ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು ಹೋಬಳಿ: 5950 ಹೆಕ್ಟೇರ್ ಬಿತ್ತನೆ ಗುರಿ

ಕೃಷಿ ಚಟುವಟಿಕೆಗೆ ಪೂರಕ ವಾತಾವರಣ; ಕ್ಯೂಆರ್ ಕೋಡ್ ಆಧರಿಸಿ ಬೀಜ ವಿತರಣೆ
Published 1 ಜೂನ್ 2023, 16:07 IST
Last Updated 1 ಜೂನ್ 2023, 16:07 IST
ಅಕ್ಷರ ಗಾತ್ರ

ಬೀರೂರು: ಒಂದೆರಡು ಮಳೆ ಲಭಿಸಿರುವುದರಿಂದ ಹೋಬಳಿಯಲ್ಲಿ ಮುಂಗಾರು ಪೂರ್ವದಲ್ಲೇ ಬಿತ್ತನೆಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಬೀರೂರು ಹೋಬಳಿಯಲ್ಲಿ 5950 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಸೋಮನಿಂಗಪ್ಪ ಹೇಳಿದರು.

ಬೀರೂರು ಹೋಬಳಿಯಲ್ಲಿ ರಾಗಿ ಮುಖ್ಯ ಬೆಳೆಯಾಗಿದ್ದು 3,200 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 1500 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆಯ ಗುರಿ ಇದೆ. ಹೈಬ್ರೀಡ್ ಜೋಳ, ತೊಗರಿ, ಅಲಸಂದೆ, ಉದ್ದು, ಹೆಸರು, ಅವರೆ ಮತ್ತು ಹುರುಳಿ,  ಶೇಂಗಾ, ಎಳ್ಳು, ಸೂರ್ಯಕಾಂತಿ, ಹುಚ್ಚೆಳ್ಳು ಮತ್ತು ಸಾಸಿವೆ, ಹತ್ತಿ, ಕಬ್ಬು ಸೇರಿ 1250 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ.

ರೈತರಿಗೆ ಬಿತ್ತನೆ ಬೀಜಗಳ ವಿತರಣೆ ಆರಂಭವಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಲು ರೈತರು ಆಧಾರ್ ಕಾರ್ಡ್, ಪಹಣಿ ಹೊಂದಿರಬೇಕು,  ಇಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು. ಈ ಬಾರಿ ಬಿತ್ತನೆ ಬೀಜಗಳನ್ನು ವಿತರಣೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ವಿಧಾನದ ಮೂಲಕ ವಿತರಿಸಲಾಗುತ್ತಿದ್ದು, ಹೊಸ ವಿಧಾನದಿಂದ ಬಿತ್ತನೆಬೀಜ ದುರ್ಬಳಕೆ ಆಗುವುದು ತಪ್ಪಲಿದೆ. ರೈತರ ಪಹಣಿಯಲ್ಲಿ ನಮೂದಿಸಿರುವ ಬೆಳೆಗಳ ರೀತಿಯಲ್ಲಿಯೇ ಬೆಳೆ ಬೆಳೆಯಬೇಕಾಗುತ್ತದೆ ಎಂದರು. 

ಸದ್ಯ ಹೊಸ ವಿಧಾನದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿರುವುದು ಸ್ವಲ್ಪ ಮಟ್ಟಿನ ವಿಳಂಬವಾಗುತ್ತಿದೆ. ಆದರೆ ಇದರಿಂದ ಅನುಕೂಲವೂ ಇದೆ. ಯಾವುದೇ ರೀತಿಯಲ್ಲಿ ಅರ್ಹ ಫಲಾನುಭವಿಗಳೇ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ಇಲಾಖೆಯ ಯೋಜನೆ. ಹೋಬಳಿಯಾದ್ಯಂತ 1400 ರೈತರ ಇಕೆವೈಸಿ ಆಗದೆ ಬಾಕಿ ಉಳಿದಿದೆ. ಸೌಲಭ್ಯಗಳು ಸಮರ್ಪಕವಾಗಿ ಪೂರೈಕೆಯಾಗಲು ಇಕೆವೈಸಿ ಅತ್ಯಗತ್ಯವಾಗಿದೆ. ಆದ್ದರಿಂದ ಬಾಕಿ ಉಳಿದಿರುವ ರೈತರು ಕೆವೈಸಿ ಮಾಡಿಸಲು ಮುಂದಾಗಬೇಕು. ಮುಂಗಾರು ಬಿತ್ತನೆಯ ನಂತರ ಬೆಳೆಗಳ ಮೇಲೆ ವಿಮೆ ಪಾವತಿಸಲು ಅರ್ಜಿ ಕರೆಯಲಾಗುತ್ತದೆ ಎನ್ನುವುದು ಕೃಷಿ ಅಧಿಕಾರಿಗಳ ಹೇಳಿಕೆ.

‘ಕ್ಯೂಆರ್ ಕೋಡ್ ಮೂಲಕ ಬಿತ್ತನೆ ಬೀಜ ವಿತರಿಸುವುದು ಒಳ್ಳೆಯದು. ಆದರೆ, ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಕಂಪ್ಯೂಟರೀಕೃತ ದಾಖಲು ವ್ಯವಸ್ಥೆ ವಿಳಂಬವಾಗುತ್ತಿದೆ. ಬಿತ್ತನೆ ಬೀಜ ಪಡೆಯಲು ಸರತಿಯಲ್ಲಿ ನಿಂತರೂ ಕೋಡ್‌ ಸ್ಕ್ಯಾನ್ ಆಗದ ಕಾರಣ ನಾವು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ವಿಳಂಬವಾಗುತ್ತಿದೆ’ ಎಂದು ರೈತ ರೈತ ಹನುಮಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ವಿದ್ಯುತ್ ಸಮಸ್ಯೆಯಿಂದಾಗಿ ಸ್ಕ್ಯಾನ್‌ ತಡವಾಗುವುದು ಹೌದು, ರೈತರ ಅನುಕೂಲಕ್ಕಾಗಿ ನಾವು ಮೊಬೈಲ್‍ನ ಮೂಲಕವೂ ನೊಂದಣಿ ಮಾಡುತ್ತಿದ್ದೇವೆ. ಆದರೆ, ಅದು ಕೇವಲ 25-30ಕ್ಕೆ ಸೀಮಿತವಾಗಿದ್ದು ಬಳಿಕ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ ಎನ್ನುತ್ತಾರೆ’ ರೈತ ಸಂಪರ್ಕ ಕೇಂದ್ರದ ಸಹಾಯಕ.

ರೈತರ ದೂರು ಸಾಮಾನ್ಯವಾಗಿ ಈ ಭಾಗದ  ರೈತರು ತಾವೇ ಬೆಳೆದ ಬೆಳೆಯಿಂದ ಬಿತ್ತನೆ ಬೀಜ ಆರಿಸಿ ಇಟ್ಟುಕೊಳ್ಳುವ ಸಂಪ್ರದಾಯವಿದೆ.  ಅದರ ಹೊರತಾಗಿ ಅರುಣೋದಯ ಕಾವೇರಿ ತಳಿಯ ಮೆಕ್ಕೆಜೋಳ ಸೂರ್ಯಕಾಂತಿ ಹೆಸರಿನ  ಮೆಕ್ಕೆಜೋಳದ ಬೀಜಗಳಿಗೆ ಬೇಡಿಕೆಯಿದೆ. ಎಕರೆಗೆ 4 ಕೆಜಿ ಸೂರ್ಯಕಾಂತಿ ಬೀಜ ಬೇಕಿದ್ದು ರೈತ ಸಂಪರ್ಕ ಕೇಂದ್ರ 2  ಕೆಜಿ ಮಾತ್ರ ನೀಡುತ್ತಿದೆ.ಜೋಳ 10ಕೆಜಿ ಬದಲಾಗಿ 8ಕೆಜಿ ನೀಡಲಾಗುತ್ತಿದೆ ಮಿಕ್ಕಿದ್ದನ್ನು ಹೆಚ್ಚಿನ ಹಣ ನೀಡಿ ಹೊರಗಡೆ ಕೊಳ್ಳಬೇಕಿದೆ’ ಎಂದು ರೈತರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT