ಶಿಡ್ಲಘಟ್ಟ: ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಧಮ್ಕಿ ಹಾಕಿ, ನಿಂದಿಸಿರುವ ಮಾತುಗಳು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಂಪನಕ್ಕೆ ಕಾರಣವಾಗಿವೆ.

ಈ ಹಿಂದಿನಿಂದಲೂ ಶಿಡ್ಲಘಟ್ಟದ ಕಾಂಗ್ರೆಸ್ ಒಡೆದ ಮನೆಯಾಗಿತ್ತು. ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ತಮಗೆ ಸಿಕ್ಕ ರಾಜಕೀಯ ಅವಕಾಶಗಳಲ್ಲೆಲ್ಲಾ ಪರಸ್ಪರ ಎದುರಾಳಿಗಳಂತೆ ಕತ್ತಿವರಸೆ ಆಡುವುದರಲ್ಲೇ ನಿರತರಾಗಿದ್ದರು. ಚಲನಚಿತ್ರ ನಟರ ಬೆಂಬಲಿಗರು ಪರಸ್ಪರ ಕಿತ್ತಾಡುವಂತೆ ಕಾಂಗ್ರೆಸ್ನ ಈ ಇಬ್ಬರು ಮುಖಂಡರ ಬೆಂಬಲಿಗರು ಪರಸ್ಪರ ಕಿತ್ತಾಡುತ್ತಲೇ ಇದ್ದಾರೆ.

ಸಚಿವ ಡಾ.ಎಂ.ಸಿ.ಸುಧಾಕರ್ ಅಸಮಧಾನ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಈ ಹಿಂದೆ ರಾಜೀವ್ ಗೌಡ ಅವರ ಹಠಮಾರಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

‘ಶಿಡ್ಲಘಟ್ಟ ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಗೊಂದಲ ನಿವಾರಿಸಲು ಎಲ್ಲರನ್ನೂ ಕರೆಸಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಆದರೆ ರಾಜೀವ್ ಗೌಡ ಅವರು ತಾವು ಹೇಳಿದ್ದೇ ನಡೆಯಬೇಕು ಎಂದು ಬಯಸಿದರೆ ಅದು ಖಂಡಿತಾ ಸಾಧ್ಯವಿಲ್ಲ. ಹಿರಿಯರಾದ ವಿ.ಮುನಿಯಪ್ಪನವರ 45 ವರ್ಷಗಳ ಸೇವೆ, ಕೊಡುಗೆ ಈ ಕ್ಷೇತ್ರಕ್ಕೆ ಇದೆ. ಅವರ ಕುಟುಂಬದ ಬೆಂಬಲಿಗರೂ ಸಾಕಷ್ಟು ಮಂದಿ ಇದ್ದಾರೆ. ಈ ಮೂವರನ್ನೂ ಜೊತೆಗಿಟ್ಟುಕೊಂಡು ಪಕ್ಷವನ್ನು ಕಟ್ಟಬೇಕೆಂಬುದು ನನ್ನ ಉದ್ದೇಶ. ಈಗಾಗಲೇ ಇವರ ಈ ಹಠಮಾರಿತನವನ್ನು ವರಿಷ್ಠರ ಹಾಗೂ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ತಂದಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳದೇ ಆವೇಶಭರಿತವಾಗಿ ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಮಾತಿನಲ್ಲೇ ಝಾಡಿಸಿದ್ದರು.

ಈಗ ಮಹಿಳಾ ಅಧಿಕಾರಿ ಮತ್ತು ಶಾಸಕರನ್ನು ಅವಾಚ್ಯವಾಗಿ ನಿಂದಿಸಿರುವ ಪ್ರಕರಣ ರಾಜ್ಯಮಟ್ಟದಲ್ಲಿ ಸದ್ದುಮಾಡುತ್ತಿದೆ. ಇದರಿಂದ ಕಾಂಗ್ರೆಸ್ ರಾಜ್ಯಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಇದು ಮುಂದಿನ ದಿನಗಳಲ್ಲಿ ರಾಜೀವ್ ಗೌಡ ಅವರ ರಾಜಕೀಯ ಭವಿಷ್ಯ ಯಾವ ರೀತಿ ಸಾಗಲಿದೆ ಎನ್ನುವುದು ಶಿಡ್ಲಘಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

2026 ಚುನಾವಣಾ ಪರ್ವ: ಚಿಮುಲ್, ನಗರಸಭೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ 2026ರಲ್ಲಿ ನಡೆಯಲಿದೆ. 2026 ವರ್ಷವು ಚುನಾವಣಾ ಪರ್ವವೇ ಆಗಲಿದೆ. ಇಂತಹ ಸಮಯದಲ್ಲಿ ರಾಜೀವ್ ಗೌಡ ಅವರ ಹೇಳಿಕೆ ಅವರ ಮತ್ತು ಕಾಂಗ್ರೆಸ್ ಪಕ್ಷದ ಬೆಳವಣಿಗೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರಕ್ಕೆ ಶಶಿಧರ್ ಮುನಿಯಪ್ಪ ಆಗಮನ: ಈ ಹಿಂದೆ 2023ರ ಚುನಾವಣೆಯಲ್ಲಿ ರಾಜೀವ್ ಗೌಡ ಅವರಿಗೆ ಮಾಜಿ ಸಚಿವ ವಿ.ಮುನಿಯಪ್ಪ ಮತ್ತು ಅವರ ಕುಟುಂಬದ ಬೆಂಬಲವಿತ್ತು. ವಿ.ಮುನಿಯಪ್ಪ ಅವರೇ ರಾಜೀವ್ ಗೌಡ ಅವರಿಗೆ ಟಿಕೆಟ್ ಕೊಡಿಸಿ, ಕ್ಷೇತ್ರಕ್ಕೆ ಪರಿಚಯಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇವರನ್ನು ಕ್ಷೇತ್ರಕ್ಕೆ ಯಾಕಾದರೂ ಕರೆದುಕೊಂಡು ಬಂದೆವೋ ಎನ್ನಿಸುತ್ತಿದೆ. ಜನರ ಮುಂದೆ ನಾವು ತಲೆತಗ್ಗಿಸುವಂತಾಗಿದೆ. ಶಾಂತಿಯಿಂದ ಇರುವ ಕ್ಷೇತ್ರದ ವಾತಾವರಣವನ್ನು ಕದಡಿದಂತಾಗಿದೆ. ಇದು ನಮಗೆ ನೋವು ತಂದಿದೆ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮುನಿಯಪ್ಪ ತಮ್ಮ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಈಗ ಕಾಂಗ್ರೆಸ್ಗೆ ಆಗಿರುವ ಹಾನಿಯನ್ನು ನಿಯಂತ್ರಿಸಲು ಶಶಿಧರ್ ಮುನಿಯಪ್ಪ ಪ್ರವೇಶಿಸಿದ್ದಾರೆ. ಇದು ಮೂಲ ಕಾಂಗ್ರೆಸ್ಸಿಗರಲ್ಲಿ ಹೊಸ ಆಶಾಭಾವ ಹುಟ್ಟುಹಾಕಿದೆ. ಶಶಿಧರ್ ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅವರೊಂದಿಗೆ ಚರ್ಚಿಸಿದ್ದಾರೆ. ಒಂದು ತಂಡದ ರೀತಿಯಲ್ಲಿ ಪಕ್ಷವನ್ನು ಸದೃಢಗೊಳಿಸಲಷ್ಟೇ ನಾನು ಬಂದಿರುವುದು, ನಾಯಕನಾಗಲು ಅಲ್ಲ ಎಂದು ಅವರು ಹೇಳುತ್ತಿದ್ದರೂ ಅವರ ನಡೆಯ ಬಗ್ಗೆ ಕುತೂಹಲ ಇದ್ದೇ ಇದೆ.

ಮುಸ್ಲಿಂ ಮತಗಳತ್ತ ಕಣ್ಣು

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ವಿಶೇಷವಾಗಿ ನಗರದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದಾರೆ. ಮುಖ್ಯಮಂತ್ರಿಗೆ ಆಪ್ತ ಸಚಿವ ಜಮೀರ್ ಅಹಮದ್ ಖಾನ್ ಓಲೈಸಲು ಮತ್ತು ಮುಸ್ಲಿಂ ಸಮುದಾಯದ ಮೆಚ್ಚುಗೆ ಪಡೆಯಲೆಂದೇ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಪ್ರಚಾರ ಕಾರ್ಯವನ್ನು ಅದ್ದೂರಿಯಾಗಿ ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ಆಯೋಜಿಸಿದ್ದರು ಎನ್ನುವ ಸಂಗತಿ ಜನರಲ್ಲಿ ಚರ್ಚೆಯಾಗುತ್ತಿದೆ.

ಪುಟ್ಟು ಆಂಜಿನಪ್ಪ ನಡೆ?

2018 ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವಾಗಿ ಸ್ವತಂತ್ರ ಅಭ್ಯರ್ಥಿಯಾಗಿದ್ದವರು ಪುಟ್ಟು ಆಂಜಿನಪ್ಪ. 2023ರ ಚುನಾವಣೆಯಲ್ಲಿ ವಿ.ಮುನಿಯಪ್ಪ ಮತ್ತು ಅವರ ಮಗ ಶಶಿಧರ್ ಅವರುಗಳು ರಾಜೀವ್ ಗೌಡರನ್ನು ಬೆಂಬಲಿಸಿದ್ದಕ್ಕೆ ಆಕ್ರೋಶಗೊಂಡು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗಿನ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಒಂದೆಡೆ ಅವರ ವಿರೋಧಿಯಂತಿದ್ದ ರಾಜೀವ್ ಗೌಡ ವಿವಾದದಲ್ಲಿ ಸಿಲುಕಿದ್ದರೆ ಪುಟ್ಟು ಆಂಜಿನಪ್ಪ ಹಿಂದೆ ವಿರೋಧಿಸುತ್ತಿದ್ದ ವಿ.ಮುನಿಯಪ್ಪ ಮತ್ತು ಅವರ ಮಗ ಶಶಿಧರ್ ಈಗ ಜೊತೆಗಿದ್ದಾರೆ. ಆದರೆ ಅಕಸ್ಮಾತ್ ಮುಂಬರುವ ಚುನಾವಣೆಯಲ್ಲಿ ಕೆಪಿಸಿಸಿ ಶಶಿಧರ್ ಮುನಿಯಪ್ಪ ಅವರ ಕಡೆ ಒಲವು ತೋರಿಸಿದರೆ? ಎಂಬ ವಿಷಯ ಚರ್ಚಾರ್ಹವಾಗಿದೆ.

ರಚನೆಯಾಗದ ದರಖಾಸ್ತು ಸಮಿತಿ

ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಇಬ್ಬರ ನಡುವಿನ ತಿಕ್ಕಾಟದಿಂದ ದರಖಾಸ್ತು ಸಮಿತಿ ಇನ್ನೂ ರಚನೆಯಾಗಿಲ್ಲ. ಇವರಿಬ್ಬರ ಧೋರಣೆಯಿಂದ ಕಾಂಗ್ರೆಸ್ ಮುಖಂಡರು ಯಾವುದೇ ಸರ್ಕಾರದ ನಾಮನಿರ್ದೇಶನ ಹುದ್ದೆಗಳನ್ನು ಪಡೆಯಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.