ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಮಾರ್ಗದಲ್ಲಿ‘ಸ್ಟೀಲ್‌ ಗ್ರಿಡರ್’ ಅಳವಡಿಕೆ ಯಶಸ್ವಿ

 ಭದ್ರಾ ಮೇಲ್ದಂಡೆ ಯೋಜನೆ; ಹೆಬ್ಬೂರು ಸಮೀಪ ಸುರಂಗ ನಿರ್ಮಾಣ
Last Updated 6 ಮೇ 2019, 17:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ಕಾಲುವೆ ಸುರಂಗ ನಿರ್ಮಾಣ ನಿಟ್ಟಿನಲ್ಲಿ ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹೆಬ್ಬೂರು ಸಮೀಪ ರೈಲು ಮಾರ್ಗದಲ್ಲಿ ‘ಸ್ಟೀಲ್‌ ಗ್ರಿಡರ್’ ಅನ್ನು ಸೋಮವಾರ ಯಶಸ್ವಿಯಾಗಿ ಅಳವಡಿಸಲಾಗಿದ್ದು, ರೈಲು ಮಾರ್ಗದ ಕೆಳಗೆ ಸಿಮೆಂಟ್‌ ಬಾಕ್ಸ್‌ ತೂರಿಸುವ ಕಾಮಗಾರಿ ಶುರುವಾಗಿದೆ.

ಬೆಳಿಗ್ಗೆ ಸುಮಾರು ಮೂರು ಗಂಟೆ ಕಾಲ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕ್ರೇನುಗಳು, ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸಲಾಯಿತು.

ದ್ವಿಪಥ ಮಾರ್ಗದ ಒಂದು ಕಡೆ ಈಗ ಗ್ರಿಡರ್‌ ಅಳವಡಿಸಲಾಗಿದ್ದು, ಇನ್ನೊಂದು ಕಡೆ ಬಾಕಿ ಇದೆ. ಕಾಲುವೆಯ ಸುರಂಗ ನಿರ್ಮಾಣ ನಿಟ್ಟಿನಲ್ಲಿ ಸಿಮೆಂಟ್‌ ಬಾಕ್ಸ್‌ಗಳನ್ನು ಅಳವಡಿಸುವ ಕಾಮಗಾರಿ ಚುರುಕು ಪಡೆದಿದೆ.

‘ಬೆಳಿಗ್ಗೆ 6.30ರಿಂದ 9.20ರವರೆಗೆ ಕಾರ್ಯಾಚರಣೆ ನಡೆಸಲಾಯಿತು. 80 ಅಡಿ ಉದ್ದ, 14 ಅಡಿ ಅಗಲದ ಗ್ರಿಡರ್‌ ಅಳವಡಿಸಲಾಗಿದೆ. ಇದೇ 13ರಂದು ಇಲ್ಲಿನ ಮತ್ತೊಂದು ಪಥಕ್ಕೆ ಗ್ರಿಡರ್‌ ಅಳವಡಿಸಲಾಗುವುದು. ಮಾರ್ಗದಲ್ಲಿ ಈಗ ರೈಲುಗಳು ಯಥಾಪ್ರಕಾರ ಸಂಚರಿಸುತ್ತಿವೆ. ಒಂದೂವರೆ ತಿಂಗಳಿನಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ರೈಲ್ವೆ ಎಂಜಿನಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ವಲಯ ಮುಖ್ಯ ಎಂಜಿನಿಯರ್‌ ಎಂ.ಜಿ.ಶಿವಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಇಲ್ಲಿ 50 ಮೀಟರ್‌ ಉದ್ದದ ಸುರಂಗ ನಿರ್ಮಿಸಲಾಗುವುದು. ಸಿಮೆಂಟ್‌ ಬಾಕ್ಸ್‌ಗಳನ್ನು ತೂರಿಸುವ ಕಾಮಗಾರಿ ಶುರುವಾಗಿದೆ. ಒಟ್ಟು ನಾಲ್ಕು ಬಾಕ್ಸ್‌ ಅಳವಡಿಸಬೇಕಿದೆ’ ಎಂದು ತಿಳಿಸಿದರು.

‘ತರೀಕೆರೆ ತಾಲ್ಲೂಕಿನ ಶಾಂತಿಪುರ ಬಳಿಯ ಪಂಪ್‌ಹೌಸ್‌ನಿಂದ ಭದ್ರಾ ಮೇಲ್ದಂಡೆ ಕಾಲುವೆಗೆ ನೀರು ಪರೀಕ್ಷಾರ್ಥ ಹರಿಸುವ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

‘ಬೆಟ್ಟತಾವರೆಕೆರೆ ಬಳಿಯ ಎರಡನೇ ಪಂಪ್‌ಹೌಸ್‌ನ ಪರೀಕ್ಷಾರ್ಥ ಪ್ರಯೋಗ ಶೀಘ್ರದಲ್ಲಿ ನಡೆಯಲಿದೆ. ಜೂನ್‌ ಅಂತ್ಯದೊತ್ತಿಗೆ ಕಾಲುವೆ ಮೂಲಕ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಗುರಿ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT