ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಟ್ಟಗೆರೆ | ಹದಗೆಟ್ಟ ರಸ್ತೆ; ವಾಹನ ಸವಾರರ ಪರದಾಟ

ಬೆಟ್ಟಗೆರೆ ಗ್ರಾಮದ ಕೆರೆಮನೆ ರಸ್ತೆಯಲ್ಲಿ ಹೊಂಡ–ಗುಂಡಿ
Published : 7 ಆಗಸ್ಟ್ 2024, 6:24 IST
Last Updated : 7 ಆಗಸ್ಟ್ 2024, 6:24 IST
ಫಾಲೋ ಮಾಡಿ
Comments

ಶೃಂಗೇರಿ: ಕೂತುಗೋಡು ಗ್ರಾಮ ಪಂಚಾಯಿತಿಯ ಬೆಟ್ಟಗೆರೆಯಿಂದ ಕೊಲ್ಲಿ, ಕೆರೆಮನೆ, ತನಿಕೋಡು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.

ಜಲಜೀವನ್ ಮಿಷನ್ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಇನ್ನಷ್ಟು ಹದಗೆಟ್ಟು, ಸರಿಯಾದ ನಿರ್ವಹಣೆಯಿಲ್ಲದೆ ಮಳೆಗಾಲದಲ್ಲಿ ಗುಂಡಿ-ಹೊಂಡಗಳು ಉಂಟಾಗುತ್ತಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಮಳೆಗಾಲದಲ್ಲಿ ಜಂಗಲ್ ಕಟ್ಟಿಂಗ್ ಮಾಡದೆ, ರಸ್ತೆ ಬದಿಯ ಮರದ ರೆಂಬೆಗಳು ರಸ್ತೆಗೆ ಬೀಳುತ್ತಿವೆ. ಜಲ್ಲಿ ಮತ್ತು ಮಣ್ಣು ಹಾಕಿದ ಈ ರಸ್ತೆಯಲ್ಲಿ ನೀರು ಹರಿದು ಮಣ್ಣು ಕೊಚ್ಚಿಕೊಂಡು ಹೋಗಿದೆ. ಚರಂಡಿ ಇಲ್ಲದಿರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಕೆರೆಮನೆ ಕೊಲ್ಲಿ, ತನಿಕೋಡು, ಸಿಡ್ಲುಮನೆಯಲ್ಲಿ ವಾಸಿಸುವ ಜನರು ಪಟ್ಟಣಕ್ಕೆ ಬರಲು ಹರಸಾಹಸ ಪಡಬೇಕು. ಬಾಡಿಗೆ ವಾಹನಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಮಳೆ ಬಂದ ಸಂದರ್ಭ ತುರ್ತು ಬಾಡಿಗೆಗೆ ಎಂದು ಪಟ್ಟಣಕ್ಕೆ ಬರುವಾಗ ಮೈಯೆಲ್ಲಾ ಕಣ್ಣಾಗಿ ವಾಹನ ಚಲಾಯಿಸಬೇಕು ಎನ್ನುತ್ತಾರೆ ಆಟೊ ಚಾಲಕ ಮಂಜುನಾಥ್.

ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಗಮನ ನೀಡಿ, ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಲಿ ಎಂದು ಗ್ರಾಮಸ್ಥರಾದ ರಮೇಶ್ ಹೆಗ್ಡೆ, ಚಂದ್ರಶೇಖರ್, ವಾಸು, ಮಂಜುನಾಥ್, ರಮೇಶ್, ಸಂತೋಷ್ ಹೆಗ್ಡೆ, ಅನಿಲ್, ಅಭಿಜಿತ್, ಸುರೇಶ ಒತ್ತಾಯಿಸಿದ್ದಾರೆ.

ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವೇದಿಕೆಯ ಮೇಲೆ ಭಾಷಣ ಮಾಡುವರು ಗ್ರಾಮೀಣ ರಸ್ತೆಯಲ್ಲಿ ತಮ್ಮ ವಾಹನಗಳಲ್ಲಿ ಬಂದು ಒಮ್ಮೆ ಸಂಚರಿಸಿ ನೋಡಲಿ ಎಂಬುದು ಕೊಲ್ಲಿ, ಕೆರೆಮನೆ, ತನಿಕೋಡಿನ ಮಹಿಳೆಯರ ಆಗ್ರಹ.

‘ಅಭಿವೃದ್ಧಿಗೆ ಗಮನ ನೀಡಿ’

ಗ್ರಾಮಗಳ ಉದ್ಧಾರ ದಿಂದ ಮಾತ್ರ ದೇಶ ಉದ್ಧಾರವಾ ಗುತ್ತದೆ ಎಂದು ಹೇಳುವ ನಾಯಕರು ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು. ಜನರ ಸಮಸ್ಯೆ ಅರ್ಥೈಸಿಕೊಂಡು ಪಕ್ಷ ಭೇದ ಮರೆತು ಕಾರ್ಯನಿರ್ವಹಿಸಬೇಕು. ಉತ್ತಮ ಕಾರ್ಯ ಮಾಡಿದರೆ ಮಾತ್ರ ಜನ ಮಾನಸದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ತನಿಕೋಡಿನ ಕೃಷಿಕ ಕೃಷ್ಣ ಭಟ್ ಬೇಸರ ವ್ಯಕ್ತಪಡಿಸಿದರು.

6 ವರ್ಷದಿಂದ ಹಲವು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇನ್ನೂ ಕೆಲವು ಬಾಕಿ ಇವೆ. ಈ ಬಾರಿ 270 ಸೆಂ.ಮೀ ಮಳೆಯಾಗಿದ್ದು, ರಸ್ತೆಗಳು ಹಾಳಾಗಿವೆ. ಮಳೆಗಾಲದ ನಂತರ ರಸ್ತೆ ಅಭಿವೃದ್ಧಿಪಡಿಸುತ್ತೇವೆ.
ಟಿ.ಡಿ.ರಾಜೇಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT