ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಂಪಿ ಸಂಸ್ಥೆಗೆ ಕಸ ನಿರ್ವಹಣೆ ಹೊಣೆ: ನಗರಸಭೆ ವಿಶೇಷ ಸಭೆಯಲ್ಲಿ ನಿರ್ಣಯ

Last Updated 3 ಸೆಪ್ಟೆಂಬರ್ 2018, 13:17 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಕಸ ಸಂಗ್ರಹ, ನಿರ್ವಹಣೆ ಜವಾಬ್ದಾರಿಯನ್ನು ತುಮಕೂರಿನ ಎಸ್‌ಎಂಪಿ ಎಂಟರ್‌ಪ್ರೈಸಸ್‌ಗೆ ವಹಿಸುವುದಕ್ಕೆ ನಗರಸಭೆಯಲ್ಲಿ ಅನುಮೋದನೆ ನೀಡಲಾಯಿತು.

ನಗರಸಭೆ ಅಧ್ಯಕ್ಷತೆ ಕೆ.ಎಂ.ಶಿಲ್ಪಾರಾಜಶೇಖರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮನೆ, ಅಂಗಡಿ, ಮಳಿಗೆ ಎಲ್ಲ ಕಡೆಗಳಲ್ಲಿ ಕಸ ಸಂಗ್ರಹಿಸಿ ವ್ಯವಸ್ಥಿತವಾಗಿ ವಿಲೇವಾರಿ ಮಾಡುವುದು ಎಸ್‌ಎಂಪಿ ಸಂಸ್ಥೆಯ ಜವಾಬ್ದಾರಿ. ನಿರ್ವಹಣೆಗೆ ಪೂರಕ ಸಹಕಾರವನ್ನು ನಗರಸಭೆ ನೀಡುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

‘ತುಮಕೂರು, ಕಲಬುರ್ಗಿ, ಮೈಸೂರು ಇತರೆಡೆಗಳಲ್ಲಿ ಸಂಸ್ಥೆಯು ಕಸ ಸಂಗ್ರಹ ಮತ್ತು ವಿಲೇವಾರಿಯನ್ನು ಸಂಸ್ಥೆಯು ನಿರ್ವಹಿಸುತ್ತಿದೆ. ಬೆಳಿಗ್ಗೆ 6.30ರಿಂದ 7.30ರ ಹೊತ್ತಿಗೆ ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲಾಗುವುದು. ಹೋಟೆಲ್‌, ಅಂಗಡಿ, ಬಾರ್‌ ಅಂಡ್‌ ರೆಸ್ಟೋರೆಂಟ್‌, ವಾಣಿಜ್ಯ ಮಳಿಗೆಗಳ ಕಸವನ್ನು ಸಂಜೆ ಹೊತ್ತಿನಲ್ಲಿ ಸಂಗ್ರಹಿಸಲಾಗುವುದು’ ಎಂದು ಎಸ್‌ಎಂಪಿ ಮುಖ್ಯಸ್ಥ ಸಲೀಂ ಪಾಷಾ ಸಭೆಗೆ ತಿಳಿಸಿದರು.

‘ವ್ಯವಸ್ಥಿತವಾಗಿ ಯೋಜಿಸಿ ಸಂಗ್ರಹಣೆ ಕಾರ್ಯನಿರ್ವಹಿಸಲಾಗುವುದು. ನಗರಸಭೆ ಸದಸ್ಯರ ವಾಟ್ಸ್‌ಅಪ್‌ ಗುಂಪನ್ನು ರೂಪಿಸಲಾಗುವುದು. ಸಮಸ್ಯೆಗಳಿದ್ದರೆ ಆ ಗ್ರೂಪ್‌ನಲ್ಲಿ ಹಾಕಬಹುದು. ಅದನ್ನು ಪರಿಹರಿಸಲು ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಬಂಡವಾಳ, ಶ್ರಮ, ಮಾರ್ಗದರ್ಶನ, ಕಸ ಸಂಗ್ರಹಣೆ ಹೊಣೆ ಎಲ್ಲವೂ ಎಸ್‌ಎಂಪಿ ಸಂಸ್ಥೆಗೆ ಬಿಟ್ಟಿದ್ದು. ಈಗಿರುವ 7 ಕಸಸಂಗ್ರಹಣೆ ವಾಹನಗಳ ಜತೆಗೆ ಸಂಸ್ಥೆಯ25 ವಾಹನಗಳು ಕಾರ್ಯನಿರ್ವಹಿಸಲಿವೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

‘ಹಸಿ ಮತ್ತು ಒಣ ಕಸವನ್ನು ಮನೆಗಳಲ್ಲೇ ವಿಂಗಡಿಸಲು ಕ್ರಮ ವಹಿಸುವುದು. ಕಸ ಸಂಗ್ರಹಕ್ಕೆ ಮನೆ,ಅಂಗಡಿಗಳವರು ಸಂಸ್ಥೆಗೆ ಸೇವಾ ಶುಲ್ಕ ಕೊಡುವಂತೆ ವ್ಯವಸ್ಥೆ ಮಾಡುವುದು, ಕೈಗಾರಿಕೆ ಮತ್ತು ರಾಸಾಯನಿಕ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆ ಮಾಡುವುದನ್ನು ನಗರಸಭೆ ನಿರ್ವಹಿಸಬೇಕು. ಸಂಸ್ಥೆಗೆ ಪೂರಕ ಸಹಕಾರ ನೀಡಬೇಕು’ ಎಂದರು.

‘ಕಸ ನೀಡಲು, ಸೇವಾ ಶುಲ್ಕ ನೀಡಲು ತಕರಾರು ಮಾಡುವವರಿಗೆ ದಂಡ ವಿಧಿಸಬೇಕು. ಶುಲ್ಕ ರಹಿತ (ಟೊಲ್‌ ಫ್ರಿ) ದೂರವಾಣಿ ವ್ಯವಸ್ಥೆ ಕಲ್ಪಿಸಬೇಕು. ಕಟ್ಟಡ ಅವಶೇಷ, ಮಾಂಸ ತ್ಯಾಜ್ಯ, ವಿಶೇಷ ಸಮಾರಂಭಗಳ(ಮದುವೆ–ನಾಮಕರಣ...) ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಇದಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸಬೇಕು. ಖಾಲಿ ನಿವೇಶನಗಳಲ್ಲಿ ಕಸ ಸುರಿಯುವವರಿಗೆ ನೋಟಿಸ್‌ ನೀಡಿ, ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ಕಸ ಸಂಗ್ರಹ ಟಿಪ್ಪರ್‌ಗಳು ಸಂಚರಿಸಲಾಗದ ಓಣಿಗಳಲ್ಲಿ ತಳ್ಳುಗಾಡಿಗಳ ಮೂಲಕ ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. 2001–02ರಲ್ಲಿ ಕಸ ನಿರ್ವಹಣೆ ಹೊಣೆಯನ್ನು ನಗರದ ಸ್ವಚ್ಛ ಟ್ರಸ್ಟ್‌ ನಿರ್ವಹಿಸುತ್ತಿತ್ತು. ನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ನಿರ್ವಹಿಸಿದರು. ಈಗ ಎಸ್ಎಂಪಿಗೆ ವಹಿಸಲಾಗಿದೆ’ ಎಂದರು.

‘ ಕಸ ಸಂಗ್ರಹ, ವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಿದೆ. ಸಂಸ್ಥೆಯವರು ಕಸ ನಿರ್ವಹಣೆಯನ್ನು ಏಕಾಏಕಿ ಬಿಟ್ಟರೆ ಏನು ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ತಿಳಿಸಬೇಕು’ ಎಂದು ಸದಸ್ಯೆ ಲೀಲಾ ಪ್ರಶ್ನಿಸಿದರು.

‘ಅಧ್ಯಕ್ಷರು, ಉಪಾಧ್ಯಕ್ಷರು, ನಗರಸಭೆ ಆಯುಕ್ತರು, ಸದಸ್ಯರನ್ನು ಒಳಗೊಂಡ ಟಾಸ್ಕ್‌ ಫೋರ್ಸ್‌ ಸಮಿತಿಯೊಂದನ್ನು ರಚಿಸಲಾಗುವುದು. ಮೇಲುಸ್ತುವಾರಿಯನ್ನು ಈ ಸಮಿತಿ ನಿರ್ವಹಿಸಲಿದೆ. ತೊಡಕುಗಳು, ಗೊಂದಲಗಳನ್ನು ನಿವಾರಿಸುವ ಕೆಲಸವನ್ನು ಸಮಿತಿ ಮಾಡಲಿದೆ’ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

‘ಇದೊಂದು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಕಳೆದ ವರ್ಷ ಸುಮಾರು 60 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇದನ್ನು ಹಸಿರು ಮತ್ತು ಸ್ವಚ್ಛ ನಗರವಾಗಿ ಕಾಪಾಡಿಕೊಳ್ಳುವುದು ಎಲ್ಲ ಜವಾಬ್ದಾರಿಯಾಗಿದೆ. ಈ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನೆರವಿನಲ್ಲಿ ನಗರಸಭೆಗೆ ನೀಡಿರುವ ಯಂತ್ರಗಳು ಮೂಲೆಗುಂಪಾಗಿವೆ. ಅವುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಕ್ರಿಶ್ಚಿಯನ್‌ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಜೇಮ್ಸ್‌ ಡಿಸೋಜಾ ಕೋರಿದರು.

‘ಕಸ ವಿಂಗಡಣೆ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಬೇಕು. ಜಾಗೃತಿ ಕಾರ್ಯಕ್ರಮಗಳ ಮೂಲಕ ಮನವರಿಕೆ ಮಾಡಿಕೊಡಬೇಕು’ ಎಂದು ಸದಸ್ಯ ಎಚ್‌.ಡಿ.ತಮ್ಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT