ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ದಾಳಿ: ಗಡಿ ಗ್ರಾಮದಿಂದ ಜನರ ಸ್ಥಳಾಂತರ

Last Updated 22 ಮೇ 2018, 19:36 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಬಳಿ ಪಾಕ್‌ ಸೇನೆ ಕದನ ವಿರಾಮ ಉಲ್ಲಂಘಿಸಿ ಮಂಗಳವಾರ ಬೆಳಿಗ್ಗೆ ನಡೆಸಿದ ಭಾರಿ ಶೆಲ್‌ ಮತ್ತು ಗುಂಡಿನ ದಾಳಿಗೆ 70ರ ವೃದ್ಧೆ ಸೇರಿ ಐವರು ಗಾಯಗೊಂಡಿದ್ದಾರೆ.

ಗಡಿಯಲ್ಲಿ ಆತಂಕದ ಸ್ಥಿತಿ ನೆಲೆಸಿರುವುದರಿಂದ ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.

‘ಅಖ್ನೂರ್‌, ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್‌ ದಾಳಿ ಮುಂದುವರಿದಿದೆ. ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿದೆ’ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್‌.ಎಸ್‌.ಪುರ, ಅರ್ನಿಯಾ ಸೆಕ್ಟರ್‌ಗಳಲ್ಲಿ ಪಾಕ್‌ ಸೇನೆ ಶೆಲ್‌ ದಾಳಿ ನಡೆಸುತ್ತಿರುವುದರಿಂದ, ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಮ್ಮು ವಿಭಾಗೀಯ ಕಮಿಷನರ್‌ ಹೇಮಂತ್‌ಕುಮಾರ್‌ ಶರ್ಮಾ ತಿಳಿಸಿದ್ದಾರೆ.

**

ಪ್ರತ್ಯುತ್ತರಕ್ಕೆ ಸೇನೆ ಸ್ವತಂತ್ರ: ರಾಜನಾಥ್‌ ಸಿಂಗ್‌

ನವದೆಹಲಿ: ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ಮುಂದುವರಿಸಿದರೆ ‘ಪಾಕ್‌ಗೆ ಭಾರತೀಯ ಪಡೆಗಳು ಯಾವ ರೀತಿಯ ಪ್ರತ್ಯುತ್ತರ ನೀಡುತ್ತಿವೆ’ ಎಂದು ಸೇನೆಯನ್ನು ಸರ್ಕಾರ ಕೇಳುವುದಿಲ್ಲ ಎನ್ನುವ ಮೂಲಕ ಗೃಹ ಸಚಿವ ರಾಜನಾಥ್‌ ಸಿಂಗ್‌ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

ಗಡಿಯಲ್ಲಿ ದಾಳಿಗಳು ಮುಂದುವರಿದರೆ ತಕ್ಕ ಉತ್ತರ ನೀಡಲು ಸೇನೆ ಸರ್ವಸ್ವತಂತ್ರವಾಗಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.

ಗಡಿ ರಕ್ಷಣಾ ಪಡೆಯ 16ನೇ ಸಂಸ್ಥಾಪನಾ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ‘ಎಂದೂ ಸರಿದಾರಿಗೆ ಬಾರದ ಪಾಕಿಸ್ತಾನವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ' ಎಂದರು.

**

ಪಾಕಿಸ್ತಾನದ ವಿರುದ್ಧ ಪ್ರತಿಭಟನೆ

ಜಮ್ಮು: ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಸ್ಥಳೀಯರು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿದರು.

ಬಿಜೆಪಿ ಮತ್ತು ಪಿಡಿಪಿ ಸಮ್ಮಿಶ್ರ ಸರ್ಕಾರದ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಹೇರುವಂತೆ ಒತ್ತಾಯಿಸಿದರು.

ಜಮ್ಮು ವೆಸ್ಟ್ ಅಸೆಂಬ್ಲಿ ಮೂವ್‌ಮೆಂಟ್‌ ಸಂಘಟನೆ ಮತ್ತು ವಕೀಲರ ಸಂಘದ ಅಧ್ಯಕ್ಷ ಸುನೀಲ್ ಡಿಂಪಲ್‌ ನೇತೃತ್ವದಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರತಿಭಟನಾಕಾರರು, ಇಲ್ಲಿನ ಜಾನಿಪುರ ಹೈಕೋರ್ಟ್‌ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.

ಪಾಕ್‌ ಸೇನೆ ಭಾರಿ ಶೆಲ್‌ ಮತ್ತು ಗುಂಡಿನ ದಾಳಿಗೆ ಜಮ್ಮು, ಕಠುವಾ ಮತ್ತು ಸಾಂಬಾ ಜಿಲ್ಲೆಯಲ್ಲಿ ಹಲವು ಜನರು ನೆಲೆ ಕಳೆದುಕೊಂಡು, ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಒಂದು ವಾರದಲ್ಲಿ ಪಾಕ್‌ ಸೇನೆಯ ದಾಳಿಗೆ 8 ತಿಂಗಳ ಮಗು ಸೇರಿ 7 ಜನರು ಮೃತಪಟ್ಟಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT