ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಕಾರ್ಮಿಕರ ಮಾರುಕಟ್ಟೆ !

Last Updated 9 ಫೆಬ್ರುವರಿ 2014, 5:36 IST
ಅಕ್ಷರ ಗಾತ್ರ

ಯಾವುದಾದರೂ ನಿರೀಕ್ಷೆ ಇರಲಿ, ಆ ಕ್ಷಣಗಳು ಸುದೀರ್ಘ ಎನಿಸುತ್ತವೆ. ಅಂಥದ್ದರಲ್ಲಿ ಇಡೀ ಬದುಕೇ ನಿರೀಕ್ಷೆ ಆಗಿಬಿಟ್ಟರೆ... ಅದಿನ್ನೆಷ್ಟು ಸುದೀರ್ಘ ಎನಿಸಬಹುದು!

ಬಾಗೇಪಲ್ಲಿಯ ಈ ಕಾರ್ಮಿಕರ ನಿತ್ಯದ ಮುಂಜಾವು ನಿರೀಕ್ಷೆಯೊಂದಿಗೇ ಆರಂಭವಾಗುತ್ತದೆ. ಯಾರೋ ಬಂದು ಕೆಲಸಕ್ಕೆ ಕರೆದೊಯ್ಯುತ್ತಾರೆ ಎಂದು ಕಣ್ಣರಳಿಸಿ, ರಸ್ತೆ ಕಡೆಗೆ  ನೋಡುತ್ತಾ ನಿಲ್ಲುತ್ತಾರೆ ಅಥವಾ ಕೂರುತ್ತಾರೆ. ಇವರಿಗೆ ನಿತ್ಯವೂ ಅಚ್ಚರಿ ಎದುರಿಗಿರುತ್ತದೆ. ಆದರೆ ಸಕಾರಾತ್ಮಕವಾಗಿರುತ್ತದೆಯೇ ಎಂಬ ಪ್ರಶ್ನೆಗೆ ಖಂಡಿತಾ ಇವರಿಗೆ ಉತ್ತರ ಗೊತ್ತಿಲ್ಲ.

ಇವರು ಈ ಇಡೀ ದಿನ ನೂಕುವುದು ಹೇಗೆ ಎಂಬ ಚಿಂತೆಯಲ್ಲಿರುತ್ತಾರೆ. ಇಂಥ ದುಗುಡ, ಚಿಂತೆ, ಸಂತಸ ಮೊಗದಲ್ಲಿ ಕಾಣಬೇಕಾದರೆ ಬಾಗೇಪಲ್ಲಿಯ ಡಾ. ಎಚ್‌.ನರಸಿಂಹಯ್ಯ ವೃತ್ತಕ್ಕೆ ಮುಂಜಾವಿನಲ್ಲಿ ಹೋಗಬೇಕು. ಇದನ್ನು ಗೂಳೂರು ವೃತ್ತ ಎಂದು ಸಹ ಕರೆಯಲಾಗುತ್ತದೆ.
ಇಲ್ಲಿ ಬಡತನವನ್ನೇ ಹಾಸುಹೊಕ್ಕಿಸಿಕೊಂಡವರು, ದುಡಿದೇ ಹೊಟ್ಟೆ ತುಂಬಿಸಿಕೊಳ್ಳುವ ಛಲವಂತರು  ಕಣ್ಣಿಗೆ ಬೀಳುತ್ತಾರೆ. ಈ ವೃತ್ತದಲ್ಲಿ ಪ್ರತಿ ದಿನ ಬೆಳಿಗ್ಗೆ 6ರಿಂದ 8ರ ತನಕ ಅಪಾರ ಸಂಖ್ಯೆಯಲ್ಲಿ ನೆರೆಯುವ ಕೂಲಿಕಾರ್ಮಿಕರು ಬದುಕಿನ ವಿವಿಧ ಮುಖಗಳಿಗೆ ಸಾಕ್ಷಿಯಾಗುತ್ತಾರೆ.   ಯುವಕರು ವೃದ್ಧರು ಒಟ್ಟಾಗಿ ಒಂದೆಡೆ ನಿಂತು ಚಾತಕಪಕ್ಷಿಗಳಂತೆ ಕೂಲಿ ಕರೆಗೆ ಕಾಯುತ್ತಾರೆ.

ಯಾರಾದರೂ ಕೈ ಅಥವಾ ಬಾಯಿ ಸೆನ್ನೆ ಮಾಡಿದರೆ ಸಾಕು 10 ರಿಂದ 15 ಮಂದಿ ದುಬುದುಬುನೇ ಓಡಿ ಹೋಗುತ್ತಾರೆ,
ಕೆಲಸ ಇಬ್ಬರಿಗೆ ಇದೆಯೇ ಹೊರತು ಹತ್ತು ಮಂದಿಗಿಲ್ಲ ಎಂದು ಹೇಳುವಷ್ಟರ ವೇಳೆಗೆ ಉಳಿದವರೆಲ್ಲರ ಮೊಗದಲ್ಲಿ ನಿರಾಸೆ ಛಾಯೆ ಆವರಿಸಿರುತ್ತದೆ.

  ‘ಅಣ್ಣಾ, ಅಣ್ಣಾ...ನೀನು ಎಷ್ಟು ಕೂಲಿ ಕೊಡ್ತಿಯಾ ಕೊಡು...ನಾನೂ ಕೆಲಸಕ್ಕೆ ಬರುತ್ತೇನೆ’ ಎಂದು ಒಬ್ಬೊಬ್ಬರು ಅಂಗಲಾಚುತ್ತಾರೆ. ಬೇಡಿಕೊಂಡ ನಂತರವೂ ಕೆಲಸ ಸಿಗದಾದಾಗ, ಕಡೆಗೆ ಒಬ್ಬರಿಗಾದರೂ ಕೆಲಸ ಸಿಕ್ಕಿತಲ್ಲ ಎಂಬ ಸಮಾಧಾನದಿಂದ ವೃತ್ತದ ಬದಿ ನಿಂತು ಮತ್ತೊಂದು ಕೆಲಸದ ಕರೆಗಾಗಿ ಕಾಯುತ್ತಾರೆ.

ದೂರದಲ್ಲಿ ಎಲ್ಲೋ ಆಟೊರಿಕ್ಷಾ, ದ್ವಿಚಕ್ರ ವಾಹನ, ಕಾರು ಬರುತ್ತಿರುವ ಕುರಿತು ಸುಳಿವು ಸಿಕ್ಕರೆ ಸಾಕು, ಕೂಲಿಕಾರ್ಮಿಕರು ಸಜ್ಜಾಗಿ ನಿಲ್ಲುತ್ತಾರೆ. ಕರೆಯುವ ಮುನ್ನವೇ ಕೂಲಿಕಾರ್ಮಿಕರು ಕೈಕಟ್ಟಿ ನಿಲ್ಲುತ್ತಾರೆ.  ಕೆಲಬಾರಿ ಒಬ್ಬಿಬ್ಬರನ್ನು ಆಯ್ಕೆಮಾಡುವುದರಲ್ಲಿ ಉದ್ಯೋಗದಾತರು ಸುಸ್ತಾಗುತ್ತಾರೆ.

ಯುವಕರಿಗಿಂತ 50 ರಿಂದ 60 ವಯಸ್ಸಿನವರೇ ಹೆಚ್ಚು ಮಂದಿ ಕೆಲಸಕ್ಕಾಗಿ ನಿಂತಿರುತ್ತಾರೆ. ಯುವಕರಿಂದ ಆದಷ್ಟೂ ಬೇಗ ಕೆಲಸ ಮಾಡಿಸಿಕೊಳ್ಳಬಹುದು. ವೃದ್ಧರನ್ನು ಕರೆದೊಯ್ಯುದರೇ ನಾವೇ ಅವರ ಸಹಾಯ ಮಾಡಬೇಕಾಗುತ್ತದೆ. ಯುವಕರು ಕೂಲಿಗೆಲಸಕ್ಕೆ ಬರುತ್ತಾರೆ. ಆದರೆ ಅವರನ್ನು ಸಮಾಧಾನದಿಂದ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಸಾಕುಸಾಕಾಗಿ ಹೋಗುತ್ತದೆ ಎನ್ನುತ್ತಾರೆ ಗುತ್ತಿಗೆದಾರ ಶ್ರೀನಿವಾಸ್ ರೆಡ್ಡಿ.

‘ ಬೆಳಿಗ್ಗೆ ಎದ್ದ ಕೂಡಲೇ ಗೂಳೂರು ವೃತ್ತಕ್ಕೆ ಬರುತ್ತೇವೆ.  ಆಯಾ ದಿನಕ್ಕೆ ಊಟ ಮಾಡುವಷ್ಟು ಹಣ ಸಿಕ್ಕರೆ ಸಾಕೆಂದು ನಾವು ಕಾಯುತ್ತಿರುತ್ತೇವೆ. ಬೆಂಗಳೂರಿಗೆ ಅಥವಾ ಬೇರೆ ಊರಿಗೆ ಕರೆದೊಯ್ದರೇ ಅಲ್ಲಿಯೂ ನಾವು ಹೊರಟುಬಿಡುತ್ತೇವೆ. ನಮಗೆ ಕೆಲಸ ಬೇಕು, ಹೊಟ್ಟೆ ತುಂಬಾ ಊಟ ಮಾಡಬೇಕು ಅಷ್ಟೆ’ ಎನ್ನುತ್ತಾರೆ ಕೂಲಿಕಾರ್ಮಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT