ಗುರುವಾರ , ಏಪ್ರಿಲ್ 22, 2021
30 °C
ಚಿಕ್ಕಮಗಳೂರಿನಲ್ಲಿ ಆಯೋಜಿಸಿರುವ ಮದ್ಯವರ್ಜನೆ ಶಿಬಿರದಲ್ಲಿ ಕಣ್ಣನ್ ಸಲಹೆ

‘ವ್ಯಸನ ತ್ಯಜಿಸಿ,ಆರೋಗ್ಯಪೂರ್ಣ ಬದುಕು ಸಾಗಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಮದ್ಯವ್ಯಸನಿಗಳು ವ್ಯಸನ ಮುಕ್ತರಾಗಿ ಗೌರವಯುತ ಜೀವನ ನಡೆಸಬೇಕು. ತಪ್ಪು ತಿದ್ದಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸಹಯೋಗದಲ್ಲಿ ನಗರ ಹೊರವಲಯದ ಹಿರೇಮಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮದ್ಯವ್ಯಸನದಿಂದ ಜೀವನ ಹಾಳಾಗುತ್ತದೆ. ಸಮಾಜದಲ್ಲಿ ಗೌರವ ಕುಂದುತ್ತದೆ. ಕೌಟುಂಬಿಕ ಕಲಹಗಳು ಆರಂಭವಾಗುತ್ತವೆ. ಆರೋಗ್ಯ ಹದಗೆಡುತ್ತದೆ. ಸಾವು ಸಮೀಪಿಸುತ್ತದೆ. ಮದ್ಯವ್ಯಸನಿಗಳು ಅದನ್ನು ಅರ್ಥ ಮಾಡಿಕೊಳ್ಳಬೇಕು. ಮದ್ಯಪಾನ ತ್ಯಜಿಸಿ, ವಿಶ್ವಾಸದಿಂದ ಬದುಕಬೇಕು ಎಂದರು.

‘ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಅವೆರೆಡರ ನಡುವಿನ ಬದುಕು ನಮ್ಮದು. ಮದ್ಯವ್ಯಸನಿಗಳಾಗಿ ಜೀವನ ಸಾಯಿಸಬಾರದು. ಮದ್ಯಪಾನ ಮಾಡಿ ಬೀದಿಯಲ್ಲಿ ಬೀಳುವುದಕ್ಕಿಂತ, ಮದ್ಯಪಾನ ತ್ಯಜಿಸಿ ಹೆಂಡತಿ ಮಕ್ಕಳೊಂದಿಗೆ ಮಲಗಬೇಕು. ಎದೆಯೊಳಗಿನ ನಂಜುನಾಥನ ದೂರ ಮಾಡಬೇಕು. ಭಕ್ತಿಯಿಂದ ಮಂಜುನಾಥನ ನೆನೆಯಬೇಕು. ಸಂಸ್ಕಾರವಂತರಾಗಿ ಬಾಳ್ವೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಧರ್ಮಸ್ಥಳ ಗ್ರಾಮೀಣ ಯೋಜನೆ ತಾಲ್ಲೂಕು ಅಧಿಕಾರಿ ಸುನೀತಾಪ್ರಭು ಮಾತನಾಡಿ, ತಾಲ್ಲೂಕಿನಲ್ಲಿ ಸಂಸ್ಥೆ ವತಿಯಿಂದ ಈ ವರೆಗೆ 12 ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. 960 ಶಿಬಿರಾರ್ಥಿಗಳು ನವ ಜೀವನ ನಡೆಸುತ್ತಿದ್ದಾರೆ. ಮದ್ಯವ್ಯಸನಿಗಳ ಕುಟುಂಬದವರ ಬೇಡಿಕೆ ಮೇರೆಗೆ 13 ನೇ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ ಎಂದರು.

ಹದಿಹರಯದ ವಯಸ್ಸಿನಲ್ಲಿ ಮಕ್ಕಳಿಗೆ ಆಲೋಚನನಾ ಶಕ್ತಿ ಕಡಿಮೆ ಇರುತ್ತದೆ. ಅದರಿಂದ ದುಶ್ಚಟಗಳಿಗೆ ಬೇಗ ಬಲಿಯಾಗುತ್ತಾರೆ. ಅದು ಜೀವನ ಪರ್ಯಂತ ಮುಂದುವರೆಯುತ್ತದೆ. ಯುವಪೀಳಿಗೆ ಎಚ್ಚೆತ್ತುಕೊಳ್ಳಬೇಕು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ತೇಗೂರು ಜಗದೀಶ್, ಶಿಬಿರದ ವ್ಯವಸ್ಥಾಪಕ ಹಸನ್‌ಭಾವ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಜನಜಾಗೃತಿ ವೇದಿಕೆ ಸದಸ್ಯರಾದ ಕೋಟೆ ಮಲ್ಲೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು