ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ತ ಭಾರತೀಯರ ಮಹಾನಾಯಕ ಅಂಬೇಡ್ಕರ್‌

ಅಂಬೇಡ್ಕರ್ ಅವರ 130ನೇ ಜಯಂತ್ಯುತ್ಸವದಲ್ಲಿ ಪ್ರೊ.ಮಹೇಶ್‌ಚಂದ್ರ ಗುರು
Last Updated 15 ಏಪ್ರಿಲ್ 2021, 5:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವಿಶ್ವಕ್ಕೆ ಸೇರಿದವರು, ಇಡೀ ವಿಶ್ವ ಸಬಲೀಕರಣಕ್ಕಾಗಿ, ಉದ್ಧಾರಕ್ಕಾಗಿ ಅವರ ಕಡೆಗೆ ನೋಡುತ್ತಿದೆ. ಜಗತ್ತಿನ ಎಲ್ಲ ಕಡೆ ಅಂಬೇಡ್ಕರ್‌ ಅಧ್ಯಯನ ಕೇಂದ್ರಗಳು ಇವೆ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ‍್ರಾಧ್ಯಾಪಕ ಡಾ.ಬಿ.ಪಿ.ಮಹೇಶ್‌ಚಂದ್ರ ಗುರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್‌.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಅಂಬೇಡ್ಕರ್‌ ಅವರು ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘ಅಂಬೇಡ್ಕರ್‌ ಅವರು ಭಾರತದ ಸಮಸ್ತ ಶೋಷಣಾ ಪ್ರವೃತ್ತಿಗಳ ವಿರುದ್ಧ ಬಂಡಾಯದ ಸಂಕೇತವಾಗಿದ್ದರು ಎಂದು ನೆಹರೂ ಹೇಳಿದ್ದರು. ಅಂಬೇಡ್ಕರ್ ಅವರು ಎಂದಿಗೂ ರಾಜೀ ಮಾಡಿಕೊಳ್ಳಲಿಲ್ಲ. ಅಧಿಕಾರ ವಂಚಿತರಿಗೆ (ರೈತರು, ಮಹಿಳೆಯರು, ಆದಿವಾಸಿಗಳು, ಅಲ್ಪಸಂಖ್ಯಾತ್ಯರು...) ಅಧಿಕಾರ ಕೊಡಿಸುವುದೇ ಅವರ ಜೀವನದ ಪರಮ ಧ್ಯೇಯವಾಗಿತ್ತು’ ಎಂದು ಹೇಳಿದರು.

ಶೋಷಿತ ಭಾರತೀಯರ ಬಿಡುಗಡೆಯ ಮಹಾದಾರಿ ಅಂಬೇಡ್ಕರ್‌. ಅವರು ಮಹಾನಾಯಕ. ಬಹಳಷ್ಟು ಮಂದಿ ಅರಿವು ಇಲ್ಲದೆ ಅಂಬೇಡ್ಕರ್‌ ಅವರನ್ನು ದಲಿತ ನಾಯಕ ಎಂದು ಬ್ರ್ಯಾಂಡ್‌ ಮಾಡುತ್ತಾರೆ. ಅವರನ್ನು ದಲಿತ ನಾಯಕರು ಎಂದು ಕರೆಯುವವರನ್ನು ಎಲ್ಲರೂ ಧಿಕ್ಕರಿಸಬೇಕು’ ಎಂದರು.

‘ಅಂಬೇಡ್ಕರ್‌ ಅವರು ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ್ದಾರೆ. ಕೃಷಿ, ರೈತರ ಸಮಗ್ರ ಹಿತವನ್ನು ಪ್ರತಿಪಾದಿಸಿದ್ದಾರೆ. ಕಾರ್ಮಿಕರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಹಿಂದುಳಿದವರ್ಗದವರು, ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿದ್ದಾರೆ’ ಎಂದು ವಿವರಿಸಿದರು.

‘ಸಂವಿಧಾನವನ್ನು ಬದಲಾಯಿಸುವುದಕ್ಕೆ ತಾವು ಬಂದಿರುವುದಾಗಿ ಕೆಲವರು ಹೇಳುತ್ತಾರೆ. ಅದು ಸಾಧ್ಯ ಇಲ್ಲ. ರಾಷ್ಟ್ರದ ಹಿತಕ್ಕೆ ತಕ್ಕಂತೆ ಸಂದರ್ಭೋಚಿತವಾಗಿ, ಬದಲಾದ ಕಾಲಸ್ಥಿತಿಗೆ ಅನುಗುಣವಾಗಿ ತಿದ್ದುಪಡಿ ಮಾಡಲು ಅವಕಾಶ ಇದೆ ಅಷ್ಟೆ’ ಎಂದರು.

‘ಬಡತನ ನಿರ್ಮೂಲನೆ ಮಾಡಬೇಕೇ ಹೊರತು, ಬಡವರನ್ನೇ ನಿರ್ಮೂಲನೆ ಮಾಡುವ ಕೆಲಸಕ್ಕೆ ಕೈಹಾಕಬಾರದು. ಎಲ್ಲರೂ ನಮ್ಮವರು ಎಂಬ ಭಾವ ಬೆಳೆಸಿಕೊಂಡಾಗ ಪ್ರಜಾಪ್ರಭುತ್ವ ಅತ್ಯಂತ ಸುಂದರವಾಗಿರುತ್ತದೆ’ ಎಂದು ಹೇಳಿದರು

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ, ಸದಸ್ಯರಾದ ಹಿರಿಗಯ್ಯ, ಜಸಂತಾ, ರವೀಂದ್ರ ಬೆಳವಾಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದ್ರಾಕ್ಷಾಯಿಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಿ, ಸದಸ್ಯರಾದ ಭವ್ಯಾ, ಮಹೇಶ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT