ಚಿಕ್ಕಮಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಖಂಡನೆ; ಬಂದ್‌ ಶಾಂತಿಯುತ

7

 ಚಿಕ್ಕಮಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಖಂಡನೆ; ಬಂದ್‌ ಶಾಂತಿಯುತ

Published:
Updated:
Deccan Herald

 ಚಿಕ್ಕಮಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಖಂಡಿಸಿ ಕಾಂಗ್ರೆಸ್‌, ವಿರೋಧ ಪಕ್ಷಗಳು ಕರೆ ನೀಡಿದ್ದ ಭಾರತ್‌ ಬಂದ್‌ ಶಾಂತಿಯುತವಾಗಿ ನಡೆಯಿತು. ಪ್ರತಿಭಟನಾಕಾರರು ನಗರದ ಹನುಮಂತಪ್ಪ ವೃತ್ತದಲ್ಲಿ ಪಕೋಡ ಮಾಡಿ ಜನರಿಗೆ ಹಂಚಿ, ಚಹಾ ವಿತರಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಐ.ಜಿ ರಸ್ತೆ, ಎಂ.ಜಿ ರಸ್ತೆ, ಮಾರುಕಟ್ಟೆ ರಸ್ತೆ, ಇತರ ಪ್ರಮುಖ ರಸ್ತೆಗಳಲ್ಲಿ ಬಹುತೇಕ ಅಂಗಡಿ, ಮಳಿಗೆಗಳು ಸಂಜೆವರೆಗೂ ಮುಚ್ಚಿದ್ದವು. ಪ್ರತಿಭಟನಾಕಾರರು ಬೈಕುಗಳಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ, ಮಳಿಗೆಗಳನ್ನು ತೆರೆಯದಂತೆ ತಾಕೀತು ಮಾಡಿದರು. ಸಂಜೆವರೆಗೂ ವಾಹನಗಳ ಸಂಚಾರವೂ ಕಡಿಮೆ ಇತ್ತು. ಅಂಚೆಕಚೇರಿ, ಬ್ಯಾಂಕು, ಇತರ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸಲಿಲ್ಲ. ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದವು.

ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ, ಬಿಎಸ್‌ಪಿ, ಕನ್ನಡ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಮೊಳಗಿಸಿದರು. ಪ್ರತಿಭಟನಾಕಾರು ಒಲೆ ಹಚ್ಚಿ ಪಕೋಡ ತಯಾರಿಸಿದರು. ಪಕೋಡ ಮತ್ತು ಚಹಾವನ್ನು ವೃತ್ತದಲ್ಲಿದ್ದವರಿಗೆ ಹಂಚಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಎರಡು ಗಂಟೆ ಪ್ರತಿಭಟನೆ ಮಾಡಿದರು.

‘ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಮೋದಿ ಅವರು ಈಡೇರಿಸಿಲ್ಲ. ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಮಾಡಿ ಎಲ್ಲರಿಗೂ ತೊಂದರೆ ಮಾಡಿದ್ದಾರೆ. ಬೆಲೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌ ಒತ್ತಾಯಿಸಿದರು.

‘ದರ ಏರಿಕೆ ಮೂಲಕ ಮೋದಿ ಅವರು ಜನರಿಗೆ ಬರೆ ಎಳೆದಿದ್ದಾರೆ. ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ, ಇತರ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಮೋದಿ ಅವರ ಬಗೆಗಿನ ಜನರ ನಿರೀಕ್ಷೆಗಳು ಹುಸಿಯಾಗಿವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಚ್‌.ಎಚ್‌.ದೇವರಾಜ್‌ ಟೀಕಿಸಿದರು.

‘ಕೇಂದ್ರ ಸರ್ಕಾರಕ್ಕ ಜನಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸುವ ಮೂಲಕ ಜನರನ್ನು ಲೂಟಿ ಮಾಡುತ್ತಿದ್ದಾರೆ’ ಎಂದು ಸಿಪಿಐ ಕಾರ್ಯದರ್ಶಿ ಎಚ್‌.ಎಂ.ರೇಣುಕಾರಾಧ್ಯ ಆಪಾದಿಸಿದರು.

‘ರಫೆಲ್‌ ಯುದ್ಧ ವಿಮಾನ ಖರೀದಿ ಪ್ರಕರಣವನ್ನು ಜಂಟಿ ಪಾರ್ಲಿಮೆಂಟರಿ ಸಮಿತಿಗೆ ಒಪ್ಪಿಸಬೇಕು. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು. ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಬಿಸಿಯು ಎಲ್ಲ ವಾಣಿಜ್ಯ ವಹವಾಟಿಗೂ ತಟ್ಟಿದೆ. ಕೇಂದ್ರ ಸರ್ಕಾರವು ಆರ್ಥಿಕ ಶಿಸ್ತನ್ನು ಉಲ್ಲಂಘಿಸಿದೆ’ ಎಂದು ಸಿಪಿಐ ಮುಖಂಡ ಬಿ.ಅಮ್ಜದ್‌ ಆರೋಪಿಸಿದರು.

‘ಬೆಲೆ ಏರಿಕೆ ಬಿಸಿ ಎಲ್ಲರಿಗೂ ತಟ್ಟಿದೆ. ಸಾಗಾಣಿಕೆ ವೆಚ್ಚಗಳು ಹೆಚ್ಚಾಗುತ್ತವೆ. ಜನಸಾಮಾನ್ಯರು ಪರಿತಪಿಸುವಂತಾಗಿದೆ. ಮೋದಿ ಅವರು ಹೇಳಿದ್ದ ಅಚ್ಚೆ ದಿನ್‌ ಬರಲೇ ಇಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಟೀಕಿಸಿದರು.

‘ಪದೇ ಪದೇ ತೈಲ ಬೆಲೆ ಏರಿಕೆ ಮಾಡಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತಿದ್ದಾರೆ’ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ಸಂಜೆವರೆಗೆ ಬಸ್‌ ಸಂಚಾರ ಸ್ಥಗಿತ: ಬೆಳಿಗ್ಗೆಯಿಂದ ಸಂಜೆ 4 ಗಂಟೆವರೆಗೂ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಕೆಎಸ್‌ಆರ್‌ಟಿಸಿ ನಿಲ್ದಾಣದ ಪ್ಲಾಟ್‌ಫಾರಂಗಳು ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಮಲ್ಲಂದೂರು ರಸ್ತೆಯಲ್ಲಿರುವ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್ಸುಗಳು ನಿಂತಿದ್ದವು. ಬಸ್ಸುಗಳಲ್ಲಿ ಮಾರ್ಗದಲ್ಲಿ ಸಂಚರಿಸಲಿಲ್ಲ.

ಬಂದ್‌ ಮಾಹಿತಿ ಇಲ್ಲದೆ ಕೆಲವರು ತೊಂದರೆ ಅನುಭವಿಸಿದರು. ಊರಿಗೆ ತೆರಳಲು ಬಂದಿದ್ದ ಕೆಲವರು ಬಸ್ಸುಗಳಿಲ್ಲದೇ ಸಂಜೆವರೆಗೂ ನಿಲ್ದಾಣದಲ್ಲಿಯೇ ಕಾದರು. ಮತ್ತೆ ಕೆಲವರು ಮನೆಗಳಿಗೆ ವಾಪಸಾದರು.

ರೈತ ಮುಖಂಡ ಚಂದ್ರೇಗೌಡ ಅವರು ಸೈಕಲ್‌ನಲ್ಲಿ ಬಂದ ಗಮನ ಸೆಳೆದರು. ಬೆಲೆ ಏರಿಕೆ ವಿರುದ್ಧ ಫಲಕಗಳನ್ನು ಸೈಕಲ್‌ನಲ್ಲಿ? ಅಳವಡಿಸಿಕೊಂಡು ವೃತ್ತದಲ್ಲಿ ಸಂಚರಿಸಿದರು.

ಕನ್ನಡ ಸಂಘಟನೆಗಳ ಕೆಲ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಜೀಪೊಂದರ ಟೈರಿನ ಗಾಳಿ ತೆಗೆದಿದ್ದು ವಾಹನದ ಚಾಲಕನನ್ನು ಕೆರಳಿಸಿತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದೆ ಆಟೊರಿಕ್ಷಾವೊಂದರ ಟೈರಿನ ಗಾಳಿ ತೆಗೆದರು. ಪ್ರತಿಭಟನಾಕಾರರು ಬ್ಯಾಂಕುಗಳು, ಕಚೇರಿಗಳ ಬಾಗಿಲುಗಳನ್ನು ಮುಚ್ಚಿಸಿದರು. ರಸ್ತೆಗಳಲ್ಲಿ ಆಟೊ ರಿಕ್ಷಾ ಮತ್ತು ಲಾರಿಗಳ ಸಂಚಾರವೂ ತೀರಾ ಕಡಿಮೆ ಇತ್ತು. ಬಹುತೇಕರು ಬಂದ್‌ ಬೆಂಬಲಿಸಿ ಆಟೊ ರಿಕ್ಷಾ, ಲಾರಿಗಳನ್ನು ರಸ್ತೆಗಳಿಸಲಿಲ್ಲ.

ದ್ವಿಚಕ್ರವಾಹನ, ಕಾರು, ಜೀಪು ಮುಂತಾದ ವಾಹನಗಳ ಸಂಚಾರ ಎಂದಿನಂತೆ ಇತ್ತು. ಆಸ್ಪತ್ರೆಗಳು, ಔಷಧ ಅಂಗಡಿಗಳು ಕಾರ್ಯನಿರ್ವಹಿಸಿದವು. ಮುಂಜಾಗ್ರತೆಯಾಗಿ ಶಾಲೆ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಬಿಗಿ ಬಂದೋಬಸ್ತ್‌: ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿ, ಹನುಮಂತಪ್ಪ ವೃತ್ತ, ಆಜಾದ್‌‍ಪಾರ್ಕ್‌ ವೃತ್ತಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿತ್ತು.

ಸಂಜೆ 4 ಗಂಟೆ ನಂತರ ಕೆಎಸ್‌ಆರ್‌ಟಿಸಿ ಬಸ್ಸುಗಳು, ಖಾಸಗಿ ಬಸ್ಸುಗಳು ವಾಹನ, ಆಟೋಗಳ ಸಂಚಾರ ಆರಂಭವಾಯಿತು. ಅಂಗಡಿ, ಹೋಟೆಲ್‌, ಮಳಿಗೆಗಳು ತೆರೆದವು.

ಕಾಂಗ್ರೆಸ್‌ ಮುಖಂಡರಾದ ಎಂ.ಎಲ್.ಮೂರ್ತಿ, ಕೆ.ಎಸ್. ಶಾಂತೇಗೌಡ, ಎಂ.ಸಿ. ಶಿವಾನಂದ ಸ್ವಾಮಿ, ಎಚ್.ಪಿ.ಮಂಜೇಗೌಡ, ಕಾರ್ತಿಕ್ ಜಿ. ಚೆಟ್ಟಿಯಾರ್, ಸಿಲ್ವಸ್ಟರ್, ಕೆ.ವಿ. ಶಿವಕುಮಾರ್, ಯದುಕುಮಾರ್, ಸೋಮಶೇಖರ್ ಮತ್ತು ಮುಖಂಡರುಗಳಾದ ಗಾಯತ್ರಿ ಶಾಂತೇಗೌಡ, ಎ.ಎನ್.ಮಹೇಶ್, ಕೆಂಪನಹಳ್ಳಿ ಮಂಜುನಾಥ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಚಂದ್ರೇಗೌಡ ಮತ್ತು ಮಹಿಳಾ ಅಧ್ಯಕ್ಷೆ ಯಶೋಧಾ, ಸಿಪಿಐ ಮುಖಂಡರಾದ ರಾಧಾಸುಂದರೇಶ್‌, ಸುಧಾ, ಕನ್ನಡ ಸಂಘಟನೆಗಳ ಮುಖಂಡರಾದ ತೇಗೂರು ಜಗದೀಶ್, ರಾಜೇಗೌಡ, ದಲಿತ ಸಂಘರ್ಷ ಸಮಿತಿಯ ವಸಂತ್ ಕುಮಾರ್, ರೈತ ಮುಖಂಡ ಗುರುಶಾಂತಪ್ಪ ಇದ್ದರು.

 

 

 

 

 

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !