ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ದಾಳಿ: ಯುವಕನಿಗೆ ಗಾಯ

ಗ್ರಾಮದಲ್ಲಿ ಭಯದ ವಾತಾವರಣ– ಚಿರತೆ ಸೆರೆಗೆ ಆಗ್ರಹ
Last Updated 8 ಮಾರ್ಚ್ 2020, 13:30 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಶಾನುವಳ್ಳಿ ನಿವಾಸಿ ಬಿ.ಎನ್.ಮುಖೇಶ್ (34) ಮೇಲೆ ಭಾನುವಾರ ಬೆಳಿಗ್ಗೆ ಚಿರತೆ ದಾಳಿ ನಡೆದಿದೆ. ಅವರ ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಮುಖೇಶ್ ಅವರು ಭಾನುವಾರ ರಜೆ ಇದ್ದಿದ್ದರಿಂದ, ತಮ್ಮ ಮನೆಯಿಂದ ಬೆಳಿಗ್ಗೆ 7 ಗಂಟೆ ಹೊತ್ತಿಗೆ ಬಿಲಗದ್ದೆಯಲ್ಲಿರುವ ತಮ್ಮ ತೋಟಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದರು. ದಾರಿ ಮಧ್ಯೆ ಹಿಂಬಾಲಿಸಿ ಬಂದ ಚಿರತೆ ದಾಳಿ ನಡೆಸಿದ್ದು, ಎಡ ಕಾಲಿನ ಮಾಂಸ ಖಂಡವನ್ನೇ ಕಿತ್ತಿದೆ. ಅವರು ಬೈಕ್ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ತೋಟಕ್ಕೆ ಹೋಗುತ್ತಿದ್ದೆ. ಬೆನ್ನಟ್ಟಿ ಬಂದ ಚಿರತೆ, ಕಾಲಿಗೆ ಕಚ್ಚಿದಾಗ ಬೈಕ್ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋದೆ. ಆದರೂ ಬೆನ್ನಟ್ಟಿ ಬಂದಿತು. ದಾರಿ ಮಧ್ಯೆ ಇನ್ನೊಂದು ವಾಹನ ಎದುರುಗೊಂಡಿದ್ದರಿಂದ, ಚಿರತೆ ರಸ್ತೆ ಪಕ್ಕದ ಕಾಡಿಗೆ ಓಡಿತು’ ಎಂದು ಮುಖೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮುಖೇಶ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆ ದಾಳಿ ಮಾಡಿರುವ ಘಟನೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಅದನ್ನು ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

‘ಚಿರತೆ ಸೆರೆಗೆ ಬೋನು’

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶೃಂಗೇರಿ ವಲಯಾರಣ್ಯಾಧಿಕಾರಿ ಸಂಪತ್ ಪಟೇಲ್, ‘ಇದೇ ಮೊದಲ ಬಾರಿಗೆ ಈ ವ್ಯಾಪ್ತಿಯಲ್ಲಿ ಚಿರತೆ ದಾಳಿ ಮಾಡಿರುವುದು ಇಲಾಖೆಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಚಿರತೆ ಚಲನವಲನವನ್ನು ಆಧರಿಸಿ, ಬೋನು ಇರಿಸಲಾಗಿದೆ. ಶೀಘ್ರವೇ ಅದನ್ನು ಸೆರೆ ಹಿಡಿಯಲಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT