ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಬಿಜೆಪಿ ಆಗ್ರಹ

Last Updated 7 ಜನವರಿ 2019, 14:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪೆಟ್ರೊಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ನಿರ್ಧಾರ ವಿರೋಧಿಸಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯವರು ಸೋಮವಾರ ಪ್ರತಿಭಟನೆ ಮಾಡಿದರು.

ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ರಾಜ್ಯ ಸರ್ಕಾರವು ಪೆಟ್ರೊಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಿಸಲು ನಿರ್ಧರಿಸಿರುವುದು ಖಂಡನೀಯ. ತೆರಿಗೆ ಹೆಚ್ಚಳಕ್ಕೆ ಕಾರಣ ಏನು ಎಂಬುದನ್ನು ಸ್ಟಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಪೆಟ್ರೊಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಪೆಟ್ರೊಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.

‘ಕೆಲ ದಿನಗಳ ಹಿಂದಷ್ಟೇ ವಿದ್ಯುತ್‌ ದರ ಏರಿಕೆ ಮಾಡಲಾಗಿತ್ತು. ಈಗ ಬಸ್‌ ಟಿಕೆಟ್‌ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರ್ವಜನಿಕರಿಗೆ ಏರಿಕೆ ಹೊರೆಯ ಬರೆ ಎಳೆಯುತ್ತಿದೆ’ ಎಂದು ದೂಷಿಸಿದರು.

‘ಕಚೇರಿ ಸಿಬ್ಬಂದಿ ಬಳಿ ದಾಖಲೆ ಇಲ್ಲದ ₹ 25 ಲಕ್ಷ ಹಣ ವಿಧಾನಸೌದದಲ್ಲಿ ಪತ್ತೆಯಾಗಿದೆ. ನೈತಿಕ ಹೊಣೆಹೊತ್ತು ಪುಟ್ಟರಂಗಶೆಟ್ಟಿ ಅವರು ರಾಜೀನಾಮೆ ನೀಡಬೇಕು. ಸಚಿವರ ರಾಜೀನಾಮೆ ನೀಡಿದಿದ್ದರೆ ಸಂಪುಟದಿಂದ ಕೈಬಿಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು 25 ಲಕ್ಷ ಪುಟಗೋಸಿ ಎಂದು ಹೇಳಿರುವುದು ನಾಚಿಕೆಗೇಡಿನ ಹೇಳಿಕೆ. ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬುದು ಈ ಸರ್ಕಾರದ ನೀತಿಯಾಗಿದೆ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದ ಅಭಿವೃದ್ಧಿಗೆ ಬಳಸಬೇಕಾದ ಹಣ ಸೋರಿಕೆಯಾಗುತ್ತಿದೆ. ಲಂಚ ಹೊಡೆಯುವುದಕ್ಕೆ ಯಾರಿಗೂ ಸಂವಿಧಾನ ಲೈಸೆನ್ಸ್‌ ಕೊಟ್ಟಿಲ್ಲ. ಭ್ರಷ್ಟಾಚಾರ ಮಾಡಲು ಯಾರಿಗೂ ಅವಕಾಶ ಇಲ್ಲ. ಸಿದ್ದರಾಮಯ್ಯ ಅವರುಸಿನಿಮಾದವರ ಮೇಲಿನ ಐಟಿ ದಾಳಿಯನ್ನು ರಾಜಕೀಯ ದುರುದ್ದೇಶ ಪ್ರೇರಿತ ಎಂದು ಹೇಳಿರುವುದು ವಿಪರ್ಯಾಸ’ ಎಂದರು.

ಮುಖಂಡರಾದ ಎಚ್‌.ಡಿ.ತಮ್ಮಯ್ಯ, ಸೋಮಶೇಖರಪ್ಪ, ಪುಷ್ಪರಾಜ್‌, ಪ್ರೇಮಲತಾ ನಾಗರಾಜ್‌, ಅನ್ವರ್‌, ಸುದೀರ್‌, ವರಸಿದ್ಧಿ ವೇಣುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT