ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಬಜೆಟ್‌ ಘೋಷಣೆಯಲ್ಲೇ ಉಳಿದ ಯೋಜನೆಗಳು

Published 29 ಜನವರಿ 2024, 6:47 IST
Last Updated 29 ಜನವರಿ 2024, 6:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು: 2024–25ನೇ ಸಾಲಿನ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, 2023-24ನೇ ಸಾಲಿನಲ್ಲಿ ಪ್ರಸ್ತಾಪಿಸಿದ ಯೋಜನೆಗಳು ಘೋಷಣೆಯಾಗಿಯೇ ಉಳಿದಿವೆ.

ಚಿಕ್ಕಮಗಳೂರು ಜಿಲ್ಲೆಗೆ ಮೂರು ಕೊಡುಗೆಗಳನ್ನು ಸರ್ಕಾರ ಬಜೆಟ್‌ನಲ್ಲಿ ನೀಡಿತ್ತು. ಕಿರು ವಿಮಾಣ ನಿಲ್ದಾಣ, ಎನ್.ಆರ್.ಪುರದಲ್ಲಿ ಅಗ್ನಿಶಾಮಕ ಠಾಣೆ, ಕಾಫಿಗೆ ಬ್ರ್ಯಾಂಡ್ ರೂಪ ನೀಡುವ ಪ್ರಸ್ತಾಪ ಮಾಡಿತ್ತು.

ಮೊದಲನೆಯದಾಗಿ ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು. ಇದಕ್ಕೆ 1,200 ಮೀಟರ್ ರನ್‌ ವೇ ನಿರ್ಮಾಣವಾಗಬೇಕಿದ್ದು, 140 ಎಕರೆ ಜಾಗದ ಅಗತ್ಯವಿದೆ. ನಗರದ ಹೊರ ವಲಯದಲ್ಲಿ ‌ಜಿಲ್ಲಾಡಳಿತ 120 ಎಕರೆ 22 ಗುಂಟೆ ಜಾಗವನ್ನು ಈ ಹಿಂದೆಯೇ ಕಾಯ್ದಿರಿಸಿದ್ದು, ಬಾಕಿ 19 ಎಕರೆಯನ್ನು ಸುತ್ತಮುತ್ತಲ ರೈತರಿಂದ ಸ್ವಾಧೀನ ಮಾಡಿಕೊಳ್ಳಬೇಕಿದೆ.

ಜಿಲ್ಲಾಡಳಿತದ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ಉಪವಿಭಾಗಾಧಿಕಾರಿ ಅವರು ರೈತರೊಂದಿಗೆ ಸಭೆ ನಡೆಸಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಪ್ರಸ್ತಾವನೆ ಕೋರಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಎಸ್‌ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.

ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿ ಅವರು ಸೆಪ್ಟೆಂಬರ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿ ಕಿರು ವಿಮಾಣ ನಿಲ್ದಾಣಕ್ಕೆ ಮೀಸಲಿರಿಸಿರುವ ಜಾಗವನ್ನೂ ಪರಿಶೀಲನೆ ನಡೆಸಿದ್ದರು. 19 ಎಕರೆ ಭೂಸ್ವಾಧೀನಕ್ಕೆ ₹7 ಕೋಟಿ ನೀಡಲಾಗಿದ್ದು, ಇನ್ನೂ ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಒದಗಿಸಲಾಗುವುದು ಎಂದು ತಿಳಿಸಿದ್ದರು.

‌ಸದ್ಯ ಆಡಳಿತಾತ್ಮಕ ಅನುಮೋದನೆ ದೊರಕಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಸ್ತಾವನೆ ಸಲ್ಲಿಕೆಯಾದರೆ ಅಗತ್ಯ ಇರುವ ಜಾಗವನ್ನು ಸ್ವಾಧೀನ ಮಾಡಿಕೊಡಲಾಗುವುದು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೆಎಸ್‌ಐಐಡಿಸಿ ಕಿರು ವಿಮಾಣ ನಿರ್ಮಾಣ ಮಾಡಬೇಕಿದೆ. ‘ವರ್ಷ ಕಳೆದರೂ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಆರಂಭವಾಗಿಲ್ಲ. ಇನ್ನು ಕಿರು ವಿಮಾನ ನಿಲ್ದಾಣ ನಿರ್ಮಾಣವಾಗಿ ಜಿಲ್ಲೆಯ ಜನ ವಿಮಾನದಲ್ಲಿ ಪ್ರಯಾಣ ಮಾಡುವುದು ಯಾವಾಗ’ ಎಂಬುದು ಸ್ಥಳೀಯರ ಪ್ರಶ್ನೆ.

ಕಾಫಿ
ಕಾಫಿ
ಪ್ರಸ್ತಾಪದಲ್ಲೇ ಉಳಿದ ಕಾಫಿ ಬ್ರ್ಯಾಂಡಿಂಗ್
ರಾಜ್ಯದ ಕಾಫಿಯನ್ನು ಮೌಲ್ಯವರ್ಧಿಸಿ ಬ್ರ್ಯಾಂಡ್‌ ಮಾಡುವದಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ ಕಳೆದ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿತ್ತು. ಅದು ಪ್ರಸ್ತಾಪದಲ್ಲೇ ಉಳಿದಿದ್ದು ಕಾರ್ಯರೂಪಕ್ಕೆ ಬಂದಿಲ್ಲ. ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯವು ಜಿ.ಐ(ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಹೇಳಿತ್ತು. ಪಶ್ಚಿಮಘಟ್ಟದ ಸಾಲಿನ ಬೆಟ್ಟಗಳಲ್ಲಿ ಬೆಳೆಯುವ ಕಾಫಿಗೆ ತನ್ನದೇ ಆದ ಸ್ವಾದವಿದೆ. ಮರಗಳ ನೆರಳಿನಲ್ಲಿ ಮಲೆನಾಡಿನ ಹವಮಾನದಲ್ಲಿ ಬೆಳೆಯಲಾಗುತ್ತದೆ. ಯಂತ್ರಗಳ ಬಳಕೆ ಇಲ್ಲದೆ ಬಿಸಿಲಿನಲ್ಲೇ ಒಣಗಿಸಿ ಹದ ಮಾಡುವ ಪದ್ಧತಿಯನ್ನು ಬೆಳೆಗಾರರು ಇಂದಿಗೂ ಅನುಸರಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಇದೆ. ಈ ಕಾಫಿಯನ್ನು ಇನ್ನಷ್ಟು  ಮೌಲ್ಯವರ್ಧಿಸಿ ಬ್ರ್ಯಾಂಡಿಂಗ್ ರೂಪ ನೀಡಿದರೆ ಬೇಡಿಕೆ ಹೆಚ್ಚಾಗುವುದರಲ್ಲ ಅನುಮಾನ ಇಲ್ಲ. ಬಾಬಾಬುಡನ್‌ಗಿರಿಯನ್ನು ಭಾರತದ ಕಾಫಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಗಿರಿಗಳ ಸಾಲು ದಟ್ಟವಾದ ಕಾಡು ವನ್ಯಜೀವಿಗಳ ಆವಾಸ ಸ್ಥಾನದಲ್ಲಿ ಬೆಳೆಯುವ ಕಾಫಿಗೆ ಅನನ್ಯವಾದ ರುಚಿ ಇದೆ ಎಂಬುದನ್ನು ದೇಶ–ವಿದೇಶಗಳಲ್ಲಿ ಬ್ರ್ಯಾಂಡ್ ಮಾಡಿದರೆ ಬೆಳೆಗಾರರಿಗೆ ಅನುಕೂಲ ಆಗಲಿದೆ.  ಉದ್ಯಮಿ ಸಿದ್ಧಾರ್ಥ ಅವರು ಕಾಫಿ ಕೆಫೆ ಆರಂಭಿಸಿದ ಬಳಿಕ ಕಾಫಿ ಬಳಕೆ ಹೆಚ್ಚಾಯಿತು. ಈಗ ಸರ್ಕಾರವೇ ಬ್ರ್ಯಾಂಡ್ ರೂಪ ನೀಡಿದರೆ ಆಂತರಿಕ ಬಳಕೆಯೂ ಹೆಚ್ಚಾಗಲಿದೆ. ಆದರೆ ಈ ವಿಷಯವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಸರ್ಕಾರ ಸುಮ್ಮನಾಯಿತು ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.
ಅಗ್ನಿಶಾಮಕ ಠಾಣೆಗೆ ಕಾರ್ಯಾದೇಶ
ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಯೋಜನೆಗಳಲ್ಲಿ ಎನ್.ಆರ್‌.ಪುರದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವ ಪ್ರಸ್ತಾಪವನ್ನೂ ಸರ್ಕಾರ ಮಾಡಿತ್ತು. ಠಾಣೆ ನಿರ್ಮಾಣಕ್ಕೆ ಹೀಳುವಳ್ಳಿ ಗ್ರಾಮದ ಸರ್ವೆ ನಂಬರ್ 76ರಲ್ಲಿ 2 ಎಕರೆ ಜಾಗವನ್ನು ಜಿಲ್ಲಾಡಳಿತ ಕಾಯ್ದಿರಿಸಿದೆ. ₹3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದೆ. ಕಾಮಗಾರಿ ಆರಂಭಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಿದೆ. ಕಾಯ್ದಿರಿಸಿರುವ ಜಾಗದಲ್ಲಿ ಇರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಮರ ತೆರವಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವಾಹನ ಖರೀದಿಗೆ ಸಾಲ
ಗುಡ್ಡಗಾಡು ಪ್ರದೇಶದ ರೈತರು ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಣೆಗೆ ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ ಖರೀದಿಗೆ ₹7 ಲಕ್ಷದ ತನಕ ಸಾಲವನ್ನು ಶೇ 4ರ ಬಡ್ಡಿ ದರದಲ್ಲಿ ವಿತರಿಸಲಾಗುವುದು ಎಂದು ಸರ್ಕಾರ ಪ್ರಸ್ತಾಪಿಸಿತ್ತು. ಶಿವಮೊಗ್ಗ ಕೊಡಗು ಹಾಸನ ದಕ್ಷಿಣ ಕನ್ನಡ ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಆದೇಶದ ಪ್ರಕಾರ ಗುಡ್ಡಗಾಡು ಪ್ರದೇಶಗಳ ಹಳ್ಳಿಗಳ ಪಟ್ಟಿಯನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಿದ್ಧಪಡಿಸಿದ್ದಾರೆ. ರೈತರಿಂದ ಅರ್ಜಿಗಳು ಸಲ್ಲಿಕೆಯಾದರೆ ಸಾಲ ನೀಡಲು ಬ್ಯಾಂಕ್‌ಗಳು ಸಜ್ಜಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
‘ಬ್ರ್ಯಾಂಡಿಂಗ್ ಪ್ರಸ್ತಾಪವಷ್ಟೆ’
ಕಾಫಿ ಬ್ರ್ಯಾಂಡಿಂಗ್ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದನ್ನು ಬಿಟ್ಟು ಬೇರೆ ಏನನ್ನೂ ಸರ್ಕಾರ ಮಾಡಲಿಲ್ಲ ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ  ಎಚ್.ಟಿ ಮೋಹನ್ ಕುಮಾರ್ ಬೇಸರ ವ್ಯಕ್ತಪಡಿಸಿದರು. ‘ಬ್ರ್ಯಾಂಡಿಂಗ್ ಹೇಗೆ ಮಾಡಬೇಕು ಎಂಬುದನ್ನೂ ಬೆಳೆಗಾರರಿಗೆ ತಿಳಿಸಿಲ್ಲ ಈ ಸಂಬಂಧ ಯಾವುದೇ ಸಮಿತಿಯೂ ರಚನೆಯಾಗಲಿಲ್ಲ. ಕಾಫಿ ಬೆಳೆಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾಪವೂ ಸಾಕಾರವಾಗಲಿಲ್ಲ. ಬಜೆಟ್‌ನಲ್ಲಿ ಪ್ರಸ್ತಾಪಿಸಿ ಸುಮ್ಮನಾದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.
ಕಾಫಿ ಬೆಳೆಗಾರರಿಗೆ ಅನುಕೂಲ ಆಗಿಲ್ಲ
ಕಾಫಿ ಉದ್ಯಮಕ್ಕೆ ಸರ್ಕಾರದಿಂದ ಯಾವುದೇ ಅನುಕೂಲ ಆಗಿಲ್ಲ ಎಂದು ಕಾಫಿ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೊಲದಗದ್ದೆ ಹೇಳಿದರು. ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿರುವ ಕಾಫಿ ಬೆಳೆಗಾರರನ್ನೇ ಸರ್ಕಾರ ಮರೆತಿದೆ. ಉಚಿತ ವಿದ್ಯುತ್ ನೀಡುವ ಭರವಸೆ ಈಡೇರಲಿಲ್ಲ ಕಾಫಿ ಬ್ರ್ಯಾಂಡಿಂಗ್ ವಿಷಯ ಘೋಷಣೆಯಲ್ಲೇ ಉಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT