ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡವಿಕೊತ್ತೂರು ಅಕ್ಷರಶಃ ‘ಅಡವಿ’

Last Updated 2 ಅಕ್ಟೋಬರ್ 2017, 6:20 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬೆಟ್ಟಗಳ ಮಡಿಲಲ್ಲಿರುವ ಆ ಪುಟ್ಟ ಊರಿಗೆ ಇಂದಿಗೂ ಮೂಲಸೌಕರ್ಯ ಗಗನಕುಸುಮಗಳಾಗಿವೆ. ಹಾಳಾದ ರಸ್ತೆಗಳು, ಹೆಸರಿಗಷ್ಟೇ ಇದ್ದಂತಿರುವ ದೀಪದ ಕಂಬಗಳು, ಬಗ್ಗಡ ಸುರಿಯುವ ಕೊಳವೆ ಬಾವಿಗಳು, ರಾತ್ರಿಯಾದರೆ ಕಾಟ ನೀಡುವ ಕರಡಿಗಳು.. ಹೀಗೆ ಹೇಳುತ್ತ ಹೋದರೆ ಹತ್ತಾರಿವೆ ತೋಳ್ಳಪಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಅಡವಿಕೊತ್ತೂರು ಎಂಬ ಕುಗ್ರಾಮದ ಸಮಸ್ಯೆಗಳು.

ಅಡವಿಯಲ್ಲಿರುವ ಕಾರಣದಿಂದಾಗಿಯೇ ‘ಅಡವಿಕೊತ್ತೂರು’ ಎಂಬ ಹೆಸರು ಪಡೆದು, ಆಧುನಿಕ ಜಗತ್ತಿನ ಸೋಂಕು ತಾಕದಂತಿರುವ ಇಂತಹದೊಂದು ಹಳ್ಳಿ ಇಲ್ಲಿದೆ ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅಜ್ಞಾತ ಪ್ರಪಂಚಕ್ಕೆ ಒಗ್ಗಿಕೊಂಡಿರುವ ಈ ಊರಿನ ಜನರ ಅಳಲು, ಅಸಹಾಯಕತೆ ಅರಣ್ಯರೋಧನವಾಗಿದೆಯೇ ವಿನಾ ಈವರೆಗೆ ಅವರಿಗೆ ನಾಗರಿಕ ಸಮಾಜದಲ್ಲಿ ದೊರೆಯಬೇಕಾದ ಘನತೆಯ ಬದುಕು ದೊರೆತಿಲ್ಲ.

ತಾಲ್ಲೂಕಿನ ಉಪ್ಪಾರ್ಲಪಲ್ಲಿ ಬಳಿಯಿರುವ ಅಡವಿಕೊತ್ತೂರಿಗೆ ಪಾತಪಾಳ್ಯ-ಬಿಳ್ಳೂರು ರಸ್ತೆಯಲ್ಲಿ ಬರುವ ಗುಡ್ಡಗಳಿಂದ ಆವೃತ್ತವಾದ ಕಾಡಿನಲ್ಲಿ ಇಳಿದು ಸುಮಾರು 4 ಕಿ.ಮೀ ನಡೆದು ಹೋಗಬೇಕು. ಈ ಹಳ್ಳಿಯ ಹುಡುಗರಿಗೆ ಹೆಣ್ಣು ಕೊಡುವುದೆಂದರೆ ಅದೊಂದು ಅಪರಾಧ ಎನ್ನುವ ಮನೋಭಾವ ತಾಲ್ಲೂಕಿನ ಜನರಲ್ಲಿ ಬಹುಹಿಂದಿನಿಂದಲೂ ಬೇರೂರಿದೆ.

ಗ್ರಾಮದಲ್ಲಿ ಸುಮಾರು 20 ಕುಟುಂಬಗಳು ವಾಸ ಮಾಡುತ್ತಿದ್ದು, ಬಹುತೇಕ ಕುಟುಂಬಗಳು ಪರಿಶಿಷ್ಠ ಪಂಗಡ ನಾಯಕ, ಬೇಡ ಜಾತಿಗೆ ಸೇರಿದವರಾಗಿದ್ದಾರೆ. ಜತೆಗೆ ಒಂದು ಒಕ್ಕಲಿಗ, ಒಂದು ಮುಸ್ಲಿಂ ಕುಟುಂಬ ಈ ಹಳ್ಳಿಯಲ್ಲಿ ವಾಸ ಮಾಡುತ್ತಿವೆ. ವ್ಯವಸಾಯವೇ ಇಲ್ಲಿನವರ ಮೂಲ ಕಸಬು. ಉಳಿದಂತೆ ಜೀವನೋಪಾಯಕ್ಕೆ ಪರವೂರಿನ ಕೂಲಿ ಕೆಲಸವೇ ಗತಿ. ಈ ಗ್ರಾಮದಲ್ಲಿ ಇಷ್ಟು ವರ್ಷಗಳಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣಗೊಂಡಿದ್ದು ಐದು ಮನೆಗಳು ಮಾತ್ರ ಎನ್ನುವುದು ಸೋಜಿಗದ ಸಂಗತಿ.

ಮುಖ್ಯವಾಗಿ ಈ ಊರಿನಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಚರಂಡಿಗಳ ನೀರು ಮಣ್ಣಿನ ರಸ್ತೆಯಲ್ಲಿ ಹರಿಯುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಆಗಾಗ ಎದುರಾಗುತ್ತದೆ. ಪರಿಶಿಷ್ಟ ಪಂಗಡದವರೇ ಹೆಚ್ಚಾಗಿ ವಾಸಿಸುವ ಈ ಹಳ್ಳಿ ಈವರೆಗೆ ಸಮಾಜ ಕಲ್ಯಾಣ ಇಲಾಖೆಯ ಯಾವೊಬ್ಬ ಅಧಿಕಾರಿ ಕೂಡ ಇಣುಕಿ ನೋಡಿಲ್ಲ.

‘ಈ ಊರಿನ ಜನರು ಸುತ್ತಲೂ ಇರುವ ಸುಜ್ಞಾನಂಪಲ್ಲಿ, ಉಪ್ಪಾರ್ಲಪಲ್ಲಿ, ವಂಗ್ಯಾರ್ಲಪಲ್ಲಿ, ಬಿಳ್ಳೂರು ಯಾವುದೇ ಗ್ರಾಮಗಳಿಗೆ ಹೋಗಬೇಕಾದರೂ ಕನಿಷ್ಠ ಐದು ಕಿ.ಮೀ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಇಂದಿಗೂ ಇಲ್ಲಿನ ಜಿಲ್ಲಾಡಳಿತ ಜನರಿಗೆ ಕನಿಷ್ಠ ಮೂಲಸೌಕರ್ಯ ಮುಂದಾಗಿಲ್ಲ ಎನ್ನುವುದು ದುರಂತ’ ಎಂದು ಸ್ಥಳೀಯ ನಿವಾಸಿ ಪಿ.ಎನ್.ಶಾಂತಮೂರ್ತಿ ತಿಳಿಸಿದರು.

‘ಇಲ್ಲಿನ ಜನರಿಗೆ ಭೂಮಿ ಇದ್ದರೂ ಬೊರ್‌ವೆಲ್‌ ಕೊರೆಯಿಸುವ ಶಕ್ತಿ ಇಲ್ಲ. ಹೀಗಾಗಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಿ ಕೊಟ್ಟರೆ ವ್ಯವಸಾಯ ಮಾಡಿಕೊಂಡಾದರೂ ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ವಿವಿಧ ಆಶ್ರಯ ಯೋಜನೆಗಳಡಿ ಮನೆಗಳನ್ನು ಕಟ್ಟಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT