ಶನಿವಾರ, ಜನವರಿ 28, 2023
15 °C
ಶೈಕ್ಷಣಿಕ ಸಮಾವೇಶ, ಆಭಿನಂದನಾ ಸಮಾರಂಭ

‘ಒಪಿಎಸ್‌ ಮರುಜಾರಿಗೆ ಸದನದಲ್ಲಿ ಪ್ರಸ್ತಾಪಿಸುವೆ’: ಆಯನೂರು ಮಂಜುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ನೂತನ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ರದ್ದಾಗಬೇಕು. ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಮತ್ತೆ ಜಾರಿಗೆ ತರಬೇಕು ಎಂದು ನಾವು ಶಿಕ್ಷಕರ ಪರವಾಗಿ ನಿಲ್ಲುತ್ತೇವೆ’ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದ ಅಂಪಿ ಥಿಯೇಟರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ, ಆಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಶಾಸಕರಿಗೆ, ಸಂಸದರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಇದೆ. ಸರ್ಕಾರಿ ನೌಕರರಿಗೂ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮರುಜಾರಿಗೊಳಿಸಬೇಕು ಎಂದು ಸದನದಲ್ಲಿ ಧ್ವನಿ ಎತ್ತುತ್ತೇವೆ. ಪಕ್ಷಾತೀತವಾಗಿ ಸರ್ಕಾರಕ್ಕೆ ಒತ್ತಡ ಹೇರುತ್ತೇವೆ’ ಎಂದು ತಿಳಿಸಿದರು.

ಶಿಕ್ಷಕರಿಗೆ ಬಡ್ತಿ ನಿಟ್ಟಿನಲ್ಲಿ ಪರೀಕ್ಷೆ ಚೌಕಟ್ಟು ನಿಗದಿಪಡಿಸಿರುವುದು ಸರಿಯಲ್ಲ. ಇದೆಲ್ಲ ಐಎಎಸ್‌, ಕೆಎಎಸ್‌ ಅಧಿಕಾರಿಗಳು ರೂಪಿಸಿರುವ ಚೌಕಟ್ಟುಗಳು. ಈ ಚೌಕಟ್ಟಿನಿಂದ ಹೊರತಂದು ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡಬೇಕು’ ಎಂದು ಒತ್ತಾಯಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳು ಇವೆ. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಂತಗಳಲ್ಲಿ ಭಿನ್ನ ಸಮಸ್ಯೆಗಳು ಇವೆ. ಶಿಕ್ಷಣ ಕ್ಷೇತ್ರ ಅಗಾಧ ಸಮಸ್ಯೆಗಳ ಬೆಟ್ಟ ಎಂದರು.

ಅಂತರ್ಗತ ಪ್ರತಿಭೆ ಬಡಿದೆಬ್ಬಿಸುವ ಸಾಧನ ಶಿಕ್ಷಣ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹೊಸ ಪ್ರಯೋಗ ಶುರುವಾಗಿದೆ. ಹೊಸ ಪದ್ಧತಿ ಜಾರಿಗೊಳಿಸಿದಾಗ ಸಣ್ಣಪುಟ್ಟ ಸಮಸ್ಯೆಗಳು ಇರುತ್ತವೆ. ಹಂತಹಂತವಾಗಿ ಎಲ್ಲ ಸರಿಹೋಗುತ್ತವೆ. ಎನ್‌ಇಪಿಗೆ ಹೊಂದಿಕೊಳ್ಳುವುದು ಅನಿವಾರ್ಯ. ಮೇಷ್ಟ್ರುಗಳು ಅಪ್ಡೇಟ್‌ ಆಗಬೇಕು ಎಂದು ಸಲಹೆ ನೀಡಿದರು.

ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ, ಕಾಯಂ ಶಿಕ್ಷಕರಿಗೆ ಜಾಸ್ತಿ ಸಂಬಳ ನೀಡುವ ತಾರತಮ್ಯ ಸರಿಯಲ್ಲ. ಎಲ್ಲ ಶಿಕ್ಷಕರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟುನೋಡಬೇಕು ಎಂದು ಹೇಳಿದರು.

ಶಿಕ್ಷಕರಿಗೆ ಎಲ್ಲ ಸವಲತ್ತುಗಳು ಸಿಗಬೇಕು. ಅನ್ಯಕೆಲಸಗಳಿಗೆ (ಸೈಕಲ್‌ ತರುವುದು, ಬಿಸಿಯೂಟ...) ಶಿಕ್ಷಕರನ್ನು ಬಳಸಿಕೊಳ್ಳಬಾರದು. ಸ್ವಾಭಿಮಾನ, ಆತ್ಮಗೌರವ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಹೋರಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ದಬಸಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಎಐಟಿ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್‌, ಡಿಡಿಪಿಐ ಜಿ.ರಂಗನಾಥಸ್ವಾಮಿ, ಡಯಟ್‌ ಉಪನಿರ್ದೇಶಕ ಅಂತೋಣಿ ರಾಜ್‌, ಬಿಇಒ ಎಸ್‌.ಆರ್‌.ಮಂಜುನಾಥ್‌, ರಾಜಕುಮಾರ್‌, ಆರ್‌. ಹೇಮಂತ್‌ರಾಜ್‌, ಸಂಘದ ಜಿಲ್ಲಾಧ್ಯಕ್ಷ ಕೆ.ಆರ್‌.ಪ್ರಭಾಕರ್‌, ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು