ಗುರುವಾರ , ನವೆಂಬರ್ 26, 2020
21 °C
ಗ್ರಾಮಠಾಣಾ ಜಾಗ ಅತಿಕ್ರಮಣ: ಸಮಯಾವಕಾಶ ನೀಡಲು ಆಗ್ರಹ

ಅಕ್ರಮ ಮನೆಗಳ ತೆರವು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಪುರ (ಬೀರೂರು): ಕುಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 8ಕ್ಕೂ ಹೆಚ್ಚು ಮನೆಗಳು ಮತ್ತು ಶೆಡ್‍ಗಳನ್ನು ಗುರುವಾರ ಬೆಳಿಗ್ಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಂಬಂಧಿಸಿದಂತೆ ಶಿವಪುರ ಗ್ರಾಮದಲ್ಲಿ ಕೆಲವು ಮನೆಗಳನ್ನು ಬೈಪಾಸ್ ನಿರ್ಮಾಣಕ್ಕಾಗಿ ತೆರವು ಮಾಡಬೇಕಿದ್ದು, ರಸ್ತೆಗೆ ತಮ್ಮ ಜಾಗ ಬಿಟ್ಟುಕೊಟ್ಟವರಿಗೆ ಈಗಾಗಲೇ ಪರಿಹಾರ ಧನ ಪಾವತಿ ಮಾಡಲಾಗಿದೆ. ನವೆಂಬರ್ 5ರ ಒಳಗೆ ಸದರಿ ಮನೆಗಳನ್ನು ತೆರವು ಮಾಡಿಕೊಡುವಂತೆ ಪ್ರಾಧಿಕಾರವು ಕೂಡಾ ಸೂಚಿಸಿದೆ. ಈ ಹಂತದಲ್ಲಿ ಗ್ರಾಮದ ಒಳಭಾಗದಲ್ಲಿ ಇರುವ ಗ್ರಾಮ ಠಾಣಾ ಸ್ಥಳ ಸರ್ವೆ ನಂ 73/1ರ 4.31 ಎಕರೆ ಪ್ರದೇಶದಲ್ಲಿ, ತೆರವು ಮಾಡ ಬೇಕಿರುವ ಮನೆಗಳ ಸದಸ್ಯರು ಕೆಲ ದಿನಗಳ ಹಿಂದೆ ತಾತ್ಕಾಲಿಕ ಶೆಡ್ ರೂಪ ದಲ್ಲಿ ಸಿಮೆಂಟ್ ಇಟ್ಟಿಗೆ, ಶೀಟ್‍ಗಳನ್ನು ಬಳಸಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು.

ಕುಡ್ಲೂರು ಗ್ರಾಮ ಪಂಚಾಯಿತಿಯು ಸದರಿ ಜಾಗವನ್ನು ಶಿವಪುರದ ವಸತಿ ರಹಿತರಿಗೆ ನಿವೇಶನಗಳನ್ನು ನೀಡಲು ಗುರುತಿಸಿತ್ತು. 45 ಜನ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆದರೂ, 350 ಜನ ಅರ್ಜಿ ಹಾಕಿದ್ದರಿಂದ ಮತ್ತು ಕೆಲವರು ಲೇಔಟ್ ಸರ್ವೆಗೆ ಅಡ್ಡಿಪಡಿಸಿದ್ದರಿಂದ ವಿಳಂಬವಾಗಿತ್ತು. ಈ ಹಂತದಲ್ಲಿ ಪರ್ಯಾಯ ವ್ಯವಸ್ಥೆ ಇದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ಪರಿಹಾರ ಪಡೆದವರು ಇಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿದರೆ ಅದು ಗೊಂದಲಗಳಿಗೆ ಆಸ್ಪದವಾಗುತ್ತದೆ ಎನ್ನುವ ಕಾರಣದಿಂದ, ನಿವೇಶನಗಳು ಹಂಚಿಕೆ ಆದ ನಂತರ ಮನೆಗಳನ್ನು ನಿರ್ಮಿಸಲು ಮುಂದಾಗುವಂತೆ ಸೂಚಿಸಲಾಗಿತ್ತು. ಆದರೆ, ಸದ್ಯದಲ್ಲಿಯೇ ತಾವು ವಾಸ ಇರುವ ಮನೆಗಳನ್ನು ಬಿಟ್ಟುಕೊಡಬೇಕು ಎನ್ನುವ ಸಲುವಾಗಿ 8 ಮಂದಿ ಇಲ್ಲಿ ಮನೆಗಳನ್ನು ಕಟ್ಟಲು ಮುಂದಾಗಿದ್ದರು. ಕಡೆಗೆ ಪೊಲೀಸ್ ಬಂದೋಬಸ್ತ್ ನಡುವೆ ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.

ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ರತ್ನಮ್ಮ, ರೇಣುಕಾ, ಪ್ರೇಮಾ ಎನ್ನುವವರು, ‘ಏಕಾಏಕಿ ಖಾಲಿ ಮಾಡಿಸಿದರೆ ಮಕ್ಕಳು ಕಟ್ಟಿಕೊಂಡು ನಾವು ಏಲ್ಲಿ ಹೋಗಬೇಕು? ಇನ್ನೊಂದು ವಾರದಲ್ಲಿ ಇರುವ ಮನೆಗಳನ್ನೂ ತೆರವು ಮಾಡಿಕೊಡಬೇಕು. ಈ ಬಗ್ಗೆ ಶಾಸಕ ಡಿ.ಎಸ್.ಸುರೇಶ್ ಅವರ ಗಮನಕ್ಕೂ ತಂದಿದ್ದೆವು. ಮನೆಗಳನ್ನು ಕಳೆದುಕೊಳ್ಳುವವರು ಮಾತ್ರ ಅಲ್ಲಿ ವ್ಯವಸ್ಥೆ ಮಾಡಿಕೊಳ್ಳಿ, ಅಧಿಕಾರಿಗಳಿಗೆ ಸೂಚಿಸುತ್ತೇನೆ ಎನ್ನುವ ಭರವಸೆ ಕೂಡಾ ಅವರು ನೀಡಿದ್ದರು. ಆದರೆ, ಈಗ ಬೆಳ್ಳಂಬೆಳಗ್ಗೆ ಮನೆಗಳನ್ನು ಕೆಡವಿ ಹಾಕಿದ್ದಾರೆ. ಬೇಕಾದರೆ ನಾವು ಬರೆದುಕೊಡುತ್ತೇವೆ, ನಮಗೆ ತಾತ್ಕಾಲಿಕ ವಾಗಿ ಇಲ್ಲಿ ವಾಸಿಸಲು ಅನುವು ಮಾಡಿ ಕೊಡಬೇಕು. 6 ತಿಂಗಳ ನಂತರ ನಾವೇ ಖಾಲಿ ಮಾಡುತ್ತೇವೆ. ಮಾನವೀಯ ದೃಷ್ಟಿಯಿಂದ ನಮ್ಮನ್ನು ಪರಿಗಣಿಸಬೇಕು. ನಾವೆಲ್ಲ ಶೋಷಿತರಾಗಿದ್ದು, ಬಲಿಷ್ಠರು ಇರುವ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮನ್ನು ತುಳಿಯಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತರೀಕೆರೆ ತಾಲ್ಲೂಕು ಪಂಚಾಯಿತಿ ಇಒ ಯತಿರಾಜ್ ದೂರವಾಣಿ ಮೂಲಕ ಮಾತನಾಡಿ, ‘ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು ನಮ್ಮ ಹೊಣೆಯಾಗಿದೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿ ಯಾರೇ ಅನಧಿಕೃತವಾಗಿ ಮನೆ ನಿರ್ಮಿಸಿದ್ದರೂ ತೆರವುಗೊಳಿಸಲಾಗುವುದು. ನಿವೇಶನ ಹಂಚಿಕೆ ವಿಷಯವಾಗಿ ಫಲಾನುಭವಿಗಳ ಪಟ್ಟಿ ಸಿದ್ಧವಾಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ಈಗ ತೆರವು ಮಾಡ ಲಾಗಿರುವ ಮನೆಗಳವರಿಗೆ ಮೊದಲಿ ನಿಂದಲೂ ಎಚ್ಚರಿಕೆ ನೀಡಲಾಗಿತ್ತು. ಆದರೂ ಅವರು ಮಾತು ಕೇಳದ್ದರಿಂದ ಪೊಲೀಸ್ ಬಂದೋಬಸ್ತ್ ಒದಗಿಸಿ ತೆರವು ಮಾಡಲಾಗಿದೆ’ ಎಂದರು.

ಕುಡ್ಲೂರು ಗ್ರಾಮ ಪಂಚಾ ಯಿತಿ ಪಿಡಿಒ ಕುಮಾರ್ ಕೆ. ‘ಈ ಸ್ಥಳದಲ್ಲಿ ಇದು ಮೊದಲ ತೆರವು ಕಾರ್ಯಾಚರಣೆ ಏನೂ ಅಲ್ಲ, ಅನಧಿಕೃತವಾಗಿ ಮನೆ ಕಟ್ಟಿಕೊಳ್ಳದಂತೆ ಆರಂಭದಿಂದಲೂ ಸೂಚಿಸಲಾಗಿತ್ತು. ಆದರೆ, ದಿಢೀರ್ ಎಂದು ತಲೆಎತ್ತಿದ ಮನೆಗಳ ವಿಷಯವಾಗಿ ಗ್ರಾಮಸ್ಥರೇ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸ್ಥಳವನ್ನು ಅರ್ಹರಿಗೆ ವಸತಿ ಕಲ್ಪಿಸಲು ಗುರುತಿಸಿದ್ದು, ಈ ಸ್ವತ್ತಿನ ರಕ್ಷಣೆ ಪಂಚಾಯಿತಿಯದ್ದೇ ಆಗಿದೆ. ನಿವೇಶನ ಹಂಚಿಕೆ ಆಗಿ ಅರ್ಹರಾದವರು ಮನೆ ಕಟ್ಟಿಕೊಂಡರೆ ಯಾರೂ ಅಡ್ಡಿಪಡಿ ಸುವುದಿಲ್ಲ. ನಾಲ್ಕು ವರ್ಷದ ಹಿಂದೆ ಇಲ್ಲಿ ತೆರವು ಮಾಡಲು ಬಂದಾಗ ಈ ಹಿಂದೆ ಕಾನೂನು ಬಾಹಿರವಾಗಿ ಮೊದಲೇ ಮನೆ ಕಟ್ಟಿಕೊಂಡಿದ್ದ ಒಬ್ಬರು ವಾರದ ಅವಕಾಶ ಕೊಡಿ, ನಾವೇ ತೆರವು ಮಾಡು ತ್ತೇವೆ ಎಂದಿದ್ದರು’ ಎಂದು ಹೇಳಿದರು.

ಬೀರೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ಆರ್.ಶಿವಕುಮಾರ್, ಪಿಎಸ್‍ಐ ಕೆ.ವಿ.ರಾಜಶೇಖರ್ ನೇತೃತ್ವದ ಸಿಬ್ಬಂದಿ ಹಾಗೂ ಚಿಕ್ಕಮಗಳೂರಿನಿಂದ ಬಂದ ಡಿಎಆರ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.