ಶನಿವಾರ, ನವೆಂಬರ್ 28, 2020
25 °C
ಮಾರುಕಟ್ಟೆಗೆ ಆವಕ ಹೆಚ್ಚಳ l ಗ್ರಾಹಕರ ಮೊಗದಲ್ಲಿ ನೆಮ್ಮದಿ

ತರಕಾರಿ ಬೆಲೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮೂರ್ನಾಲ್ಕು ವಾರಗಳಿಂದ ಸತತವಾಗಿ ಏರುಮುಖವಾಗಿದ್ದ ಈರುಳ್ಳಿ ಧಾರಣೆ ಈ ವಾರ ಕೊಂಚ ಇಳಿಮುಖವಾಗಿದೆ. ಹಬ್ಬದ ತರುವಾಯ ಹೂವುಗಳಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ.

ಹಬ್ಬದ ನಿಮಿತ್ತ ಕಳೆದ ವಾರ ದುಬಾರಿಯಾಗಿದ್ದ ತರಕಾರಿಗಳ ಬೆಲೆ ಈ ವಾರ ಅಲ್ಪ ಇಳಿಕೆ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ.

ದೀಪಾವಳಿ ಹಬ್ಬದ ದಿನದಂದು ತರಕಾರಿಗಳು ತುಸು ಅಗ್ಗ ಆಗಿದ್ದು, ಗ್ರಾಹಕರ ಜೇಬಿನ ಹೊರೆ ಇಳಿಸತೊಡಗಿವೆ. ಕಡಿಮೆ ಬೆಲೆಯಲ್ಲಿ ಬುಟ್ಟಿ ತುಂಬ ಕಾಯಿಪಲ್ಲೆ ಒಯ್ದು ಜನರು ಹಬ್ಬದೂಟಕ್ಕೆ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಬೀನ್ಸ್‌ನ ಬೆಲೆ ಹಿಂದೆಂದಿಗಿಂತ ಕಡಿಮೆ ದರಕ್ಕೆ ಕುಸಿಯುತ್ತಿದೆ.

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹುರುಳಿಕಾಯಿ ಆವಕ ಆಗುತ್ತಿದೆ. ಸ್ಥಳೀಯವಾಗಿಯೂ ಬೆಳೆದ ಉತ್ಪನ್ನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ಧಾರಣೆ ಕುಸಿತದಿಂದ ಕಂಗಾಲಾಗಿದ್ದರೆ, ಗ್ರಾಹಕರು ಮಾತ್ರ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ವಾರ ಕೆ.ಜಿಗೆ ₹100 ಮಾರಾಟವಾಗುತ್ತಿದ್ದ ಉತ್ತಮ ಗುಣಮಟ್ಟದ ಈರುಳ್ಳಿ ಈ ವಾರ ₹80ರಿಂದ ₹70ಗೆ ಮಾರಾಟವಾಗುತ್ತಿದೆ. ಸಾಧಾರಣ ಈರುಳ್ಳಿಗೆ ಕೆ.ಜಿಗೆ ₹40ರಿಂದ ₹60 ಬೆಲೆಯಿದೆ. ಕಳೆದ ವಾರ ಗ್ರಾಹಕರಿಗೆ ‘ಖಾರ’ವಾಗಿದ್ದ ಹಸಿ ಮೆಣಸಿನಕಾಯಿ ದರ ಅರ್ಧದಷ್ಟು ಇಳಿದಿದೆ. ಇನ್ನುಳಿದಂತೆ ಟೊಮೆಟೊ, ದೊಣ್ಣೆ ಮೆಣಸಿನಕಾಯಿ, ಹಾಗಲಕಾಯಿ, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆ ಇಳಿಕೆ ಕಂಡಿವೆ.

ಆಲೂಗಡ್ಡೆ, ಸೌತೆಕಾಯಿ, ಎಲೆಕೋಸು ಸೇರಿದಂತೆ ಹಲವು ತರಕಾರಿಗಳ ದರ ಸ್ಥಿರವಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಅಷ್ಟೇನು ವ್ಯತ್ಯಾಸವಾಗಿಲ್ಲ. ಟೊಮೆಟೊ (₹10), ಬೀನ್ಸ್‌ (₹30), ಕ್ಯಾರೆಟ್‌ (₹60), ಆಲೂಗಡ್ಡೆ (₹50) ದರ ಕಳೆದ ವಾರದಷ್ಟೇ ಇದೆ. ಕಳೆದ ಹದಿನೈದು ದಿನಗಳ ಹಿಂದಷ್ಟೇ ಶತಕದ ಧಾರಣೆ ಕಂಡಿದ್ದ ಹುರುಳಿಕಾಯಿ ಅರ್ಥಾತ್‌ ಬೀನ್ಸ್‌ನ ಬೆಲೆ ಈಗ ಬರೀ ₹20!

ಸೊಪ್ಪಿನ ಬೆಲೆಗಳೂ ಕೈಗೆಟಕುವಂತೆ ಇವೆ. ನಾಟಿ ಕೊತ್ತಂಬರಿ ದೊಡ್ಡ ಕಂತೆಗೆ ₹15, ಫಾರ್ಮ್‌ ಕೊತ್ತಂಬರಿ ₹10, ದಂಟು, ಪಾಲಕ್‌, ಸಬ್ಬಸ್ಸಿಗೆ, ಹರಿವೆ ಸೊಪ್ಪು ಪ್ರತಿ ಕಟ್ಟಿಗೆ ₹10 ಹಾಗೂ ಮೆಂತ್ಯ ₹15ರ ದರದಲ್ಲಿ ಮಾರಾಟ ನಡೆದಿದೆ.

ಸೊಪ್ಪು ಅಗ್ಗ: ಕಳೆದ ವಾರ ಹಬ್ಬದ ಸಂದರ್ಭದಲ್ಲಿ ಭಾರಿ ಬೇಡಿಕೆಯಲ್ಲಿದ್ದ ಸೊಪ್ಪುಗಳ ದರ ಈ ವಾರ ಗಣನೀಯವಾಗಿ ಇಳಿಕೆಯಾಗಿದೆ. ಸಬ್ಬಸಗಿ ₹20ಕ್ಕೆ 4 ಕಟ್ಟು, ಮೆಂತ್ಯೆ ₹20ಕ್ಕೆ 3 ಕಟ್ಟು, ಕೊತ್ತಂಬರಿ ₹20ಕ್ಕೆ 3, ಪಾಲಕ್ ₹20ಕ್ಕೆ 4, ಪುದೀನಾ ₹10ಕ್ಕೆ 1 ಮತ್ತು ಕರಿಬೇವು ₹10ಕ್ಕೆ 1 ಕಟ್ಟು ಮಾರಾಟ ವಾಗುತ್ತಿವೆ.  ಒಂದು ಕುಂಬಳಕಾಯಿಗೆ ₹30 ಮತ್ತು 4 ಮೂಲಂಗಿಗೆ ₹20 ಬೆಲೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.