ಬುಧವಾರ, ಸೆಪ್ಟೆಂಬರ್ 22, 2021
29 °C
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದ ಆಶಾ ಕಾರ್ಯಕರ್ತೆಯರು

ಬೇಡಿಕೆ ಈಡೇರಿಸುವಂತೆ ಸಚಿವರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಾಸಿಕ ₹ 12,000 ಗೌರವಧನ ಖಾತರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಸೋಮವಾರ ನಗರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡೆ ಸರಸ್ವತಮ್ಮ, ‘ಕೊರೋನಾ ಸೊಂಕನ್ನು ತಡೆಗಟ್ಟುವಲ್ಲಿ ಮುಂಚೂಣಿಯಲ್ಲಿ ಶ್ರಮಿಸಿದ ಆಶಾ ಕಾರ್ಯಕರ್ತೆಯರು ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ರಾಜ್ಯ ಸರ್ಕಾರ ಅವರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

‘ಈಗಿರುವ ಪ್ರೋತ್ಸಾಹ ಧನ ಮತ್ತು ಗೌರವಧನ ಎರಡನ್ನೂ ಒಂದುಗೂಡಿಸಿ ಮಾಸಿಕ ₹12 ಸಾವಿರ ಗೌರವಧನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 42 ಸಾವಿರ ಆಶಾ ಕಾರ್ಯಕರ್ತೆಯರು ಕಳೆದ ಜುಲೈ 10 ರಿಂದ ಕೆಲಸ ನಿಲ್ಲಿಸಿ ಹೋರಾಟ ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಸೋಂಕಿತರ ನಡುವೆ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆ ಜವಾಬ್ದಾರಿ ಸರ್ಕಾರದ್ದಾಗಿದೆ. ದುರಂತವೆಂದರೆ ಸಾಕಷ್ಟು ಕಡೆಗಳಲ್ಲಿ ಅಗತ್ಯವಾದ ಮಾಸ್ಕ್‌, ಪಿಪಿಇ ಕಿಟ್‌, ಸುರಕ್ಷತಾ ಸಾಧನಗಳನ್ನು ನೀಡಿಲ್ಲ. ಪರಿಣಾಮ, ಅನೇಕರು ಸೋಂಕಿಗೆ ತುತ್ತಾಗಿದ್ದಾರೆ’ ಎಂದರು.

‘ಸಂಘದ ಬೇಡಿಕೆಗಳ ಕುರಿತು ಈವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದು, ಕೂಡಲೇ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಸಹಕಾರ ಇಲಾಖೆ ಘೋಷಿಸಿದ ₹3,000 ವಿಶೇಷ ಪ್ಯಾಕೇಜ್ ಎರಡ್ಮೂರು ತಿಂಗಳು ಕಳೆದರೂ ಇಂದಿಗೂ ಶೇ50 ರಷ್ಟು ಕಾರ್ಯಕರ್ತೆಯರಿಗೆ ದೊರೆತಿಲ್ಲ. ಸೂಕ್ತ ವೇತನ, ಸುರಕ್ಷತಾ ಪರಿಕರಗಳಿಲ್ಲದೆ, ತಂತ್ರಾಂಶಗಳ ಅವ್ಯವಸ್ಥೆಯಿಂದ ಆಶಾ ಕಾರ್ಯಕರ್ತೆಯರು ಬಳಲಿ ಬೆಂಡಾಗಿದ್ದಾರೆ’ ಎಂದು ತಿಳಿಸಿದರು.

‘ಆರೋಗ್ಯ ಇಲಾಖೆಯ ಬಹುಪಾಲು ಯೋಜನೆಗಳಿಗೆ ಕೆಳ ಹಂತದಲ್ಲಿ ನಮ್ಮನ್ನು ಬಳಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಸಮೀಕ್ಷೆ ಕಾರ್ಯಕ್ಕೂ ನಾವು ಬೇಕು. ಆದರೆ ವೇತನ ಮಾತ್ರ ₹6,000 ನೀಡುತ್ತಾರೆ. ಅದನ್ನು ಕನಿಷ್ಠ ₹12 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ನಮ್ಮತ್ತ ಗಮನ ಹರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನಿಷ್ಠ 12 ಸಾವಿರ ಪರಿಹಾರ, ಸುರಕ್ಷತಾ ಪರಿಕರಗಳು, ಕೋವಿಡ್‌ ಸೋಂಕಿಗೆ ತುತ್ತಾಗುವ ಕಾರ್ಯಕರ್ತೆಯರಿಗೆ ಪರಿಹಾರ ಮತ್ತು ಚಿಕಿತ್ಸಾ ವೆಚ್ಚ ಪಾವತಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು