ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಅನಸೂಯಾ ಜಯಂತಿ; ಪಾದುಕೆ ದರ್ಶನ

3 ದಿನ ದತ್ತ ಜಯಂತ್ಯುತ್ಸವ
Last Updated 20 ಡಿಸೆಂಬರ್ 2018, 13:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದತ್ತ ಜಯಂತ್ಯುತ್ಸವದ ಮೊದಲ ದಿನ ಗುರುವಾರ ಅನಸೂಯಾ ಜಯಂತಿ ವಿಧ್ಯುಕ್ತವಾಗಿ ಸಡಗರದಿಂದ ಜರುಗಿತು.

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ನೇತೃತ್ವದಲ್ಲಿ ಅನಸೂಯಾ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಹಿಳೆಯರು, ದತ್ತಭಕ್ತರು ಪಾಲ್ಗೊಂಡಿದ್ದರು. ಬೋಳರಾಮೇಶ್ವರ ದೇಗುಲ ಆವರಣದಿಂದ ಬೆಳಿಗ್ಗೆ 11 ಗಂಟೆಗೆ ಯಾತ್ರೆ ಹೊರಟಿತು.

ಐ.ಜಿ.ರಸ್ತೆ, ರತ್ನಗಿರಿ ರಸ್ತೆ ಮೂಲಕ ಹಾದು ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದ ಬಳಿ ಸಂಪನ್ನಗೊಂಡಿತ್ತು. ಅನಸೂಯಾದೇವಿ, ಅತ್ರಿಮುನಿ, ಗುರುದತ್ತಾತ್ರೇಯ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಒಯ್ಯಲಾಯಿತು. ಯಾತ್ರೆಯುದ್ದಕ್ಕೂ ದತ್ತಾತ್ರೇಯ ನಾಮಸ್ಮರಣೆ ಮೊಳಗಿತು. ನೃತ್ಯ, ಭಜನೆ ಯಾತ್ರೆಗೆ ಮೆರುಗು ನೀಡಿದವು.

ಸಂಕೀರ್ತನಾ ಯಾತ್ರೆ ನಂತರ ಮಹಿಳೆಯರು, ದತ್ತಭಕ್ತರು ವಾಹನಗಳಲ್ಲಿ ಇನಾಂ ದತ್ತ (ಐ.ಡಿ) ಪೀಠಕ್ಕೆ ತೆರಳಿದರು. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿ ಭಕ್ತಿ ಸರ್ಮಪಿಸಿದರು.

ದತ್ತಪೀಠದ ಸಮೀಪದ ಸಭಾಂಗಣದಲ್ಲಿ ಅನಸೂಯಾ ದೇವಿ, ಗಣಪತಿ ಹೋಮ, ದುರ್ಗಾ ಹೋಮ ವಿಧಿಗಳು ನೆರವೇರಿದವು. ಅರ್ಚಕ ರಘುನಾಥ ಅವಧಾನಿ ಕೈಂಕರ್ಯಗಳನ್ನು ನೆರವೇರಿಸಿದರು. ಸಭಾಂಗಣದ ಬಳಿ ಮಹಿಳೆಯರಿಗೆ ಅರಿಶಿಣ, ಕುಂಕುಮ ಮತ್ತು ಬಳೆಗಳನ್ನು ನೀಡಲಾಯಿತು. ಭಕ್ತರಿಗೆ ಪಲಾವ್‌, ಮೊಸರನ್ನ, ಲಾಡು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ, ಮಂಗಳೂರು, ಹಾಸನ, ಉಡುಪಿ ಇತರ ಜಿಲ್ಲೆಗಳಿಂದ ಮಹಿಳೆಯರು ಬಂದಿದ್ದರು. ಭಕ್ತರನ್ನು ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡಿಗುಹೆಯೊಳಗೆ ಪಾದುಕೆ ದರ್ಶನಕ್ಕೆ ಬಿಡಲಾಯಿತು. ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ನ್ಯಾ.ನಾಗಮೋಹನದಾಸ್‌ ಸಮಿತಿ ಶಿಫಾರಸು ತಿರಸ್ಕರಿಸಿ: ಸಿ.ಟಿ.ರವಿ

‘ಶ್ರೀಗುರುದತ್ತಾತ್ರೇಯ ಬಾಬಾಬುಡುನ್‌ ಸ್ವಾಮಿ ದರ್ಗಾಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳನ್ನು ತಿರಸ್ಕರಿಸಬೇಕು’ ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಹೋರಾಟಕ್ಕೆ ಅನ್ಯಾಯ ಮಾಡುವ ಕೆಲಸವನ್ನು ಸಮಿತಿ ಮಾಡಿದೆ. ವಾಸ್ತವ ಸಂಗತಿ ಕಡೆಗಣಿಸಲಾಗಿದೆ. ಏಕಪಕ್ಷೀಯವಾಗಿ ಕಮ್ಯುನಿಸ್ಟ್‌ ನೀತಿಯಂತೆ ಹಿಂದೂ ವಿರೋಧಿ ಶಿಫಾರಸು ಮಾಡಿದ್ದಾರೆ’ ಎಂದು ದೂಷಿಸಿದರು.

‘ದತ್ತಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು. ಅರ್ಚಕರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

‘ವೋಟ್‌ ಬ್ಯಾಂಕ್‌ ಕಾರಣಕ್ಕೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅನ್ಯಾಯ ಮಾಡಿವೆ. ಭಕ್ತಿ ಮೂಲಕ ಶಕ್ತಿ, ಸಾಮರ್ಥ್ಯ ತೋರಿಸುವ ಅಗತ್ಯ ಇದೆ. ಅನ್ಯಾಯದ ಪರಂಪರೆಗೆ ಮುಂದುವರಿಯದಂತೆ ತಡೆಯಲು ಇದು ಶಕ್ತಿಯ ಆಂದೋಲನವಾಗಿ ರೂಪುಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT