ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರಗೊಂಡ್ಲು; ಸಾಮರ್ಥ್ಯ ಇಳಿಕೆ ಪ್ರಸ್ತಾವಕ್ಕೆ ಆಕ್ರೋಶ

ಎತ್ತಿನಹೊಳೆ; 5.87 ಟಿಎಂಸಿ ಅಡಿಯಿಂದ 2 ಟಿಎಂಸಿ ಅಡಿಗೆ ಇಳಿಕೆ
Last Updated 1 ಸೆಪ್ಟೆಂಬರ್ 2021, 6:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯ ಸಾಮರ್ಥ್ಯವನ್ನು ಕಡಿಮೆಗೊಳಿಸುವ ವಿಚಾರ ಈಗ ಜಿಲ್ಲೆಯಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.

ನೀರಾವರಿ ಹೋರಾಟಗಾರರು, ಎತ್ತಿನಹೊಳೆ ಯೋಜನೆಯ ಮೂಲಕ ನೀರಿನ ಭರವಸೆ ಹೊಂದಿದ್ದ ಜಿಲ್ಲೆಯ ಜನರು ಸಾಮರ್ಥ್ಯ ಕಡಿಮೆಗೊಳಿಸುವ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪದೇ ಪದೇ ಯೋಜನೆಯಲ್ಲಿ ಮಾರ್ಪಾಡು ಮಾಡುತ್ತಿರುವುದು ಯೋಜನೆಯ ಬಗ್ಗೆಯೇ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ ಎನ್ನುತ್ತಿದ್ದಾರೆ.

ವಿಶ್ವೇಶ್ವರಯ್ಯ ಜಲ ನಿಗಮವು ಬೈರಗೊಂಡ್ಲು ಜಲಾಶಯದ ಸಾಮರ್ಥ್ಯವನ್ನು ಎರಡು ಟಿಎಂಸಿ ಅಡಿಗೆ ಇಳಿಸಲು ತೀರ್ಮಾನಿಸಿದೆ. ಈ ಸಂಬಂಧ ಪ್ರಸ್ತಾವವನ್ನು ಪರಿಷ್ಕೃತ ಅಂದಾಜಿನಲ್ಲಿ ಸೇರಿಸಿದೆ ಎನ್ನಲಾಗುತ್ತಿದೆ. ಈ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡುವ ವಿಚಾರ ಈಗ ಸರ್ಕಾರದ ಮುಂದಿದೆ. ಒಂದು ವೇಳೆ ಸಾಮರ್ಥ್ಯ ಇಳಿಕೆಯಾದರೆ ಜಿಲ್ಲೆಗೆ ಸಮರ್ಪಕವಾಗಿ ನೀರು ದೊರೆಯುವುದೇ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಸಹ ಬೈರಗೊಂಡ್ಲು ಜಲಾಶಯದ ಸಾಮರ್ಥ್ಯ ಇಳಿಕೆಗೆ ಮುಂದಾಗಿರುವ ಸರ್ಕಾರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಲೆ ಇದು ಪರಿಣಾಮ ಬೀರಲಿದೆ ಎಂದಿರುವ ಅವರು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪ್ರಸ್ತಾವ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಇಳಿಕೆ: ಎತ್ತಿನಹೊಳೆ ಯೋಜನೆಯಡಿ ಬೈರಗೊಂಡ್ಲುವಿನಲ್ಲಿ ನಿರ್ಮಿಸುವ ಬಫರ್ ಡ್ಯಾಂಗೆ ಇನ್ನೂ ಭೂಸ್ವಾಧೀನವಾಗಿಲ್ಲ. ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಸೇರುವ ಜಾಗದಲ್ಲಿ 5.87 ಟಿಎಂಸಿ ಅಡಿ ನೀರು ಸಂಗ್ರಹಿಸಲು ಈ ಜಲಾಶಯ ನಿರ್ಮಾಣವಾಗಬೇಕಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ 11 ಗ್ರಾಮಗಳು ಹಾಗೂ ಕೊರಟಗೆರೆ ತಾಲ್ಲೂಕಿನ 17 ಗ್ರಾಮಗಳ ಒಟ್ಟು 5,078 ಎಕರೆ ಭೂಮಿ ಈ ಡ್ಯಾಂ ನಿರ್ಮಾಣಕ್ಕೆ ಅಗತ್ಯ.

ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುತ್ತಿರುವ ಪರಿಹಾರ ಧನ ಹೆಚ್ಚಿದೆ. (ಮಾರ್ಗಸೂಚಿ ದರದ (ಎಕರೆಗೆ ₹8 ಲಕ್ಷ) ನಾಲ್ಕು ಪಟ್ಟು ಮೊತ್ತದ ಪರಿಹಾರದ ಲೆಕ್ಕದಲ್ಲಿ ಇಲ್ಲಿ ಎಕರೆಗೆ ₹32 ಲಕ್ಷ ನಿಗದಿ ಮಾಡಲಾಗಿತ್ತು). ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ಜಮೀನುಗಳಿಗೆ ಕಡಿಮೆ ಪರಿಹಾರ ನಿಗದಿಗೊಳಿಸಲಾಗಿದೆ. (ಮಾರ್ಗಸೂಚಿ ದರ (ಎಕರೆಗೆ ₹5 ಲಕ್ಷ) ದಂತೆ ಎಕರೆಗೆ ₹20 ಆಗುತ್ತದೆ).

ದೊಡ್ಡಬಳ್ಳಾಪುರ ರೈತರಿಗೆ ನಿಗದಿಗೊಳಿಸಿರುವ ಪರಿಹಾರದ ಮೊತ್ತವನ್ನೇ ಕೊರಟಗೆರೆಯ ರೈತರಿಗೂ ನೀಡಬೇಕು ಎಂದು ಕೊರಟಗೆರೆ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಕಾರಣದಿಂದ ಇಲ್ಲಿಯವರೆಗೂ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಭೂಮಿ ಸ್ವಾಧೀನವಾಗಿಲ್ಲ. ಸಮಸ್ಯೆ ಸಹ ಪರಿಹಾರವಾಗಿಲ್ಲ.

ಸಮಸ್ಯೆ ಜಟಿಲವಾಗಿರುವ ಕಾರಣ ಒಂದೇ ತಾಲ್ಲೂಕು ವ್ಯಾಪ್ತಿಯಲ್ಲಿ ಜಲಾಶಯ ನಿರ್ಮಾಣ ಮಾಡಬೇಕು ಇಲ್ಲವೆ ವೆಚ್ಚ ತಗ್ಗಿಸುವ ದೃಷ್ಟಿಯಿಂದ ಸಾಮರ್ಥ್ಯವನ್ನು ಕಡಿಮೆ ಮಾಡಬೇಕು ಎನ್ನುವ ವಿಚಾರವೂ ಸರ್ಕಾರದ ಮುಂದಿತ್ತು ಎನ್ನಲಾಗುತ್ತಿದೆ. ಈಗ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯವನ್ನು 5.87 ಟಿಎಂಸಿ ಅಡಿಯಿಂದ 2 ಟಿಎಂಸಿ ಅಡಿಗೆ ಇಳಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪ್ರಸ್ತಾವಗಳು ಇವೆ.

ಒಂದು ವೇಳೆ ಸಂಗ್ರಹ ಸಾಮರ್ಥ್ಯ ಕಡಿಮೆಯಾದರೆ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸೂಕ್ತವಾಗಿ ನೀರು ದೊರೆಯುವುದೇ, ಅಂತರ್ಜಲ ವೃದ್ಧಿಯಾಗುವುದೇ ಎನ್ನುವ ‍ಪ್ರಶ್ನೆ ಮೂಡಿದೆ. ಎತ್ತಿನಹೊಳೆಯ ಯೋಜನೆಯ ಬಗ್ಗೆ ಇಂದಿಗೂ ಜಿಲ್ಲೆಯ ಜನರು ಅಪಾರವಾಗಿ ನಿರೀಕ್ಷೆಗಳನ್ನು ಹೊಂದಿದ್ದಾರೆ.

ಯೋಜನೆಗಿರುವ ಅಡ್ಡಿ, ಸಮಸ್ಯೆಗಳನ್ನು ಪರಿಹರಿಸಬೇಕಿತ್ತು. ಅದು ಬಿಟ್ಟು ವಿಶ್ವೇಶ್ವರಯ್ಯ ಜಲ ನಿಗಮವು ಜಲಾಶಯ ಸಾಮರ್ಥ್ಯ ಇಳಿಕೆಗೆ ಪ್ರಸ್ತಾಪ ಸಲ್ಲಿಸಿರುವುದು ಸರಿಯಲ್ಲಿ ಎಂದು ನೀರಾವರಿ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಕುಂಟುತ್ತಿದೆ ಯೋಜನೆ

ಎತ್ತಿನಹೊಳೆ ಯೋಜನೆ 2012ರಿಂದ ಜಾರಿಯಲ್ಲಿದೆ. ಈ ನೀರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿನ ಸಮಸ್ಯೆ ಪರಿಹರಿಸಲಿದೆ, ಅಂತರ್ಜಲ ಹೆಚ್ಚಿಸಲಿದೆ ಎನ್ನುವ ನಿರೀಕ್ಷೆಯನ್ನು ಇಲ್ಲಿನ ಜನರು ಹೊಂದಿದ್ದಾರೆ. ಆದರೆ ಯೋಜನೆ ಮಾತ್ರ ಆಮೆಗತಿಯಲ್ಲಿದೆ.

‘2023ರ ಅಂತ್ಯಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿದೆ’–ಎಂದು 2021ರ ಫೆಬ್ರುವರಿಯಲ್ಲಿ ವಿಧಾನ ಪರಿಷತ್‍ನಲ್ಲಿ ಸದಸ್ಯ ಡಾ.ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಅಂದಿನ ಜಲಸಂಪನ್ಮೂಲ ಸಚಿವರ ಅನುಪಸ್ಥಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದರು. ಅಂದು ಉತ್ತರ ನೀಡಿದ್ದ ಬೊಮ್ಮಾಯಿ ಅವರೇ ಇಂದು ಮುಖ್ಯಮಂತ್ರಿ.

ಬೈರಗೊಂಡ್ಲು ಜಲಾಶಯದ ವಿವಾದಗಳು ಸದಸ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ 2023ಕ್ಕೆ ಯೋಜನೆಯಡಿ ನೀರು ಜಿಲ್ಲೆಗೆ ಬರುತ್ತದೆಯೇ ಎನ್ನುವ ಅನುಮಾನ ಜನರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT