ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಬಳಕೆಯಾಗದೆ ಉಳಿದ ರಕ್ತನಿಧಿ ಠೇವಣಿ

Published 26 ಜೂನ್ 2023, 23:30 IST
Last Updated 26 ಜೂನ್ 2023, 23:30 IST
ಅಕ್ಷರ ಗಾತ್ರ

ಬಾಲು ಮಚ್ಚೇರಿ

ಕಡೂರು: ಪಟ್ಟಣದಲ್ಲಿ ರಕ್ತದ ಅಗತ್ಯವಿದ್ದವರು ದೂರದ ಊರಿಗೆ ಹೋಗುವುದನ್ನು ತಪ್ಪಿಸಲು ಮತ್ತು ಸ್ಥಳೀಯವಾಗಿಯೇ ರಕ್ತಬ್ಯಾಂಕ್ ಸ್ಥಾಪಿಸಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಕ್ತ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ತೆರೆಯಲಾದ ’ರಕ್ತನಿಧಿ’ ಠೇವಣಿಯಲ್ಲಿನ ಮೊತ್ತವು ಬಳಕೆಯಾಗದೆ ಉಳಿದಿದೆ.

ಪಟ್ಟಣದಲ್ಲಿ ಅಪಘಾತಗಳು ಸಂಭವಿಸಿ, ರಕ್ತದ ತುರ್ತು ಅಗತ್ಯ ಬಂದಾಗ ಶಿವಮೊಗ್ಗ ಅಥವಾ ಚಿಕ್ಕಮಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಇದನ್ನು‌ ಮನಗಂಡು ಆಗಿನ (2004 ರಿಂದ 2008) ಕಡೂರು ತಹಶೀಲ್ದಾರ್‌ ಆಗಿದ್ದ  ಡಾ.ಲಕ್ಷ್ಮೀನಾರಾಯಣಪ್ಪ ಅವರು ರೆಡ್ ಕ್ರಾಸ್ ರಕ್ತಬ್ಯಾಂಕ್ ಸ್ಥಾಪಿಸಲು ಪ್ರಯತ್ನಿಸಿದರು. ಸಮಾನ ಮನಸ್ಕರು ಮತ್ತು ಆಸಕ್ತರನ್ನು ಸೇರಿಸಿ ರೆಡ್ ಕ್ರಾಸ್ ಸದಸ್ಯರನ್ನಾಗಿ ಮಾಡಿ, ನೊಂದಣಿ ಮಾಡಿಸಿದರು.

ರಕ್ತ ನಿಧಿ ಸ್ಥಾಪಿಸಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದರು ( ತಹಶೀಲ್ದಾರರೇ ಈ‌ ಸಮಿತಿಯ ಶಾಶ್ವತ ಅಧ್ಯಕ್ಷರು. ವ್ಯಕ್ತಿ ಬದಲಾದರೂ ಸಮಿತಿಗೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ) ಈ ಸಮಿತಿಯ ಹೆಸರಲ್ಲಿ ಕಡೂರು ವೈಶ್ಯ( ಈಗ ಕೊಟಕ್ ಮಹೀಂದ್ರ) ಬ್ಯಾಂಕಿನಲ್ಲಿ ಖಾತೆ ತೆರೆದು ಸಂಗ್ರಹಗೊಂಡ ಸದಸ್ಯತ್ವದ ಮೊತ್ತವನ್ನು ಆ ಖಾತೆಯಲ್ಲಿ ಠೇವಣಿ ಇರಿಸಿದರು. ತಲಾ ₹200 ರಿಂದ ₹500 ಸದಸ್ಯತ್ವ ಶುಲ್ಕದಂತೆ ಬಹಳಷ್ಟು ಜನರು ಸದಸ್ಯತ್ವ ಪಡೆದಿದ್ದರು. ಆದರೆ, ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನವೇ ಡಾ.ಲಕ್ಷ್ಮೀನಾರಾಯಣಪ್ಪ ಅವರು ಬೇರೆಡೆಗೆ ವರ್ಗವಾದರು.

ನಂತರ ಬಂದ ನಾಲ್ವರು ತಹಶೀಲ್ದಾರರು ಇದರತ್ತ ಗಮನ ಹರಿಸಲಿಲ್ಲ. ಪರಿಣಾಮ ವೈಶ್ಯ ಬ್ಯಾಂಕಿನಲ್ಲಿದ್ದ ಠೇವಣಿ ಖಾತೆ ಸ್ಥಗಿತಗೊಂಡಿತು. ಸದ್ಯ ಕಡೂರು ವೈಶ್ಯಬ್ಯಾಂಕ್( ಕೊಟಕ್ ಮಹೀಂದ್ರ ಬ್ಯಾಂಕ್) ಖಾತೆಯಲ್ಲಿ ಇರುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಖಾತೆ ಸಂಖ್ಯೆ 107010003852ರಲ್ಲಿ ₹11.40 ಲಕ್ಷ ಹಣವಿದ್ದು, ಈ ಖಾತೆಯೂ ಬಹುದಿನಗಳಿಂದ ಯಾವುದೇ ವ್ಯವಹಾರ ನಡೆಯದ ಕಾರಣ ಸ್ಥಗಿತಗೊಂಡಿದೆ.

‘ರಕ್ತನಿಧಿ’ ಠೇವಣಿಯ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ. ಈ ಬಗ್ಗೆ ಯಾರಲ್ಲೂ ಮಾಹಿತಿಯಿಲ್ಲ ಮತ್ತು ಈ ಖಾತೆಯನ್ನು ಯಾರು ನಿರ್ವಹಿಸುತ್ತಿದ್ದರು ಮತ್ತು ಈಗ ಅದರ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆಯೂ ಮಾಹಿತಿ ದೊರೆಯುತ್ತಿಲ್ಲ.ಈಗಿರುವ  ತಹಶೀಲ್ದಾರ್ ಎಂ.ಪಿ. ಕವಿರಾಜ್ ಅವರು ಈ ಬಗ್ಗೆ ಗಮನ ಹರಿಸಿ ಈ ಖಾತೆ ಸಕ್ರಿಯಗೊಳಿಸಿ, ರಕ್ತನಿಧಿ ಬಳಕೆಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂಬ ಆಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT