ಇದೀಗ ಮೊಮ್ಮಗಳು ಯೂಟ್ಯೂಬ್ ಮೂಲಕ ಹಲವು ರೀತಿಯ ಉಲ್ಲನ್ ಹೆಣಿಗೆಯನ್ನು ತೋರಿಸಿದ್ದರಿಂದ ಉತ್ಸಾಹಗೊಂಡ ಮೇಲೂರಿನ ಅಕ್ಕಯ್ಯಮ್ಮ, ಮೊಬೈಲ್ ಬ್ಯಾಗ್‌ಗಳು, ಜಿಪ್‌ಪರ್ಸ್, ಪೂಜೆ ತಟ್ಟೆಯ ಮೇಲೆ ಮುಚ್ಚುವ ರೀತಿಯದ್ದು ಮೊದಲಾದ ರೀತಿಯ ಹೆಣಿಗೆ ಮಾಡುತ್ತಿದ್ದಾರೆ. ಗಾರ್ಮೆಂಟ್ಸ್‌ಗೆ ಹೋಗುವ ಮಹಿಳೆಯರಿಂದ ಇವರು ಸಿದ್ಧಪಡಿಸುವ ಮೊಬೈಲ್ ಚೀಲಗಳಿಗೆ ಬೇಡಿಕೆ ಹೆಚ್ಚಿದೆ.

‘ಚಿಕ್ಕ ವಯಸ್ಸಿನಲ್ಲಿಯೇ ಉಲ್ಲನ್ ಹೆಣಿಗೆಯನ್ನು ಹವ್ಯಾಸವಾಗಿ ಕಲಿತೆ. ಆಗೆಲ್ಲಾ ಪ್ಲಾಸ್ಟಿಕ್ ವೈರ್‌ಬ್ಯಾಗ್ ಮತ್ತು ಉಲ್ಲನ್ ಬುಡತಿತ್ತಿಗಳಿಗೆ ಬೇಡಿಕೆ ಇತ್ತು. ದೇವನಹಳ್ಳಿಯಿಂದ ಬೂಬಮ್ಮ ವಾರಕ್ಕೊಮ್ಮೆ ಬಂದು ನಾನು ಸಿದ್ಧಪಡಿಸಿಟ್ಟ ಬುಡತಿತ್ತಿಗಳನ್ನು ಕೊಂಡು ಹೋಗುತ್ತಿದ್ದಳು. ನಂತರ ಬೇಡಿಕೆ ಕುಸಿದಂತೆ ನಾನೂ ನಿಲ್ಲಿಸಿಬಿಟ್ಟೆ. ಲಾಕ್‌ಡೌನ್ ಸಮಯದಲ್ಲಿ ನನ್ನ ಮೊಮ್ಮಗಳು ಲಹರಿ ಯೂಟ್ಯೂಬ್ ತೋರಿಸಿ ಹೆಣಿಗೆಯ ವೈವಿಧ್ಯವನ್ನು ಪರಿಚಯಿಸಿದಳು. ಅದನ್ನು ನೋಡಿ ಉಲ್ಲನ್ ಮೊಬೈಲ್ ಚೀಲ ಸಿದ್ಧಪಡಿಸಿದೆ. ದೊಡ್ಡಬಳ್ಳಾಪುರಕ್ಕೆ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುವ ಮಹಿಳೆಯೊಬ್ಬರು ಕೊಂಡುಕೊಂಡು ಹೋದರು. ಅವರನ್ನು ನೋಡಿ ಉಳಿದವರು ಕೇಳಿದಂತೆ ಬೇಡಿಕೆ ಬಂತು. ನಾನು ಹೆಣಿಗೆ ಮುಂದುವರಿಸಿದ್ದೇನೆ’ ಎಂಬುದು ಮೇಲೂರಿನ ಅಕ್ಕಯ್ಯಮ್ಮ ಅವರ ವಿವರಣೆ.

‘ನನ್ನ ಮಗ ರಾಮಕೃಷ್ಣ ಶಿಡ್ಲಘಟ್ಟದಿಂದ ಬಣ್ಣಬಣ್ಣದ ಉಲ್ಲನ್ ಉಂಡೆಗಳನ್ನು ತಂದುಕೊಡುತ್ತಾನೆ. ಮೊಮ್ಮಗಳು ವಿವಿಧ ವಿನ್ಯಾಸಗಳನ್ನು ಮೊಬೈಲ್‌ನಲ್ಲಿ ತೋರಿಸುತ್ತಾಳೆ. ನಾನು ಹೆಣೆಯುತ್ತೇನೆ. ಮೊಮ್ಮಗಳು ಆಸಕ್ತಿವಹಿಸಿದ್ದು, ಅವಳಿಗೂ ಕಲಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು