ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟ್‌: ಜಲಪಾತಗಳ ದೃಶ್ಯಕಾವ್ಯ

ಮಳೆ ಬೆನ್ನಲ್ಲೇ ಮಿನುಗುತ್ತಿರುವ ಹಸಿರು ಹೊನ್ನು: ‘ಆಲೇಕಾನು’ ಆಕರ್ಷಣೆಯ ಕೇಂದ್ರ ಬಿಂದು
Last Updated 26 ಜೂನ್ 2021, 4:47 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಚಿಕ್ಕಮಗಳೂರು–ದಕ್ಷಿಣಕನ್ನಡ ಜಿಲ್ಲೆಯ ಸಂಪರ್ಕ ಸೇತುವಾಗಿರುವ ಚಾರ್ಮಾಡಿ ಘಾಟ್‌ನಲ್ಲಿ ಈಗ ಹಸಿರು ಹೊನ್ನು ಮಿನುಗುತ್ತಿದೆ. ಮಳೆಗಾಲದ ಬೆನ್ನಲ್ಲೇ ಘಾಟ್‌ನಲ್ಲಿರುವ ನೂರಾರು ಜಲಪಾತಗಳು ಹಾಲ್ನೊರೆಯಾಗಿ ಧುಮ್ಮಿಕ್ಕುತ್ತಿದ್ದು, ಈ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ನಿಧಾನವಾಗಿ ಇಲ್ಲಿಗೆ ಲಗ್ಗೆ ಇಡತೊಡಗಿದ್ದಾರೆ.

ಮಂಜು ಮುಸುಕಿನ ಆಟದಿಂದ ಸೃಷ್ಟಿಯಾಗುವ ಪ್ರಕೃತಿಯ ದೃಶ್ಯ ಸೊಬಗನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ದಾಂಗುಡಿ ಇಡುವುದು ಸಾಮಾನ್ಯ. ಆದರೆ, ಈ ಬಾರಿ ಲಾಕ್‌ಡೌನ್‌ನಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ.

ಚಾರ್ಮಾಡಿ ಘಾಟ್‌ನಲ್ಲಿ ಜೂನ್‌ನಿಂದ ಅಕ್ಟೋಬರ್‌ವರೆಗೆ ಜಲಪಾತಗಳ ಸೊಬಗು ಇರುತ್ತದೆ. ಕಿರು ಜಲಪಾತಗಳಿಗೆ ಮೈಯೊಡ್ಡಿ, ಮಂಜು ಮುಸುಕಿದ ವಾತಾವರಣದಲ್ಲಿ ಸಂಚರಿಸಿ ಖುಷಿಪಡುವ ದೃಶ್ಯ ಮಳೆಗಾಲದಲ್ಲಿ ಇಲ್ಲಿ ಸರ್ವೇ ಸಾಮಾನ್ಯ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಆಲೇಕಾನು ಜಲಪಾತ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಚಾರ್ಮಾಡಿ ಘಾಟಿಯ ಮಂಜಿನ ದಾರಿ ಪ್ರವಾಸಿಗರನ್ನು ಮೋಡಿ ಮಾಡುತ್ತದೆ. ಹಾವು ಹರಿದಂತಿರುವ 28 ಕಿ.ಮೀ ದೂರದ ಈ ಮಾರ್ಗವು ಪ್ರಕೃತಿ ಪ್ರೇಮಿಗಳಿಗೆ ಮಳೆಗಾಲದಲ್ಲಿ ಅವಿಸ್ಮರಣೀಯ ಅನುಭವ ನೀಡುತ್ತದೆ. ರಸ್ತೆಯ ಒಂದು ಬದಿಯಲ್ಲಿನ ಬೆಟ್ಟ ಗಗನ ಚುಂಬಿಸುವಂತಿದ್ದರೆ, ಇನ್ನೊಂದು ಕಡೆ ಕೆಳಗೆ ಕಣ್ಣುಹಾಯಿಸಿದರೆ ಕಾಣುವ ಆಳವಾದ ಪ್ರಪಾತ ನಡುಕ ಹುಟ್ಟಿಸುತ್ತದೆ.

ಉತ್ತರ ಕರ್ನಾಟಕದಿಂದ ಮೂಡಿಗೆರೆ ಮೂಲಕ ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರು ಚಾರ್ಮಾಡಿ ಘಾಟಿಯ ಹಸಿರಿನ ಸೊಬಗು, ಜಲ‍ಪಾತ ನೋಡಿ ದಂಗಾಗುತ್ತಾರೆ. ಪ್ರವಾಸಿಗರು ಘಾಟಿಯ ತಿರುವುಗಳಲ್ಲಿ ನಿರ್ಮಿಸಿರುವ ತಡೆಗೋಡೆ ಹತ್ತಿ ಸೆಲ್ಫಿ ತೆಗೆಯುವು‌‌ದಕ್ಕೆ, ಜಲಪಾತದ ಸಮೀಪ ಹೋಗುವುದಕ್ಕೆ ನಿಷೇಧವಿದೆ. ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ. ರಸ್ತೆ ಬದಿಯಲ್ಲಿ ನಿಂತು ಸೌಂದರ್ಯ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT