ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಜಿಲ್ಲೆಯಲ್ಲಿ 1,815 ಮಕ್ಕಳು ಶಾಲೆಯಿಂದ ದೂರ

Last Updated 15 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ 1,815 ಮಕ್ಕಳು (6ರಿಂದ 16 ವರ್ಷ ವಯೋಮಾನ) ಶಾಲೆಯಿಂದ ಹೊರಗುಳಿದಿದ್ದಾರೆ. ಕೆಲಸ, ವಲಸೆ, ಕಲಿಕೆ ನಿರಾಸಕ್ತಿ, ಪೋಷಕರ ಇಚ್ಛಾಶಕ್ತಿ ಕೊರತೆ ಮೊದಲಾದ ಕಾರಣಗಳಿಂದ ವಿದ್ಯಾಭ್ಯಾಸದಿಂದ ದೂರ ಉಳಿದಿದ್ದಾರೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು(ಒಒಎಸ್‌ಸಿ) ಜಿಲ್ಲೆಯ ಎಂಟೂ ಶೈಕ್ಷಣಿಕ ವಲಯಗಳಲ್ಲಿ ಕಳೆದ ನವೆಂಬರ್‌ನಲ್ಲಿ ಸಮೀಕ್ಷೆ ನಡೆದಿತ್ತು. 2017–18 ಮತ್ತು 2018–19ನೇ ಸಾಲಿನಲ್ಲಿ ಹೊರಗುಳಿದಿರುವವರ ಮಾಹಿತಿ ಸಂಗ್ರಹಿಸಲಾಗಿದೆ. ಜಿಲ್ಲೆಯ ಮಲೆನಾಡು ಭಾಗಕ್ಕಿಂತ ಬಯಲುಸೀಮೆಯಲ್ಲಿ ಶಾಲೆ ತೊರೆದಿರುವ ಮಕ್ಕಳ ಸಂಖ್ಯೆ ಹೆಚ್ಚು ಇದೆ.

ರಸ್ತೆ, ಕಟ್ಟಡ, ಇಟ್ಟಿಗೆ ಭಟ್ಟಿ ಕಾಮಗಾರಿ, ಎಸ್ಟೇಟ್‌ ಮತ್ತು ಪ್ಲಾಂಟೇಷನ್‌ ಕೆಲಸಗಳಲ್ಲಿ ತೊಡಗಿಕೊಂಡಿರುವುದು, ಕಲಿಕೆಯಲ್ಲಿ ನಿರಾಸಕ್ತಿ, ಗುಳೆ, ಪೋಷಕರಿಗೆ ಇಚ್ಛಾಶಕ್ತಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಮಕ್ಕಳು ಶಾಲೆ ತೊರೆದಿದ್ದಾರೆ. ಈ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರೇತರ ಸಂಸ್ಥೆಗಳು, ಸಂಘಟನೆಗಳು ಜವಾಬ್ದಾರಿ ವಹಿಸಬೇಕಿದೆ.

‘ಜಿಲ್ಲೆಯಲ್ಲಿ ವಲಸೆ ಕಾರಣಕ್ಕೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳೇ ಜಾಸ್ತಿ ಇದ್ದಾರೆ. ಹೊರಗುಳಿದಿರುವವರಲ್ಲಿ ಶೇ 70ರಷ್ಟು 9 ಮತ್ತು 10ನೇ ತರಗತಿ ಮಕ್ಕಳು ಇದ್ದಾರೆ. ಕಲಿಕೆಯಲ್ಲಿ ಹಿಂದೆಬಿದ್ದಿದ್ದ ಕೆಲ ಮಕ್ಕಳು 9ನೇ ತರಗತಿಗೆ ಬಿಟ್ಟಿದ್ದಾರೆ. 10ನೇ ತರಗತಿಯಲ್ಲಿ ಫೇಲಾಗುತ್ತೇನೆ ಎಂದು ಶಾಲೆ ತೊರೆದಿದ್ದಾರೆ’ ಎಂದು ಒಒಎಸ್‌ಸಿ ಜಿಲ್ಲಾ ನೋಡೆಲ್‌ ಅಧಿಕಾರಿ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕ ಸ್ಥಳಗಳು, ಮನೆಯ ನೆರೆಹೊರೆ ಇತ್ಯಾದಿ ಕಡೆಗಳಲ್ಲಿ ಇಂಥ ಮಕ್ಕಳು ಕಂಡುಬಂದರೆ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ಮಾಹಿತಿ ನೀಡಬಹುದು. ಮಕ್ಕಳನ್ನು ಸಮೀಪದ ಶಾಲೆಗೆ ಸೇರಿಸಲು ಅವಕಾಶ ಇದೆ. ಟೆಂಟ್‌ ಶಾಲೆ, ಋತುಮಾನ ಶಾಲೆ ವ್ಯವಸ್ಥೆ ಇದ್ದು, ಇಲ್ಲಿಗೂ ದಾಖಲಿಸಬಹುದಾಗಿದೆ. ಪೋಷಕರು ಇಲ್ಲದಿದ್ದರೆ ಅಂಥ ಮಕ್ಕಳ ವಸತಿಗೆ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ.

‘ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಇಲಾಖೆ ಕಾರ್ಯೋನ್ಮುಖವಾಗಿದೆ. ಬ್ಲಾಕ್‌, ಕ್ಲಸ್ಟರ್‌ವಾರು ಮಕ್ಕಳ ಪಟ್ಟಿ ತಯಾರಿಸಿದ್ದು, ಊರುಗಳಲ್ಲಿ ಆಂದೋಲನ, ಅಭಿಯಾನ ನಡೆಸಲಾಗುವುದು’ ಎಂದು ಡಿಡಿ‍ಪಿಐ ಸಿ.ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಐದು ಋತುಮಾನ ಶಾಲೆಗಳನ್ನು ತೆರೆಯಲಾಗಿದೆ. ಈ ಪೈಕಿ ಲಕ್ಯಾ ಭಾಗದಲ್ಲಿ ನಾಲ್ಕು ಶಾಲೆಗಳಿವೆ. ಈ ಭಾಗದಲ್ಲಿ ಬರಗಾಲದಿಂದಾಗಿ ಕೆಲವರು ಗುಳೆ ಹೋಗಿದ್ದಾರೆ. ಗುಳೆ ಹೋಗಿರುವ ಪೋಷಕರ ಮಕ್ಕಳಿಗೆ ಋತುಮಾನ ಶಾಲೆ ವ್ಯವಸ್ಥೆ ಮಾಡಿ ಆಹಾರ, ವಸತಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲೆಯ ವಲಯವಾರು ಅಂಕಿಅಂಶ
ವಲಯ ಶಾಲೆಯಿಂದ ಹೊರಗುಳಿದವರು

ಚಿಕ್ಕಮಗಳೂರು 498

ತರೀಕೆರೆ 266

ಬೀರೂರು 213

ಮೂಡಿಗೆರೆ 203

ಕಡೂರು 201

ಕೊಪ್ಪ 182

ಎನ್‌.ಆರ್‌.ಪುರ 175

ಶೃಂಗೇರಿ 77

ಒಟ್ಟು 1,815

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT