ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಆಧಾರ್ ಕಾರ್ಡ್ ತಿದ್ದುಪಡಿಗೆ ಅಲೆದಾಟ

ಕಡೂರು ಅಂಚೆ ಕಚೇರಿಯಲ್ಲಿ ಜನದಟ್ಟನೆ– ಹೆಚ್ಚುವರಿ ಕೇಂದ್ರ ತೆರೆಯಲು ಆಗ್ರಹ
Last Updated 25 ಜೂನ್ 2019, 19:45 IST
ಅಕ್ಷರ ಗಾತ್ರ

ಕಡೂರು: ಇಲ್ಲಿನ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ವಿಳಂಬವಾಗುತ್ತಿರುದರಿಂದ ಜನರಿಗೆ ಭಾರಿ ಸಮಸ್ಯೆಯಾಗುತ್ತಿದೆ ಎಂದ ದೂರು ವ್ಯಕ್ತವಾಗಿದೆ.

ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆದಿದ್ದು, ಇಲ್ಲಿ ತಿದ್ದುಪಡಿ ಮಾಡಿಸಲು ಗ್ರಾಮೀಣ ಭಾಗದ ನೂರಾರು ಜನರು ಬೆಳಿಗ್ಗೆ 6 ಗಂಟೆಯಿಂದಲೇ ಸರತಿ ನಿಲ್ಲುತ್ತಾರೆ. 10 ಗಂಟೆಗೆ ಬಾಗಿಲು ತೆಗೆದ ಕೂಡಲೇ ಸರತಿ ಸಾಲಿನಲ್ಲಿ ಇರುವವರಿಗೆ ಟೋಕನ್ ನೀಡಲಾಗುತ್ತದೆ. ಪ್ರತಿದಿನ 40 ಟೋಕನ್ ಮಾತ್ರ ನೀಡುತ್ತಿದ್ದು, ಉಳಿದವರು ವಾಪಸ್ ಹೋಗಬೇಕಾಗುತ್ತದೆ. ಗ್ರಾಮೀಣ ಭಾಗದವರು ಮಕ್ಕಳನ್ನು ಕರೆತರುವುದು ಟೋಕನ್ ಸಿಗದೆ ಮತ್ತೆ ಮಾರನೇ ದಿನ ಬರುವುದು ಮಾಮೂಲಿಯಾಗಿದೆ. ಟೋಕನ್ ಸಿಗದವರು ಅಲ್ಲಿನ ಸಿಬ್ಬಂದಿ ಜೊತೆ ವಾಗ್ವಾದಕ್ಕೂ ಮುಂದಾಗುವುದು ನಿತ್ಯನೋಟ.

ಇತ್ತೀಚೆಗೆ ಪ್ರತಿಯೊಂದು ಸರ್ಕಾರಿ ಸೌಲಭ್ಯಕ್ಕೆ ಆಧಾರ್ ಕಾರ್ಡ್ ಕೇಳುವುದು ಕಡ್ಡಾಯವಾಗಿದೆ. ಕಳೆದೊಂದು ವಾರದಿಂದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕೆ ಆಧಾರ್‌ ಕಾರ್ಡ್ ಅಪ್ ಡೇಟ್ ಮಾಡುವುದು ಕಡ್ಡಾಯ ಮಾಡಿದ್ದು, ಆಧಾರ್‌ ಕೇಂದ್ರದಲ್ಲಿ ಜನದಟ್ಟಣೆಯಾಗಲು ಕಾರಣವಾಗಿದೆ.

ಆಧಾರ್ ತಿದ್ದಪಡಿಗಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯೂ ಸೇವೆ ನೀಡಲು ಅವಕಾಶವಿದ್ದು, ಈ ಬಗ್ಗೆ ಸೂಚನೆಯನ್ನು ನೀಡಿದ್ದರೂ ಯಾವುದೇ ಬ್ಯಾಂಕ್ ನಲ್ಲಿ ಈ ಸೇವೆ ನೀಡುತ್ತಿಲ್ಲ. ಇದೂ ಇಲ್ಲಿ ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದೆ ಎಂಬುದು ನಾಗರಿಕರ ದೂರು.

ಈ ಕುರಿತು ಕಡೂರು ಪೋಸ್ಟ್ ಮಾಸ್ಟರ್ ಶಿವರಾಮ್ ಶರ್ಮ ಮಾತನಾಡಿ, ‘ಆಧಾರ್ ತಿದ್ದುಪಡಿಗಾಗಿ ಬಹಳಷ್ಟು ಜನರು ಬರುತ್ತಾರೆ. ಆದರೆ, ಒಂದು ಕಾರ್ಡ್ ತಿದ್ದುಪಡಿ ಮಾಡಲು ಕನಿಷ್ಟ 13 ನಿಮಿಷ ಬೇಕಾಗುತ್ತದೆ. ದಿನಕ್ಕೆ 8 ಗಂಟೆ ಕೆಲಸ ಮಾಡಿದರೆ 40 ಜನರ ಕಾರ್ಡ್ ತಿದ್ದುಪಡಿ ಮಾಡಲು ಮಾತ್ರ ಸಾಧ್ಯ. ಆದ್ದರಿಂದಲೇ ಕೇವಲ 40 ಟೋಕನ್ ನೀಡುತ್ತೇವೆ’ ಎನ್ನುತ್ತಾರೆ.

‘ಇದರ ನಡುವೆ ವಿದ್ಯಾರ್ಥಿಗಳ ಆಧಾರ್‌ ಕಾರ್ಡ್ ಅಪ್ ಡೇಟ್ ಮಾಡಲು ಜೂನ್ 31 ಕಡೆಯ ದಿನವಾಗಿದ್ದರಿಂದ ಅವರಿಗೆ ಮೊದಲ ಆಧ್ಯತೆ ನೀಡಿದ್ದೇವೆ. ಸಾರ್ವಜನಿಕರಿಗೆ ಈ ತಾಂತ್ರಿಕ ವಿಚಾರಗಳ ಅರಿವಿಲ್ಲ. ಹಾಗಾಗಿ ಸಿಟ್ಟಿಗೇಳುತ್ತಾರೆ. ಈ ವಾಸ್ತವವನ್ನು ಸಾರ್ವಜನಿಕರು ಅರಿತು ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಕೂಡಲೇ ಪೋಸ್ಟ್ ಆಫೀಸ್ ನಲ್ಲಿ ಹೆಚ್ಚುವರಿಯಾಗಿ ಆಧಾರ್ ತಿದ್ದುಪಡಿ ಕೇಂದ್ರವನ್ನು ತೆಗೆದು ಗ್ರಾಮೀಣ ಜನತೆಗೆ ಅನುಕೂಲ ಮಾಡಿಕೊಡಲು ಸಂಬಂಧಿಸಿದವರು ಮುಂದಾಗಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

*
ಅಂಚೆ ಕಚೇರಿಯ ಆಧಾರ್‌ ತಿದ್ದುಪಡಿ ಕೇಂದ್ರದಲ್ಲಿ ಮತ್ತೆರಡು ಕಂಪ್ಯೂಟರ್‌ ಅಳವಡಿಸಿ ಗ್ರಾಮೀಣ ಜನತೆಯ ತೊಂದರೆ ಪರಿಹರಿಸಬೇಕು.
–ಶ್ರೀನಿವಾಸ್, ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT