ಗುರುವಾರ , ನವೆಂಬರ್ 26, 2020
20 °C

ಕಣ್ಮನ ಸೆಳೆಯುವ ಕಾಡು ಹೂಗಳು

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ಕಾಡು ಹೂಗಳು ಅಥವಾ ವನಸುಮಗಳು ತಾಲ್ಲೂಕಿನಲ್ಲಿ ರಸ್ತೆಬದಿ, ಹೊಲಗಳ ಬಳಿ, ಪೊದೆಗಳಲ್ಲಿ, ಕಳೆ ಗಿಡಗಳ ನಡುವೆ ಅರಳಿ ನಿಂತಿದ್ದು ತಮ್ಮ ಬಣ್ಣ ಮತ್ತು ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿವೆ.

ಕೆಲವು ಹಳ್ಳಿಗಳ ಹೊರವಲಯಗಳಲ್ಲಂತೂ ಈ ಹೂಗಳಿಂದಾಗಿ ಹಳ್ಳಿಗೇ ಸೌಂದರ್ಯದ ಸೊಬಗು ಇಮ್ಮಡಿಸಿದಂತಾಗಿದೆ. ನೋಡುಗರ ಮನಸ್ಸಿಗೆ ಆನಂದ ನೀಡುವುದರೊಂದಿಗೆ ಸೌಂದರ್ಯದ ಖನಿಗಳಾದ ಈ ಹೂಗಳಿಂದ ಹಲವಾರು ಉಪಯೋಗಗಳೂ ಇವೆ. ದುಂಬಿಗಳು, ಚಿಟ್ಟೆಗಳು ಹಾಗೂ ಪತಂಗಗಳಿಗೆ ಇವು ನೆಚ್ಚಿನವು. ಈ ಸಸ್ಯಗಳು ಹಲವು ಔಷಧೀಯ ಗುಣಗಳನ್ನೂ ಹೊಂದಿವೆ.

ಕಡು ಗುಲಾಬಿ ಬಣ್ಣದ ತ್ರಿಭುಜಾಕಾರದ ಎಲೆಗಳುಳ್ಳ ಐದು ಎಸಳಿನ ಸೊರೆಲ್ ಹೂಗಳು, ಹಳದಿ ಬಣ್ಣದ ಆಕರ್ಷಕ ಕ್ಯಾಸಿಯಾ ಹೂಗಳು, ಕೆಂಪು ರೋಮಗಳಂತಿರುವ ಮುಟ್ಟಿದರೆ ಮುನಿ ಹೂಗಳು, ಇಂಗ್ಲಿಷ್‌ನಲ್ಲಿ ಕೋಟ್ ಬಟನ್ ಎಂದು ಕರೆಯುವ ಸಣ್ಣ ಸೇವಂತಿ ಹೂಗಳು, ಹೃದಯಾಕಾರದ ಎಲೆಗಳಿರುವ ಬಳ್ಳಿಯಲ್ಲಿ ಬಿಡುವ ಬಿಳಿಚಿದ ಬುಗುರಿ ಹೂಗಳು, ಕಪ್ಪು ಮುಳ್ಳುಗಳಿರುವ ಸಸ್ಯದಲ್ಲಿ ಅರಳುವ ಸಿಂಹಿ ಹೂಗಳು, ಆಕರ್ಷಕ ಪುಟ್ಟಪುಟ್ಟ ನೀಲಿ ಹೂಗಳ ಗುಚ್ಛದಂತಿರುವ ಕರಿಯುತ್ತರಾಣಿ ಹೂಗಳು, ಶಿವನಿಗೆ ಪ್ರಿಯವಾದ ತುಂಬೆ ಹೂಗಳು... ಹೀಗೆ ಹೂಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

‘ಯಾರ ಮುಡಿಗೂ ಏರದೆ, ಯಾವ ದೇವರ ಪಾದವನ್ನೂ ಸೇರದೆ, ತನ್ನಷ್ಟಕ್ಕೆ ತಾನರಳಿ, ಮಕರಂದವನ್ನು ಹಂಚಿ, ಅಳಿದು ಹೋಗುವ ಈ ಸುಂದರ ಹೂಗಳನ್ನು ನೋಡುವುದೇ ಚೆನ್ನ. ಪ್ರತಿದಿನ ಈ ರೀತಿಯ ಹೂಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ ಆಪ್ತರಿಗೆ ವಾಟ್ಸ್‌ಆ್ಯಪ್‌ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ’ ಎನ್ನುತ್ತಾರೆ ಶಿಕ್ಷಕ ಕಾಚಹಳ್ಳಿ ಎಂ. ದೇವರಾಜ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.