ಗುರುವಾರ , ಜೂನ್ 30, 2022
25 °C
80 ಹೂ ಒಂದೇ ಬಾರಿ ನೋಡುವ ಕೌತುಕ

ಬ್ರಹ್ಮಕಮಲ ಅರಳುವ ಸಮಯ ವಿಸ್ಮಯ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದ 8 ನೇ ವಾರ್ಡ್‌ನ ಮನೋಹರಾಚಾರಿ ಮನೆಯ ಮುಂದೆ ಇರುವ ಬ್ರಹ್ಮಕಮಲದ ಗಿಡದಲ್ಲಿ 80 ಬ್ರಹ್ಮಕಮಲಗಳು ಅರಳಿದ್ದು, ನೆರೆದ ಜನರನ್ನು ಕೌತುಕ ಮೂಡಿಸಿವೆ.

‘ರಾತ್ರಿರಾಣಿಯರು’ ಎಂದೇ ಪ್ರಸಿದ್ಧರಾಗಿರುವ ಈ ಪುಷ್ಪವು ರಾತ್ರಿಯ ವೇಳೆಯೇ ಅರಳಿ, ಬೆಳಗಾಗುವುದರ ಒಳಗೆ ಬಾಡಿ ಹೋಗುವ ಅಪರೂಪದ ಪುಷ್ಪವಾಗಿದೆ. ವರ್ಷಕ್ಕೊಮ್ಮೆ ಅದೂ ರಾತ್ರಿ ಸಮಯದಲ್ಲಿ ಮಾತ್ರ ಅರಳುವ ಹೂವುಗಳಲ್ಲಿ ಇದು ಒಂದಾಗಿದೆ. ಇದನ್ನು ಬಿಳಿಹೂವು ಎಂದು ಕರೆಯಲಾಗುವುದು. ಈ ಹೂವುಗಳನ್ನು ನೋಡುವುದೇ ಸೊಬಗು. ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸಿ, ಹೂವುಗಳನ್ನು ನೋಡಿ ಸಂತಸಪಟ್ಟರು.

ಬ್ರಹ್ಮಕಮಲ ಹೂವು ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯು ಜನರಲ್ಲಿ ಇದೆ. ದೈವಿಕ ಭಾವನೆಯಿಂದ ಹಾಗೂ ಅಲಂಕಾರಿಕ ಗಿಡವಾಗಿಯೂ ಬೆಳೆಸಲಾಗುತ್ತದೆ.

ಇದು ಅರಳುವ ಪ್ರಕ್ರಿಯೆ ಬಲು ವಿಶಿಷ್ಟವಾಗಿದೆ. ಹೂವು ಅರಳಿದಾಗ ಅದನ್ನು ನೋಡುವವರ ಮನವೂ ಅರಳುತ್ತದೆ. ಎಲ್ಲಾ ಹೂವುಗಳು ಮೊಗ್ಗಿನ ಹಂತ ದಾಟಿ ಅರಳಲೇಬೇಕು. ಅರಳುವ ಹಂತವನ್ನು ಯಾರೂ ಅಷ್ಟು ಕುತೂಹಲವಾಗಿ ಗಮನಿಸುವುದಿಲ್ಲ. ಇದರ ವೈಶಿಷ್ಟತೆ ಎಂದರೆ ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದ್ರ ಬರುವುದನ್ನು ಕಾದು 10 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಕಮರುತ್ತದೆ.

ಕ್ವಾಕ್ಟಸ್ ಜಾತಿಗೆ ಸೇರಿದ ಇದರ ವೈಜ್ಞಾನಿಕ ಹೆಸರು ಎಫಿಪಿಲ್ಲಂ ಅಕ್ಸಿಪೆಟಲಂ. ಇದು ಭಾರತದತ್ತ 17ನೇ ಶತಮಾನದಲ್ಲಿ ಬಂದಿತೆಂದು ಹೇಳಲಾಗಿದೆ. ಇತರೆ ಪುಷ್ಪಗಿಡಗಳಿಗೆ ವಿಭಿನ್ನವಾಗಿರುವ ಈ ಗಿಡವು 10ರಿಂದ 20 ಅಡಿ ಅಷ್ಟು ಎತ್ತರಕ್ಕೆ ಬೆಳೆಯುತ್ತದೆ. ರಂಬೆ, ಕೊಂಬೆಗಳೇ ಇಡೀ ಸಸ್ಯದ ಜೀವಾಳಗಳಾಗಿವೆ.

ಪಟ್ಟಣದ 8ನೇ ವಾರ್ಡ್‌ ಮನೋಹರಾಚಾರಿ ಮನೆ ಮುಂದೆ ಸೋಮವಾರ ರಾತ್ರಿ 80ಕ್ಕೂ ಹೆಚ್ಚು ಬ್ರಹ್ಮಕಮಲಗಳು ಅರಳಿವೆ. ಸುತ್ತಮುತ್ತಲಿನ ಮಹಿಳೆಯರು ಈ ಗಿಡಗಳ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ, ಕಬ್ಬು ಹಾಗೂ ಬಾಳೆಗಿಡದಿಂದ ಸಿಂಗರಿಸಿ ವಿಶೇಷ ಪೂಜೆ ಮಾಡಿದರು.

‘ಹತ್ತು ವರ್ಷಗಳಿಂದ ಮನೆ ಮುಂದೆ ವರ್ಷಕ್ಕೊಮ್ಮೆ 80ರಿಂದ 100 ಹೂವುಗಳು ಅರಳುತ್ತವೆ. ಅರಳುವ ಸಮಯಕ್ಕೆ ಕಾತುರದಿಂದ ಕಾಯುತ್ತೇವೆ. ಹೂವು ಅರಳುವ ಸಮಯ ನೋಡಲು ವಿಸ್ಮಯವಾಗಿದೆ. ಸುತ್ತಲೂ ಘಮಘಮಿಸುವ ಸುವಾಸನೆ ಬೀರುತ್ತವೆ. ರಾತ್ರಿಯಲ್ಲಿ ಹೂವುಗಳನ್ನು ನೋಡುವುದೇ ಸಂತೋಷ
ಆಗಿದೆ. ಮೊದಲ ದಿನ ಸಾಕಷ್ಟು ಹೂಗಳು ಬರುಬರುತ್ತಾ ಹೂವುಗಳ ಸಂಖ್ಯೆ ಕಡಿಮೆ ಆಗುತ್ತವೆ’ ಎಂದು ಮನೋಹರಾಚಾರಿ ತಿಳಿಸಿದರು.

‘ವರ್ಷಕ್ಕೊಮ್ಮೆ ಅರಳುವ ಈ ಹೂವಿಗೆ ಪೌರಾಣಿಕ ಹಿನ್ನೆಲೆ ಇದೆ. ಗಣೇಶನ ತಲೆಯನ್ನು ಕತ್ತರಿಸಿದ ನಂತರ ಶಿವನು ಆನೆಯ ತಲೆಯನ್ನು ಜೋಡಿಸಿ ಈ ಹೂವಿನ ನೀರನ್ನು ಪ್ರೋಕ್ಷಿಸಿ ಬದುಕಿಸಿದರೆಂದೂ ಪ್ರತೀತಿ ಇದೆ. ಪಾಂಡವರು ತಮ್ಮ ವನವಾಸ ಕಾಲದಲ್ಲಿ ದ್ರೌಪದಿ ಬ್ರಹ್ಮಕಮಲವನ್ನು ತಂದುಕೊಡುವಂತೆ ಪತ್ನಿ ಭೀಮಸೇನನಿಗೆ ಹೇಳಿದ್ದಾಗಿ ಹಿನ್ನೆಲೆ ಇದೆ. ನಮ್ಮ ಮನೆ ಮುಂದೆ ಪ್ರತಿ ವರ್ಷವು ಈ ಹೂವುಗಳು ಬಿಡುತ್ತವೆ. ಪ್ರತಿವರ್ಷವು ವಿಶೇಷ ಪೂಜೆ ಮಾಡುತ್ತೇವೆ’ ಎಂದು ಹಿರಿಯರಾದ ನಾಗಲಕ್ಷ್ಮಮ್ಮ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು