ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ: ಭವಿಷ್ಯದ ಚಿಂತೆಯಲ್ಲಿ ಬೆಳೆಗಾರರು

ವ್ಯಾಪಕವಾಗಿ ಹಬ್ಬುತ್ತಿರುವ ಎಲೆಚುಕ್ಕಿ ರೋಗ
Last Updated 20 ಅಕ್ಟೋಬರ್ 2022, 6:35 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ ಹರಡಿದ್ದು ಬೆಳೆಗಾರರು ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ.

2 ವರ್ಷದ ಹಿಂದೆ ತಾಲ್ಲೂಕಿನ ಗಡಿ ಭಾಗದ ಮೈದಾಡಿಯಲ್ಲಿ ಕಾಣಿಸಿಕೊಂಡ ಎಲೆಚುಕ್ಕಿ ರೋಗವು ಕ್ರಮೇಣ ಮರಸಣಿಗೆ, ಸಂಸೆ ಮತ್ತು ಎಳನೀರು ಪ್ರದೇಶದವರೆಗೆ ಹರಡಿತು. ಸಂಸೆ, ಗುತ್ಯಡ್ಕ, ಎಳನೀರಿನ ಕೆಲ ತೋಟಗಳಲ್ಲಿ ರೋಗ ತೀವ್ರವಾಗಿದ್ದು, ಶೇ 20ರಷ್ಟು ಫಸಲೂ ಸಿಗುತ್ತಿಲ್ಲ.

ಕಳಸ ತಾಲ್ಲೂಕಿನಲ್ಲಿ ಅಡಿಕೆ ಕೃಷಿ ಪ್ರಮುಖವಾಗಿದೆ. ಎಲೆಚುಕ್ಕಿ ರೋಗವು ಹಳದಿ ರೋಗಕ್ಕಿಂತ ವೇಗವಾಗಿ, ಎರಡೇ ವರ್ಷದಲ್ಲಿ ತಾಲ್ಲೂಕಿನ ಬಹುತೇಕ ತೋಟಗಳನ್ನು ವ್ಯಾಪಿಸಿದೆ.

ಕೊಲೆಟೋಟ್ರೈಕಮ್ ಎಂಬ ಶಿಲೀಂಧ್ರದ ಕಾರಣಕ್ಕೆ ಈ ರೋಗ ವ್ಯಾಪಿಸುತ್ತಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. 2 ವರ್ಷಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯು ಈ ಶಿಲೀಂಧ್ರದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿದೆ. ಅಡಿಕೆ ಮರಗಳ ಆಸುಪಾಸಿನಲ್ಲಿ ಇರುವ ಕಾಡು ಮರಗಳಲ್ಲಿ ಈ ಶಿಲೀಂಧ್ರ ಆಶ್ರಯ ಪಡೆದು ಮಳೆಗಾಲದಲ್ಲಿ ಅಡಿಕೆ ಮರಗಳಿಗೆ ಹರಡುತ್ತವೆ ಎನ್ನಲಾಗಿದೆ.

ಸತತ ಮಳೆಯಿಂದ ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟಾಶಿಯಂ ಕೊರತೆಯಾಗಿ ಎಲೆಚುಕ್ಕಿ ರೋಗ ಉಲ್ಬಣಿಸಬಹುದು ಎಂಬ ಎಚ್ಚರಿಕೆಯನ್ನೂ ರೈತರಿಗೆ ನೀಡಲಾಗಿದೆ.

‘ಕಳಸದಲ್ಲಿ ಎಷ್ಟೇ ಕಾಫಿ ತೋಟ ಇದ್ದರೂ ಅಡಿಕೆ ತೋಟದ ವರಮಾನದಿಂದಲೇ ಗೌರವಯುತ ಬಾಳ್ವೆ ಸಾಗಿರುತ್ತಿರುವವರೇ ಹೆಚ್ಚು’ ಎನ್ನುತ್ತಾರೆ ಬೆಳೆಗಾರ ಮಾವಿನಹೊಲ ರತ್ನರಾಜ್.

‘ರೋಗ ಮುಂದುವರಿದರೆ ಮಲೆನಾಡಿನ ಆರ್ಥಿಕತೆಯೇ ಬಿದ್ದು ಹೋಗುವ ಅಪಾಯ ಇದೆ’ ಎನ್ನುತ್ತಾರೆ ವ್ಯಾಪಾರಿಗಳು.

‘ಡ್ರೋನ್ ಮೂಲಕವೂ ಅಡಿಕೆಗೆ ಔಷಧಿ ಸಿಂಪಡಣೆ ಮಾಡಿದ್ದೇವೆ’ ಎನ್ನುತ್ತಾರೆ ಬೆಳೆಗಾರ ಕಾರ್ತಿಕ್ ಶಾಸ್ತ್ರಿ

ಔಷಧಿಯ ದುಬಾರಿ ಬೆಲೆ ಮತ್ತು ಕಾರ್ಮಿಕರ ಖರ್ಚಿನ ಕಾರಣ ಬಹುತೇಕ ಬೆಳೆಗಾರರು ಔಷಧಿ ಸಿಂಪಡಣೆಗೆ ಮುಂದಾಗಿಲ್ಲ. ಅಡಿಕೆಯ ಹಳದಿ ಎಲೆ ರೋಗ ಮತ್ತು ಸುಳಿಕೊಳೆ ರೋಗದಷ್ಟು ಎಲೆಚುಕ್ಕಿ ರೋಗ ಮಾರಕ ಅಲ್ಲ ಎಂದೂ ವಿಜ್ಞಾನಿಗಳು ಭರವಸೆ ನೀಡಿದ್ದಾರೆ. ಚೆನ್ನಾಗಿ ಬಿಸಿಲು ಬಿದ್ದರೆ ರೋಗ ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT