ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿಯಲ್ಲಿ ಶೌಚಾಲಯದ್ದೇ ಚಿಂತೆ!

ಕನ್ನಂಪಲ್ಲಿಯಿಂದ ತಾಲ್ಲೂಕು ಕಚೇರಿವರೆಗೆ ಒಂದೇ ಒಂದು ಶೌಚಾಲಯವಿಲ್ಲ
Last Updated 16 ನವೆಂಬರ್ 2022, 4:23 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆ ಎದ್ದು ಕಾಣುತ್ತಿದೆ. ವಾಣಿಜ್ಯ ನಗರಿ ಎಂಬ ಬಿರುದು ಪಡೆದಿರುವ ಚಿಂತಾಮಣಿಯು ವೇಗವಾಗಿ ಬೆಳೆಯುತ್ತಿದೆ.

ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಜತೆಗೆ ಪ್ರತಿನಿತ್ಯ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಸಂಖ್ಯೆ ಬೆರಳೆಣಿಕೆಯಷ್ಟಿವೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ನಗರದ ಎಲ್ಲ ವಾರ್ಡ್‌ಗಳಲ್ಲೂ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆ ಇದೆ. ನಗರದ ವಾರ್ಡ್ ಸಂಖ್ಯೆ 8 ಕನಂಪಲ್ಲಿಯಿಂದ ತಾಲ್ಲೂಕು ಕಚೇರಿ ವೃತ್ತದವರೆಗೆ ಒಂದೇ ಒಂದು ಶೌಚಾಲಯವಿಲ್ಲ. ಈ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ ಸಮೀಪದಲ್ಲಿ ಶೌಚಾಲಯ ನಿರ್ಮಿಸಬೇಕು. ನಗರದ ಎಲ್ಲ ಭಾಗಗಳಲ್ಲೂ ಸೂಕ್ತ ಸ್ಥಳ ಗುರುತಿಸಿ ಶೌಚಾಲಯ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನಗರದ ತಾಲ್ಲೂಕು ಕಚೇರಿ ಬಳಿ, ಬೆಂಗಳೂರು ವೃತ್ತ, ಪಾಲಿಟೆಕ್ನಿಕ್ ರಸ್ತೆಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ, ಅಜಾದ್ ಚೌಕದಲ್ಲಿ, ಐ.ಡಿ.ಎಸ್.ಎಂ.ಟಿ ವಾಣಿಜ್ಯ ಸಂಕೀರ್ಣ ಮತ್ತು ಬಸ್ ನಿಲ್ದಾಣ ಸೇರಿದಂತೆ 7 ಕಡೆ ನಗರಸಭೆಯ ಶೌಚಾಲಯಗಳಿವೆ. ಎಲ್ಲ ಶೌಚಾಲಯಗಳು ಬಹುತೇಕ ಸರ್ಕಾರಿ ಕಚೇರಿಗಳ ಬಳಿ 500 ಮೀ ದೂರದ ಅಂತರದಲ್ಲಿವೆ. ನಗರದಲ್ಲಿ 31 ವಾರ್ಡ್‌ಗಳಿದ್ದು ಇತರೆಡೆ ಎಲ್ಲೂ ಸಾರ್ವಜನಿಕ ಶೌಚಾಲಯಗಳಿಲ್ಲದಿರುವುದು ಸಾರ್ವಜನಿಕರಿಗೆ ತೊಂದರೆಯಷ್ಟೇ ಅಲ್ಲದೆ, ನಗರದ ಸೌಂದರ್ಯಕ್ಕೂ ಕಳಂಕವಾಗಿದೆ.

ನಗರಸಭೆಯ ಶೌಚಾಲಯಗಳ ನಿರ್ವಹಣೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ. ನಿರ್ವಹಣೆಯ ಟೆಂಡರ್ ಪಡೆದವರು ಸ್ವಚ್ಛತೆಯ ಕಡೆ ಗಮನಹರಿಸುವುದಿಲ್ಲ. ಜನರಿಂದ ನಿಗದಿಗಿಂತ ಹೆಚ್ಚಿನ ಹಣ ವಸೂಲು ಮಾಡುತ್ತಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಸಮರ್ಪಕವಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಿದರೆ ಸಾರ್ವಜನಿಕರು ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಸರ್ಕಾರಿ ಕಟ್ಟಡಗಳ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವುದು ತಪ್ಪುತ್ತದೆ. ನಗರದಲ್ಲಿ ಸ್ವಚ್ಛತೆ ಕಾಪಾಡಲು ಅನುಕೂಲವಾಗುತ್ತದೆ. ಸ್ವಚ್ಛ ಭಾರತ್ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಈ ಸಮಸ್ಯೆ ಬಗೆಹರಿಸಬಹುದು. ಕನಿಷ್ಠ ವಾರ್ಡ್‌ಗೆ ಒಂದಾದರೂ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂಬುದು ಸಾರ್ವಜನಿಕ ಒತ್ತಾಯ.

ಚೇಳೂರು ವೃತ್ತದಿಂದ ಚೇಳೂರು ರಸ್ತೆಯ ರೈಲ್ವೆ ಅಂಡರ್ ಪಾಸ್ ವರೆಗೂ ಮತ್ತು ಕೋಲಾರ ರಸ್ತೆಯ ಕೋಲಾರ ವೃತ್ತದವರೆಗೂ ಶೌಚಾಯಲವಿಲ್ಲ.ವಿವಿಧ ವೃತ್ತಿ, ವ್ಯಾಪಾರಕ್ಕಾಗಿ ವಲಸೆ ಬರುವ ಕುಟುಂಬಗಳು ರಸ್ತೆ ಬದಿಗಳಲ್ಲಿ ಅಥವಾ ಸರ್ಕಾರಿ ಜಾಗಗಳಲ್ಲಿ ತಾತ್ಕಾಲಿಕವಾಗಿ ಟೆಂಟ್, ಗುಡಿಸಲುಹಾಕಿಕೊಂಡು ವಾಸ ಮಾಡುತ್ತಾರೆ. ಶೌಚಾಲಯಗಳಿಲ್ಲದೆ ಅವರು ಬಯಲು ಪ್ರದೇಶವನ್ನೇ ಆಶ್ರಯಿಸುವಂತಾಗಿದೆ.

ಬಹಿರ್ದೆಸೆಗೆ ಬಯಲೇ ಗತಿ

ನಗರದ ಆಶ್ರಯ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು. ವಾಣಿಜ್ಯ ನಗರಿ ಎಂದು ಹೆಸರು ಗಳಿಸಿರುವ ಚಿಂತಾಮಣಿಯಲ್ಲಿ ಜನರು ಬಹಿರ್ದೆಸೆಗಾಗಿ ಕತ್ತಲಲ್ಲಿ ಬೆಟ್ಟದ ತಪ್ಪಲಿಗೆ ಹೋಗುತ್ತಿರುವುದು ನಾಚಿಕೆಗೇಡು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು. ಅಲ್ಲದೆ, ಶೌಚಾಲಯನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

ಶ್ರೀನಿವಾಸ್,ಆಶ್ರಯ ಬಡಾವಣೆ

ಮಾರುಕಟ್ಟೆಯಲ್ಲಿ ಬೇಕು

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಾರೆ. ಶನಿವಾರ, ಭಾನುವಾರ ವಾರದ ಸಂತೆ, ಜಾನುವಾರು ಸಂತೆ, ಸರಕುಗಳ ಮಾರಾಟಕ್ಕಾಗಿ ಬರುವ ರೈತರು, ವ್ಯಾಪಾರಿಗಳು, ಹಮಾಲಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಟೊಮೆಟೊ ಮಾರುಕಟ್ಟೆಯಲ್ಲೂ ನೂರಾರು ವಾಹನಗಳ ಚಾಲಕರು ಸೇರುತ್ತಾರೆ. ಮಾರುಕಟ್ಟೆಯಲ್ಲಿ 2-3 ಕಡೆ ಶೌಚಾಲಯ ನಿರ್ಮಿಸಬೇಕು.

ಕಿರಣ್,ಕೂಲಿ ಕಾರ್ಮಿಕ, ಎಪಿಎಂಸಿ ಚಿಂತಾಮಣಿ

ನಗರದ ಜನರ ಪರದಾಟ

ನಗರದ ಆಶ್ರಯ ಬಡಾವಣೆಯಲ್ಲಿ ಶೌಚಾಲಯಕ್ಕಾಗಿ ಜನರು ಪರದಾಡುವಂತಾಗಿದೆ. ಅಲ್ಲಿ ಸಾಕಷ್ಟು ಮನೆಗಳು ಬಂಡೆಗಳ ಮೇಲಿರುವುದರಿಂದ ಪಿಟ್ ತೆಗೆಯಲು ಸಾಧ್ಯವಿಲ್ಲ. ಒಳಚರಂಡಿ ವ್ಯವಸ್ಥೆಯೂ ಇಲ್ಲ.

ಜನರು ಬಹಿರ್ದೆಸೆಗಾಗಿ ಈಗಲೂ ಬೆಟ್ಟದ ತಪ್ಪಲಿಗೆ ಹೋಗುವುದುತಪ್ಪಿಲ್ಲ. ಕೆಲವು ಮನೆಗಳಲ್ಲಿ ಮಾತ್ರ ಶೌಚಾಲಯಗಳಿವೆ. ಶೌಚಾಲಯವಿಲ್ಲದವರು ಈಗಲೂ ಚೊಂಬು ತೆಗೆದುಕೊಂಡು ಹೋಗಬೇಕಾಗಿದೆ.ಸರ್ಕಾರ ಮಾತ್ರ ಬಹಳ ಹಿಂದೆಯೇ ಬಹಿರ್ದೆಸೆ ಮುಕ್ತ ನಗರಎಂದು ಘೋಷಣೆ ಮಾಡಿದೆ. ವಾಸ್ತವವಾಗಿ ಈಗಲೂ ಮಹಿರ್ದೆಸೆ ಮುಕ್ತವಾಗಿಲ್ಲ.

ಪಾಳುಬಿದ್ದಿವೆ

ಆಶ್ರಯ ಬಡಾವಣೆಯಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉತ್ತಮ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ನಿರ್ವಹಣೆಯ ಕೊರತೆಯಿಂದ ಹಾಳಾಗಿ ಪಾಳು ಬಿದ್ದಿದೆ. ಸುತ್ತಮುತ್ತಲೂ ಗಿಡಗೆಂಟೆಗಳು ಬೆಳೆದುಕೊಂಡಿವೆ.

ಒಳಗೆ ಎಲ್ಲ ವ್ಯವಸ್ಥೆ ಹಾಳಾಗಿದ್ದು, ಹೆಜ್ಜೆ ಇಡಲು ಅಸಹ್ಯ ಎನಿಸುತ್ತಿದೆ. ಸುಮಾರು 7-8 ವರ್ಷಗಳಿಂದ ಇದೇ ರೀತಿ ಇದೆ. ನಗರಸಭೆ ಸದಸ್ಯರು, ಶಾಸಕರು, ಸಂಸದರು, ನಗರಸಭೆ ಅಧಿಕಾರಿಗಳು ಒಳಗೊಂಡತೆ ಯಾರು ಇತ್ತ ಕಡೆ ತಲೆ ಹಾಕುವುದಿಲ್ಲ. ಪ್ರತಿ ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡುತ್ತಾರೆ ಎಂದು ಈ ಭಾಗದ ಜನರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT