ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಮಾ’ ಸ್ಥಿತಿಯಲ್ಲಿ ಅಡಿಕೆ ತೋಟ

ಟ್ಯಾಂಕರ್ ನೀರಿಗೆ ಲಕ್ಷ ಲಕ್ಷ ಕಳೆದುಕೊಂಡ ರೈತರು
Published 9 ಮೇ 2024, 22:59 IST
Last Updated 9 ಮೇ 2024, 22:59 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಲ್ಲಿ ನೋಡಿದರೂ ಕೆಂಬಣ್ಣಕ್ಕೆ ತಿರುಗಿದ ಅಡಿಕೆ ಗಿಡಗಳು, ‘ಕೋಮಾ’ ಸ್ಥಿತಿಗೆ ತಲುಪಿದ ತೋಟಗಳು, ಒಣಗುತ್ತಿರುವ ಬೆಳೆ ಉಳಿಸಲು ಜೀವಜಲ ಹುಡುಕಾಟದಲ್ಲಿ ಬಳಲಿ ಬೆಂಡಾಗಿರುವ ರೈತರು...

ಇದು ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ರೈತರ ಸ್ಥಿತಿ. ಬಿರು ಬಿಸಿಲಿನಿಂದ ಬಳಲಿರುವ ಶಿವನಿ, ಚೀರನಹಳ್ಳಿ, ಹರಳಹಳ್ಳಿ, ತಡಗ, ಗಡೀಹಳ್ಳಿ, ಮುಗುಳಿ, ದಂದೂರು, ನಾರಾಯಣಪುರ ಸೇರಿ ಹಲವು ಹಳ್ಳಿಗಳಲ್ಲಿ ಮೌನ ಆವರಿಸಿದೆ. ಯಾವ ರೈತರ ಮುಖದಲ್ಲೂ ಕಳೆ ಇಲ್ಲ. ಬಾಡಿದ ಮುಖದೊಂದಿಗೆ ತಲೆಯ ಮೇಲೆ ಟವೆಲ್ ಸುತ್ತಿಕೊಂಡು ಎದುರಾಗುವ ಯಾವ ರೈತರನ್ನು ಮಾತಿಗೆ ಎಳೆದರೂ ಮುಗಿಲಿನತ್ತ ಮುಖ ಮಾಡುತ್ತಾರೆ. ಎಲ್ಲರ ಮುಖದಲ್ಲೂ ಸಂಕಟದ ಛಾಯೆ ಎದ್ದು ಕಾಣುತ್ತದೆ. 

ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಮೂರ್ನಾಲ್ಕು ತಿಂಗಳುಗಳೇ ಆಗಿವೆ. ನಾಲ್ಕೈದು ಕೊಳವೆ ಬಾವಿಗಳನ್ನು ಕೊರೆದು ಕೈಸುಟ್ಟುಕೊಂಡಿರುವ ರೈತರು ಬೇರೆ ದಾರಿ ಇಲ್ಲದೆ ಕೈಚೆಲ್ಲಿದ್ದಾರೆ. ಕೆಲವರು ಕೊನೆಯ ಪ್ರಯತ್ನವಾಗಿ ದೂರದ ಊರುಗಳಿಂದ ಟ್ಯಾಂಕರ್ ಮೂಲಕ ತಂದು ಅಡಿಕೆ ಗಿಡಗಳ ಬುಡಕ್ಕೆ ನೀರು ಕೊಡುತ್ತಿದ್ದಾರೆ. 

ಸುತ್ತಮುತ್ತ ಇದ್ದ ಎಲ್ಲಾ ಕೆರೆಗಳು ಖಾಲಿಯಾಗಿವೆ. ಐತಿಹಾಸಿಕ  ಬುಕ್ಕಾಂಬುಧಿ ಕೆರೆ ಕೂಡ ತಳ ಸೇರಿದೆ. ನೀರು ಲಭ್ಯ ಇರುವ ಕೊಳವೆ ಬಾವಿಗಳನ್ನು ಹುಡುಕುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಬುಕ್ಕಾಂಬುಧಿ ಬಳಿ ಒಂದೆರಡು ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿದ್ದು, ಟ್ಯಾಂಕರ್‌ ಲಾರಿ ಮತ್ತು ಟ್ರ್ಯಾಕ್ಟರ್‌ಗಳು ಈ ಕೊಳವೆ ಬಾವಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.

ಕೊಳವೆ ಬಾವಿ ಮಾಲೀಕರಿಗೆ, ಟ್ರ್ಯಾಕ್ಟರ್ ಬಾಡಿಗೆ ಸೇರಿ ಒಂದು ಟ್ಯಾಂಕರ್ ನೀರು ತಂದು ಜಮೀನಿಗೆ ಹರಿಸಲು ಕನಿಷ್ಠ ₹1500 ವೆಚ್ಚವಾಗುತ್ತಿದೆ. ಟ್ಯಾಂಕರ್‌ಗಳಲ್ಲಿ ನೀರು ತಂದು ತೋಟಗಳಿಗೆ ಹರಿಸಲು ರೈತರು ಲಕ್ಷಗಟ್ಟಲೆ ಖರ್ಚು ಮಾಡಿದ್ದಾರೆ. ₹6 ಲಕ್ಷ ತನಕ ಖರ್ಚು ಮಾಡಿರುವ ರೈತರು ಇಲ್ಲಿ ಸಿಗುತ್ತಾರೆ. 

ಮಳೆರಾಯ ಇನ್ನೊಂದು ವಾರ ಕೈಕೊಟ್ಟರೆ ಈಗ ಲಭ್ಯ ಇರುವ ಕೊಳವೆ ಬಾವಿಗಳು ಬತ್ತುವ ಸಾಧ್ಯತೆ ಇದೆ ಎಂದು ಗಡೀಹಳ್ಳಿಯ ಮಂಜುನಾಥ್ ಆತಂಕ ವ್ಯಕ್ತಪಡಿಸುತ್ತಾರೆ.

ಅಡಿಕೆ ತೋಟಕ್ಕೆ ನೀರು ಪೂರೈಸಲು ಬುಕ್ಕಾಂಬುಧಿ ಬಳಿ ಸಾಲುಗಟ್ಟಿ ನಿಂತಿರುವ ಟ್ಯಾಂಕರ್‌ಗಳು
ಅಡಿಕೆ ತೋಟಕ್ಕೆ ನೀರು ಪೂರೈಸಲು ಬುಕ್ಕಾಂಬುಧಿ ಬಳಿ ಸಾಲುಗಟ್ಟಿ ನಿಂತಿರುವ ಟ್ಯಾಂಕರ್‌ಗಳು

ಟ್ಯಾಂಕರ್ ನೀರಿನಲ್ಲಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಗಿಡಗಳಲ್ಲಿ ಈ ವರ್ಷ ಫಸಲು ನಿರೀಕ್ಷೆ ಮಾಡುವಂತಿಲ್ಲ. ಇನ್ನೊಂದು ವಾರ ಮಳೆ ಬಾರದಿದ್ದರೆ ತೋಟಗಳು ಒಣಗುವುದು ಖಚಿತ

-ಶಂಕರ್ ಹರಳಹಳ್ಳಿ ರೈತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT