ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಕ್ರಮದ ಎಚ್ಚರಿಕೆ

Last Updated 24 ಏಪ್ರಿಲ್ 2013, 10:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಬಾರದು. ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ, ಅಂತಹ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, `ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯು 16 ಲಕ್ಷ ರೂಪಾಯಿ ಮಾತ್ರವೇ ಖರ್ಚು ಮಾಡಲು ಅವಕಾಶವಿದೆ. ಪ್ರತಿ ಬಾರಿಯು 20 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಅಭ್ಯರ್ಥಿಯು ವೆಚ್ಚ ಮಾಡಿದ್ದಲ್ಲಿ, ಅದನ್ನು ತಮ್ಮ ಬ್ಯಾಂಕು ಖಾತೆಯಿಂದಲೇ ಭರಿಸಬೇಕು' ಎಂದರು.

`ಖರ್ಚು-ವೆಚ್ಚದ ಪಾವತಿಗಳನ್ನು ಚೆಕ್ ಮೂಲಕವೇ ನಿರ್ವಹಿಸಬೇಕು. ಆಯಾ ದಿನದ ವೆಚ್ಚವನ್ನು ಆಯಾದಿನವೇ ವೆಚ್ಚದ ಲೆಕ್ಕಾಧಿಕಾರಿಗಳಿಗೆ ಅಭ್ಯರ್ಥಿಯು ತಪ್ಪದೇ ನೀಡಬೇಕು. ಕರಪತ್ರ, ಪೋಸ್ಟರ್ ಮುಂತಾದವು ಮುದ್ರಿಸುವ ಮುನ್ನ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಅನಧಿಕೃತ ಮುದ್ರಣಗಳಿಗೆ ಸಂಬಂಧಿಸಿದಂತೆ 1951ರ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 127 ಎ (1) ರಂತೆ ಕ್ರಮ ವಹಿಸಲಾಗುವುದು. ಚುನಾವಣಾ ಪ್ರಚಾರಗಳಿಗೆ ಅನುಮತಿ ಇಲ್ಲದೆ ವಾಹನಗಳನ್ನು ಬಳಸುವಂತಿಲ್ಲ' ಎಂದು ಅವರು ತಿಳಿಸಿದರು.

`ಮತದಾರರಿಗೆ ಆಮಿಷ ಒಡ್ಡಲು ಸೀರೆ, ಹಣ, ಗೃಹಪಯೋಗ ವಸ್ತುಗಳು, ಸಾರಾಯಿ ಇನ್ನಿತರ ವಸ್ತುಗಳನ್ನು ನೀಡುವಂತಿಲ್ಲ. ಚುನಾವಣಾ ಪ್ರಚಾರದ ಪತ್ರಿಕೆ, ಭಿತ್ತಿಪತ್ರ ಜಾಹೀರಾತುಗಳಲ್ಲಿ ಮುದ್ರಕರ ಮತ್ತು ಪ್ರಕಟಿಸುವವರ ಹೆಸರು, ವಿಳಾಸ ಹಾಗೂ ಮುದ್ರಿಸಿದ ಸಂಖ್ಯೆಯನ್ನು ನಮೂದಿಸಬೇಕು.

ಅನುಮತಿ ಇಲ್ಲದೆ ಅವುಗಳನ್ನು ಖಾಸಗಿ ಸೇರಿದ ಭೂಮಿ ಕಾಂಪೌಂಡ್‌ಗಳಿಗೆ ಅಂಟಿಸುವುದು ನಿಷಿದ್ಧ. ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪೊಲೀಸ್ ಮತ್ತು ಚುನಾವಣಾಧಿಕಾರಿಗಳ ಅನುಮತಿಯಿಲ್ಲದೇ ಸಾರ್ವಜನಿಕ ಸಭೆ ನಡೆಸುವಂತಿಲ್ಲ' ಎಂದು ಅವರು ತಿಳಿಸಿದರು.

`ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ 15 ರಿಂದ 20 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್ ಅಧಿಕಾರಿಯನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 76 ಸೆಕ್ಟರ್ ಅಧಿಕಾರಿಗಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಘಟಕವನ್ನು ಸಹ ತೆರೆಯಲಾಗಿದೆ. ಅದು ದಿನದ 24 ಗಂಟೆಗಳ ಕಾರ್ಯನಿರ್ವಹಿಸಲಿದೆ. ಯಾವುದಾದರೂ ದೂರುಗಳಿದ್ದಲ್ಲಿ, ದೂರವಣಿ ಸಂಖ್ಯೆ: 08156-250006 ಅಥವಾ 250007 ಸಂಪರ್ಕಿಸಬಹುದು. ದೂರವಾಣಿ ಮೂಲಕ ದೂರು ದಾಖಲಿಸ ಬಹುದು' ಎಂದರು.
                                                                               
ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮಾ, ಚುನಾವಣಾಧಿಕಾರಿ ಸದಾಶಿವ ಮಿರ್ಜಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT