ಶನಿವಾರ, ಆಗಸ್ಟ್ 20, 2022
21 °C
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್, ಪರಿಸರ ಸೂಕ್ಷ್ಮ ವಲಯ ಕುರಿತ ಸಭೆ

ಸಾಧಕ ,ಬಾಧಕಗಳನ್ನು ಪರಿಶೀಲಿಸಿ ಜನರ ಬದುಕು ಉಳಿಸುವ ಪ್ರಯತ್ನ: ಸಿ.ಟಿ.ರವಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ‘ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್, ಪರಿಸರ ಸೂಕ್ಷ್ಮ ವಲಯದ ವಿಚಾರಗಳಲ್ಲಿನ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಯೋಜನೆಯ ವ್ಯಾಪ್ತಿಯ ಜನರ ಬದುಕು ಉಳಿಸುವ ಪ್ರಯತ್ನ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಭರವಸೆ ನೀಡಿದರು.

ಇಲ್ಲಿನ ಗುರುಭವನದಲ್ಲಿ ಸೋಮವಾರ ನಡೆದ ಭದ್ರಾಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ಘೋಷಣೆಯಾಗಿರುವ ಬಗ್ಗೆ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯ ಎಂದು ಕರಡು ಅಧಿಸೂಚನೆ ಹೊರಡಿಸಿರುವ ಬಗ್ಗೆ ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘2011ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಪ್ರಸ್ತಾವ ಸಲ್ಲಿಸಲು, ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಆದೇಶವೇ ಕಾರಣವಾಗಿದೆ. ಪ್ರಸ್ತುತ ಇದರ ಬಗ್ಗೆ ಚರ್ಚಿಸಲು ಸುಪ್ರೀಂ ಕೋರ್ಟ್ ಆದೇಶವೇ ಕಾರಣವಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಚಳವಳಿಯನ್ನು ಕಟ್ಟಿ, ಚಳವಳಿಗಳ ಮೂಲಕವೇ ಜನರ ನಡುವೆಯೇ ಇದ್ದು, ಶಾಸಕರಾಗಿ ಆಯ್ಕೆಯಾಗಿರುವುದರಿಂದ ಜನರ ಬದುಕು ಉಳಿಸುವ ಬದ್ಧತೆಯಿದೆ. ಜನರ ಭಯ ನಿವಾರಿಸಲು ಮುಖಾಮುಖಿಯಾಗಿ ಸಭೆಯ ಆಯೋಜಿಸಲಾಗಿದೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಪರಿಸರ ಸೂಕ್ಷ್ಮ ವಲಯ ಮತ್ತು ಬಫರ್ ಜೋನ್‌ಗೆ ಸಂಬಂಧಿಸಿದ 2011 ಫೆಬ್ರುವರಿ 9ರ ಅಧಿಸೂಚನೆಯಂತೆ ಪರಿಸರ ಸೂಕ್ಷ್ಮ ವಲಯದ ಗರಿಷ್ಠ 10 ಕಿ.ಮೀ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಗ್ರಾಮದ ಜನರನ್ನು ಕತ್ತಲೆಯಲ್ಲಿಟ್ಟು ಈ ಅಧಿಸೂಚನೆ ಹೊರಡಿಸಲಾಗಿದೆ. 2020ರಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ಸಾಧಕ, ಬಾಧಕ ಪರಿಶೀಲಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು. ಭದ್ರಾ ಹೊಳೆಯಿಂದ ಆಚೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸುವಂತೆ ಮರು ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ‘ಅರಣ್ಯ ಇಲಾಖೆಯವರು ಪ್ರಾಣಿಗಳಿಗೆ ನೀಡುತ್ತಿರುವ ಆದ್ಯತೆ ಮಾನವನಿಗೆ ನೀಡುತ್ತಿಲ್ಲ. ಜನರ ಬದುಕು ಉಳಿಸುವ ನಿಟ್ಟಿನಲ್ಲಿ ರಾಜಕೀಯ ಬಿಟ್ಟು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು’ ಎಂದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್ ಮಾಹಿತಿ ನೀಡಿ, ‘ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಪ್ರದೇಶಕ್ಕೆ ಸಂಬಂಧಿಸಿದಂತೆ 2011ರಲ್ಲಿ ಸೇರ್ಪಡೆಗೊಂಡ ಗ್ರಾಮಗಳನ್ನು ಬಿಟ್ಟು ಬೇರೆ ಯಾವುದೇ ಗ್ರಾಮಗಳನ್ನು ಹೊಸದಾಗಿ ಯೋಜನೆಯಲ್ಲಿ ಸೇರಿಸಿಲ್ಲ. ಬಫರ್ ಜೋನ್ ಪ್ರದೇಶದ ನಿರ್ವಹಣೆ ಮಾಡಲು ಆಡಳಿತಾತ್ಮಕ ಉದ್ದೇಶದಿಂದ ಕೂಸ್ಗಲ್ ಮತ್ತು ಕೊಳಲೆ ಅರಣ್ಯ ವಲಯ ಆರಂಭಿಸಲಾಗುತ್ತಿದೆ. ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಂಜು, ಭದ್ರಾ ವನ್ಯ ಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಾಣಾವತ್, ಎಸಿಎಫ್ ಚಂಗಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು