ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ಬೀರಲಿಂಗೇಶ್ವರ ಬಡಾವಣೆ; ತಪ್ಪದ ಬವಣೆ

ಅಜ್ಜಂಪುರ: ಮೇಲ್ದರ್ಜೆಗೇರದ ರಸ್ತೆಗಳು, ನಿರ್ಮಾಣವಾಗದ ಚರಂಡಿ
Last Updated 26 ಜುಲೈ 2022, 6:16 IST
ಅಕ್ಷರ ಗಾತ್ರ

ಅಜ್ಜಂಪುರ: ಕಾಂಕ್ರೀಟ್ ಕಾಣದ ಕಚ್ಚಾ ರಸ್ತೆ, ರಸ್ತೆಯಲ್ಲಿ ಇಂಬಿಲ್ಲದೇ ನಿರ್ಮಾಣವಾಗಿರುವ ಗುಂಡಿಗಳು, ಕಾಣದ ಚರಂಡಿ, ರಸ್ತೆಗೆ ಹರಿಯುತ್ತಿರುವ ಮನೆಗಳ ತ್ಯಾಜ್ಯ ನೀರು...

ಇದು ಪಟ್ಟಣದ ಬೀರಲಿಂಗೇಶ್ವರ ಬಡಾವಣೆಯಲ್ಲಿ ಕಂಡು ಬರುವ ದೃಶ್ಯ. ಈ ಬಡಾವಣೆಯು ಸಮರ್ಪಕ ರಸ್ತೆ ಮತ್ತು ಚರಂಡಿಯಂತಹ ಮೂಲ ಸಮಸ್ಯೆಗಳಿಂದ ವಂಚಿತವಾಗಿದೆ. ಇಲ್ಲಿ ಎರಡು, ಮೂರು ಅಂತಸ್ತಿನ ನೂರಾರು ಮನೆಗಳಿವೆ. ವಾಸವಿರುವ ಸಾವಿರಾರು ನಿವಾಸಿಗಳು ರಸ್ತೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.

ಟಿ.ಎಚ್.ರಸ್ತೆಯಿಂದ ಬೀರಲಿಂಗೇಶ್ವರ ಬಡಾವಣೆಯಲ್ಲಿರುವ ಅರುಣೋದಯ ಪದವಿಪೂರ್ವ ಕಾಲೇಜು ಸಂಪರ್ಕ ರಸ್ತೆ, ಪರ್ವತ ರಾಯನ ಕೆರೆ ಸಂಪರ್ಕ ರಸ್ತೆಯು ಪ್ರಮುಖ ರಸ್ತೆಯಾಗಿವೆ. ಮುಖ್ಯರಸ್ತೆ ಸಂಧಿಸುವ ಹತ್ತಾರು ಅಡ್ಡ ರಸ್ತೆಗಳಿವೆ. ಯಾವೊಂದು ರಸ್ತೆಗಳೂ ಕಾಂಕ್ರೀಟ್‌ ಭಾಗ್ಯ ಕಂಡಿಲ್ಲ.

‘ಬಡಾವಣೆಯ ಎಲ್ಲ ರಸ್ತೆಗಳು ಕಚ್ಚಾ ರಸ್ತೆಯಾಗಿವೆ. ರಸ್ತೆಯುದ್ದಕ್ಕೂ ಗುಂಡಿ ಬಿದ್ದಿದ್ದು, ಮಳೆ ನೀರು ಸಂಗ್ರಹಗೊಂಡು ಕೆಸರುಮಯವಾಗಿದೆ. ವಾಹನಗಳು ಕೆಸರಿನಲ್ಲಿ ಹೂತುಕೊಳ್ಳುತ್ತಿದ್ದು, ಸಾಗಲು ತೊಂದರೆಯಾಗಿದೆ. ಮಳೆ ಗಾಲದಲ್ಲಿ ಸಮಸ್ಯೆ ಹೇಳತೀರದಾಗಿದೆ’ ಎನ್ನುತ್ತಾರೆ ನಿವಾಸಿ ಗಂಗಾಧರಪ್ಪ.

‘ಕಾಲೇಜಿನಲ್ಲಿ 160 ವಿದ್ಯಾರ್ಥಿಗಳಿದ್ದೇವೆ. ಇಪ್ಪತ್ತಕ್ಕೂ ಅಧಿಕ ಗ್ರಾಮಗಳಿಂದ ಕಾಲೇಜಿಗೆ ಬರುತ್ತಾರೆ. ಎಲ್ಲರೂ ಗುಂಡಿ ಬಿದ್ದಿರುವ, ಕೆಸರುಮಯ ರಸ್ತೆಯಲ್ಲಿಯೇ ಸಾಗಿ ಕಾಲೇಜು ತಲುಪಬೇಕಿದೆ. ಕಾಲುಗಳಲ್ಲಿ ಕೆಸರಾಗುವ ಜತೆಗೆ ಬಟ್ಟೆಯೂ ಕೊಳೆಯಾಗುತ್ತವೆ. ಮಳೆಗಾಲದ ಮೂರು ತಿಂಗಳು ಕಾಲೇಜು ತಲುಪಲು, ಮನೆಗೆ ಹಿಂದಿರಲು ಸರ್ಕಸ್‌ ಮಾಡಬೇಕಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

‘ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಪ್ರತಿ ಮನೆಯವರಿಂದಲೂ ಕಂದಾಯ ಪಡೆಯುತ್ತಿದೆ. ಆದರೂ, ರಸ್ತೆ, ಚರಂಡಿಯಂತಹ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿದೆ’ ಎಂದು ನಿವಾಸಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ ಎಂದು ನಿವಾಸಿ ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಸ್ತೆಯಲ್ಲಿ ಸಾಗಲು ಭಯ’

ರಸ್ತೆ ಸಂಪೂರ್ಣ ಹದಗೆಟ್ಟಿದೆ. ವೃದ್ಧರು, ಮಕ್ಕಳು ಕೆಸರುಮಯ ರಸ್ತೆಯಲ್ಲಿ ಸಾಗಲು ಭಯಪಡುತ್ತಿದ್ದಾರೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮುಖ್ಯ ರಸ್ತೆ ತಲುಪಲು ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು, ಗಮನ ಹರಿಸಬೇಕು. ಸುಸಜ್ಜಿತ ರಸ್ತೆ ನಿರ್ಮಿಸಿ, ಅನುಕೂಲ ಮಾಡಿಕೊಡಬೇಕು.

ಮಾಲತಿ, ನಿವಾಸಿ

‘ಬಡಾವಣೆ ಅಭಿವೃದ್ಧಿಗೆ ಕ್ರಮ’

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಕೆಲ ದಿನಗಳ ಹಿಂದೆ ಬಂದಿದ್ದೇನೆ. ಲಭ್ಯವಿರುವ ಅನುದಾನ ಪರಿಶೀಲಿಸಿ, ಬಡಾವಣೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಅಭಿವೃದ್ಧಿಗೂ ಪ್ರಯತ್ನಿಸಲಾಗುವುದು.

ನಾಗರತ್ನಾ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT