ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ: ಪರಿಹಾರ ವಿಚಾರದಲ್ಲಿ ಕೋರ್ಟ್ ತೀರ್ಪು ಅಂತಿಮ

ಸಂತ್ರಸ್ತ ರೈತರ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್
Last Updated 3 ಜುಲೈ 2022, 1:55 IST
ಅಕ್ಷರ ಗಾತ್ರ

ಅಜ್ಜಂಪುರ: ‘ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿದ್ದು, ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ವಿಚಾರದಲ್ಲಿ ಕೋರ್ಟ್ ತೀರ್ಮಾನವೇ ಅಂತಿಮ’ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕಾಟಿಗನರೆ, ಅಬ್ಬಿನಹೊಳಲು, ಚಿಣ್ಣಾ ಪುರ, ಸೊಲ್ಲಾಪುರ ಗ್ರಾಮದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಹಾರ ಹೆಚ್ಚಿಸುವ ಅಧಿಕಾರ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಲ್ಲ. ಕೋರ್ಟ್ ತೀರ್ಪು ಬರುವವರೆಗೆ ಕಾಮಗಾರಿ ನಡೆಸದಂತೆ ತಡೆ ನೀಡುವ ಅಧಿಕಾರವೂ ಇಲ್ಲ. ಆದರೆ, ಪರಿಹಾರದಲ್ಲಿ ಅನ್ಯಾಯ ಆಗಿರುವ ರೈತರಿಗೆ ಕಾನೂನಿನ ಚೌಕಟ್ಟಿನಲ್ಲಿ ಆಗಬಹುದಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಯೋಜನೆ ಭದ್ರಾ ಮೇಲ್ದಂಡೆ ಅನುಷ್ಠಾನ ಪ್ರಧಾನವಾಗಿದ್ದರೆ, ಮತ್ತೊಂದೆಡೆ ಭೂಸ್ವಾಧೀನಗೊಂಡ ರೈತರಿಗೆ ನ್ಯಾಯಯುತ ಪರಿಹಾರ ಕಲ್ಪಿಸುವುದು ಮುಖ್ಯವಾಗಿದೆ. ಇವೆರಡರ ನಡುವೆ ಸಮತೋಲನ ಸಾಧಿಸಿ, ತೀರ್ಮಾನ ಕೈಗೊಳ್ಳುವ ಹೊಣೆ ನಮ್ಮ ಮೇಲಿದೆ ಎಂದರು.

ಭೂಸ್ವಾಧೀನಗೊಂಡ ರೈತರಿಗೆ ಮಾಹಿತಿ ಕೊರತೆಯಾಗದಂತೆ ನೋಡಿ ಕೊಳ್ಳಲು ಮತ್ತು ಸಮಸ್ಯೆಗೆ ಸ್ಪಂದಿಸಲು ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಘಟಕ ತೆರೆಯಲು ಸೂಚಿಸಲಾಗಿದೆ. ಸಂತ್ರಸ್ತ ರೈತರ ಅರ್ಜಿ ತ್ವರಿತ ವಿಲೇವಾರಿಗೆ ನಿರ್ದೇಶಿಸಲಾಗಿದೆ. ಕೋರ್ಟ್ ಮೊರೆ ಹೋಗಿ ತಕರಾರು ಅರ್ಜಿ ಸಲ್ಲಿಸಿರುವ ರೈತರಿಗೆ ಪ್ರತಿವಾದಿಯಾಗಿ ಹದಿನೈದು ದಿನದೊಳಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಗೌರಾಪುರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಏಕರೂಪ ಪರಿಹಾರ’ ನೀಡುವಂತೆ ರೈತರು ಒತ್ತಾಯಿಸಿದ್ದರು. ಈ ಬಗೆಗಿನ ಪ್ರಸ್ತಾವವನ್ನು ಕಳುಹಿಸಲಾಗಿತ್ತು. ಆದರೆ, ಅದನ್ನು ಸರ್ಕಾರ ತಿರಸ್ಕರಿಸಿದೆ ಎಂದು ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಮಾಹಿತಿ ನೀಡಿದರು.

ಗುಂಟೆಯೊಂದಕ್ಕೆ ₹ 2,350 ಪರಿಹಾರ ಘೋಷಣೆಯಾಗಿದ್ದರೆ, ಪಕ್ಕದ ಗ್ರಾಮಗಳ ಸಂತ್ರಸ್ತ ರೈತರಿಗೆ ಗುಂಟೆಗೆ ₹ 1.25 ಲಕ್ಷ ಪರಿಹಾರ ನೀಡಲಾಗಿದೆ. ನಮಗೆ ಪರಿಹಾರ ಬೇಡ, ಪರ್ಯಾಯ ಭೂಮಿಯನ್ನೇ ನೀಡಿ ಎಂದು ಚಿಣ್ಣಾಪುರದ ರೈತರು ಒತ್ತಾಯಿಸಿದರು.

ಸರ್ವೆ ನಂ.45 ರಲ್ಲಿ 7.12 ಎಕರೆ ಭದ್ರಾ ಮೇಲ್ದಂಡೆ ಯೋಜನೆಗೆ ಸ್ವಾಧೀನ ಪಡಿಸಿಕೊಂಡಿದ್ದಾರೆ. ಅದರಲ್ಲಿ 280 ತೆಂಗಿನ ಮರವಿದ್ದರೂ, ಕೇವಲ 82ಕ್ಕೆ ಮಾತ್ರ ಪರಿಹಾರ ನೀಡಲಾಗಿದೆ. ₹ 90 ಲಕ್ಷ ಪರಿಹಾರ ನೀಡಬೇಕಿತ್ತು. ಆದರೆ, ಈಗ ₹ 37 ಲಕ್ಷ ನೀಡಲಾಗಿದೆ. ಆಗಿರುವ ಅನ್ಯಾಯ ಸರಿಪಡಿಸಿ ಎಂದು ಚಿಣ್ಣಾಪುರದ ರೈತ ಸಿ.ಎಸ್.ಶಾಂತಪ್ಪ ಮನವಿ ಮಾಡಿದರು.

ಕೋರ್ಟ್ ತೀರ್ಪು ಬರುವರೆಗೆ, ಕೃಷಿ ಜಮೀನು ಸ್ವಾಧೀನ ಪಡೆಯಬಾರದು ಮತ್ತು ಕಾಮಗಾರಿ ಕೈಗೊಳ್ಳಬಾರದು. ಪೊಲೀಸ್ ಅಥವಾ ಇನ್ನಾವುದೇ ಒತ್ತಡದಿಂದ ಭೂ ಸ್ವಾಧೀನಕ್ಕೆ ಮುಂದಾ ಗಬಾರದು ಎಂದು ರೈತರು ಕೋರಿದರು.

ಉಪ ವಿಭಾಗಾಧಿಕಾರಿ ಸಿದ್ದಲಿಂಗರೆಡ್ಡಿ, ಇಇ ಮಲ್ಲಿಕಾರ್ಜುನ್, ಎಇಇ ಪ್ರಕಾಶ್, ಸುರೇಶ್, ತ್ಯಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT